ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಡಾ.ಧನಂಜಯ ಸರ್ಜಿ ಬಿಜೆಪಿ ಸೇರ್ಪಡೆ ನಾಳೆ

ಶಿವಮೊಗ್ಗ ವಿಧಾನಸಭಾ ಕ್ಷೇತ್ರ: ರಾಜಕೀಯ ಊಹಾಪೋಹಗಳಿಗೆ ತೆರೆ
Last Updated 3 ಡಿಸೆಂಬರ್ 2022, 5:59 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಸರ್ಜಿ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕ ಡಾ.ಧನಂಜಯ ಸರ್ಜಿ ಅವರು ಡಿಸೆಂಬರ್ 4ರಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಭಾನುವಾರ ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಡಾ.ಧನಂಜಯ ಸರ್ಜಿ ಬಿಜೆಪಿ ಸೇರಲಿದ್ದಾರೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಡಾ.ಧನಂಜಯ ಸರ್ಜಿ ಬೇಷರತ್ತಾಗಿ ಪಕ್ಷ ಸೇರ್ಪಡೆ ಆಗುತ್ತಿದ್ದಾರೆ. ಅವರು ಪಕ್ಷಕ್ಕೆ ಸೇರುವ ಕಾರ್ಯಕ್ರಮದಲ್ಲಿ
ಶಾಸಕ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಕೂಡ ಪಾಲ್ಗೊಳ್ಳಲಿದ್ದಾರೆ ಎಂದರು.

ಸರ್ಜಿ ಫೌಂಡೇಶನ್ ಮೂಲಕ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿದ್ದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಧೀನದ ವಿಕಾಸ ಟ್ರಸ್ಟ್‌ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದರು. ಬಿಜೆಪಿ ಸೇರ್ಪಡೆ ನಿಟ್ಟಿನಲ್ಲಿ ಡಾ.ಧನಂಜಯ ಸರ್ಜಿ ಕೆಲವು ದಿನಗಳ ಹಿಂದೆ ವಿಕಾಸ ಸಂಸ್ಥೆಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ರಾಜಕೀಯ ಲೆಕ್ಕಾಚಾರ ಉಲ್ಟಾ: ಡಾ.ಧನಂಜಯ ಸರ್ಜಿ ಶಿವಮೊಗ್ಗ ನಗರಕ್ಕೆ ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿ ಇಲ್ಲವೇ ಜೆಡಿಎಸ್‌ನಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಇದರಿಂದ ಚುನಾವಣೆಯಲ್ಲಿ ಬಿಜೆಪಿ ಮತಗಳು ವಿಭಜನೆಯಾಗಿ ಕಾಂಗ್ರೆಸ್ ಗೆಲುವು ಸುಲಭವಾಗಲಿದ್ದು, 2013ರ ಫಲಿತಾಂಶ ಪುನರಾವರ್ತನೆ ಆಗಲಿದೆ ಎಂಬ ಲೆಕ್ಕಾಚಾರ ಆ ಪಕ್ಷದಲ್ಲಿ ಗರಿಗೆದರಿತ್ತು.

ಅದೇ ಕಾರಣಕ್ಕೆ ಈ ಬಾರಿ ಶಿವಮೊಗ್ಗ ನಗರದಿಂದ ಕಾಂಗ್ರೆಸ್‌ ಟಿಕೆಟ್‌ ಪಡೆಯಲು ಭರ್ಜರಿ ಪೈಪೋಟಿ ನಡೆದಿತ್ತು. ಟಿಕೆಟ್ ಕೋರಿ 11 ಮಂದಿ ಹೈಕಮಾಂಡ್‌ಗೆ ಅರ್ಜಿ ಸಲ್ಲಿಸಿದ್ದರು. 2013ರಲ್ಲಿ ಕೆಜೆಪಿಯಿಂದ ರುದ್ರೇಗೌಡ ಸ್ಪರ್ಧಿಸಿದ್ದರಿಂದ ಮತ ವಿಭಜನೆ ಆಗಿ ಬಿಜೆಪಿಯ ಕೆ.ಎಸ್‌. ಈಶ್ವರಪ್ಪ ಸೋತು, ಕಾಂಗ್ರೆಸ್‌ನ ಕೆ.ಬಿ. ಪ್ರಸನ್ನಕುಮಾರ್ ಸುಲಭವಾಗಿ ಗೆಲುವು ಸಾಧಿಸಿದ್ದರು. ಇದು ಕಾಂಗ್ರೆಸ್‌ನಲ್ಲಿ ಉತ್ಸಾಹ ಗರಿಗೆದರಿಸಿತ್ತು. ಈಗ ಡಾ.ಸರ್ಜಿ ಅವರ ಬಿಜೆಪಿ ಸೇರ್ಪಡೆಗೆ ಮುಹೂರ್ತ ನಿಗದಿ ಆಗಿರುವುದು ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿದೆ.

ಸರ್ಜಿಗೆ ಎಂಎಲ್‌ಸಿ ಸ್ಥಾನದ ಭರವಸೆ?

ಧನಂಜಯ ಸರ್ಜಿ ಅಕಸ್ಮಾತ್‌ ಬಿಜೆಪಿ ಹೊರತಾಗಿ ಬೇರೆ ಪಕ್ಷ, ಇಲ್ಲವೇ ಸ್ವತಂತ್ರವಾಗಿ ಸ್ಪರ್ಧಿಸಿದರೆ ಪಕ್ಷಕ್ಕೆ ಹಿನ್ನಡೆ ಆಗಲಿದೆ ಎಂಬುದನ್ನು ಅರಿತು ಜಿಲ್ಲೆಯ ‍ಪಕ್ಷದ ಹಿರಿಯ ನಾಯಕರು ಅವರೊಂದಿಗೆ ಚರ್ಚಿಸಿದ್ದು, ಬಿಜೆಪಿ ಸೇರ್ಪಡೆಗೆ ಮನವೊಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಬೇಕು. ಗುಜರಾತ್ ಮಾದರಿ ಅನುಸರಿಸಿ ವಯಸ್ಸಿನ ಕಾರಣಕ್ಕೆ ಹಾಲಿ ಶಾಸಕರಿಗೆ ಟಿಕೆಟ್ ಕೊಡದಿದ್ದರೆ ಡಾ.ಧನಂಜಯ ಸರ್ಜಿ ಅವರನ್ನೂ ಪರಿಗಣಿಸಲಾಗುವುದು. ಅಕಸ್ಮಾತ್ ಈಶ್ವರಪ್ಪ ಅವರಿಗೇ ಟಿಕೆಟ್ ಅಂತಿಮಗೊಂಡರೆ ಅಥವಾ ಪಕ್ಷದ ಅಧಿಕೃತ ಅಭ್ಯರ್ಥಿ ಯಾರೇ ಆದರೂ ಅವರನ್ನು ಬೆಂಬಲಿಸಿ ಕೆಲಸ ಮಾಡಬೇಕು. 2024ರ ಜೂನ್‌ಗೆ ಹಾಲಿ ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡ ಅವರ ಅವಧಿ ಮುಗಿಯಲಿದೆ. ಆ ಸ್ಥಾನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂಬ ಭರವಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

****

ಕುಟುಂಬದ ನಿರ್ಧಾರದಂತೆ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿಗೆ ಸೇರ್ಪಡೆ ಆಗಲಿದ್ದೇನೆ. ಪಕ್ಷದಲ್ಲಿ ನನ್ನ ಕೆಲಸ ನೋಡಿ ಮುಂದಿನ ದಿನಗಳಲ್ಲಿ ಹಿರಿಯರು ಉತ್ತಮ ಅವಕಾಶ ಕೊಡುವ ವಿಶ್ವಾಸವಿದೆ.

- ಡಾ.ಧನಂಜಯ ಸರ್ಜಿ, ಸರ್ಜಿ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT