ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌.ಕೆ. ಬಸವರಾಜನ್‌ ನೇಮಕ ಬಹಿರಂಗ ಪಡಿಸಿದ ಶಿವಮೂರ್ತಿ ಮುರುಘಾ ಶರಣರು

Last Updated 9 ಮಾರ್ಚ್ 2022, 8:29 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುರುಘಾ ಮಠದ ಪ್ರಗತಿಯ ತೀವ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌ ಅವರನ್ನು ಮಠದ ಆಡಳಿತಾಧಿಕಾರಿ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಗೌರವ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಗ–ದ್ವೇಷಗಳು ಶಾಶ್ವತವಲ್ಲ. ಪರಸ್ಪರ ಪ್ರೀತಿಯಿಂದ ಸಾಧನೆ ಮಾಡಬೇಕಿದೆ. ಮಠವನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಬೇಕಿದೆ. ಮಠದ ಯೋಜನೆಗಳನ್ನು ಪೂರ್ಣಗೊಳಿಸಬೇಕಿದೆ. ಹೀಗಾಗಿ, ಬದಲಾವಣೆ ಅನಿವಾರ್ಯವಾಗಿತ್ತು’ ಎಂದು ಹೇಳಿದರು.

‘ಐತಿಹಾಸಿಕ ಹಿರಿಮೆ, ಚಾರಿತ್ರಿಕ ಹಿನ್ನೆಲೆ ಹೊಂದಿದ ಮಠಕ್ಕೆ ನಾವು 20ನೇ ಪೀಠಾಧಿಪತಿ. ಪ್ರತಿಯೊಬ್ಬ ಪೀಠಾಧಿಪತಿ ತಮ್ಮದೇ ಆದ ವಿಶೇಷ ಕೊಡುಗೆಗಳನ್ನು ಮಠಕ್ಕೆ ಕೊಟ್ಟಿದ್ದಾರೆ. ಉಜ್ವಲ ಇತಿಹಾಸ ಹೊಂದಿದ ಮಠವನ್ನು 21ನೇ ಶತಮಾನದಲ್ಲಿ ನಾವು ಮುನ್ನೆಡೆಸುತ್ತಿದ್ದೇವೆ. ಆಡಳಿತದ ವಿಚಾರದಲ್ಲಿ ಮಠ ರಾಜ್ಯದಲ್ಲಿಯೇ ಹೆಸರುವಾಸಿಯಾಗಿತ್ತು. ಒಂದು ಮೊಳೆಗೂ ಪೀಠಾಧಿಪತಿ ಅನುಮತಿ ಪಡೆಯುವ ವ್ಯವಸ್ಥೆ ಇಲ್ಲಿತ್ತು’ ಎಂದು ಹೇಳಿದರು.

‘15 ವರ್ಷಗಳಿಂದ ಮಠವನ್ನು ಕಟ್ಟಿ ಬೆಳೆಸಿದ್ದೇವೆ. ಮಠದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಪಸರಿಸಿದ್ದೇವೆ. ಭಕ್ತರ ಆಶಯಕ್ಕೆ ಅನುಗುಣವಾಗಿ ಮಠವನ್ನು ಅಭಿವೃದ್ಧಿಪಡಿಸಲಾಗಿದೆ. ಮತ್ತೊಂದು ಕಡೆ ನ್ಯಾಯಾಲಯದಲ್ಲಿ ಕಾನೂನು ಸಮರವೂ ನಡೆಯುತ್ತಿತ್ತು. ಆತಂಕ, ಅನುಮಾನಗಳು ಕಾಡುತ್ತಿದ್ದವು. ನ್ಯಾಯಾಲಯದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಹೆಚ್ಚು ಸಮಯ ವ್ಯಯ ಮಾಡಬೇಕಿತ್ತು. ಇದು ಮಠದ ಪ್ರಗತಿಗೆ ತೊಡಕು ಉಂಟು ಮಾಡಿತು’ ಎಂದು ಹೇಳಿದರು.

‘ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಬದಲಾವಣೆಗೆ ಕೈ ಹಾಕಿದೆವು. ನ್ಯಾಯಾಲಯದ ಪ್ರಕರಣಗಳನ್ನು ಪರಸ್ಪರ ಹಂತ–ಹಂತವಾಗಿ ಹಿಂಪಡೆಯಲಿದ್ದೇವೆ. ಈ ಅವಧಿಯಲ್ಲಿ ಸಾಕಷ್ಟು ನೋವು ಅನುಭವಿಸಿದ್ದೇವೆ. ಮಠದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳಿವೆ. ಈ ಎಲ್ಲ ಯೋಜನೆಗಳೂ ಇನ್ನು ಮುಂದೆ ಸಾಕಾರಗೊಳ್ಳಲಿವೆ. ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂಬುದನ್ನೂ ಬಸವರಾಜನ್‌ ಅವರು ಸ್ಪಷ್ಟಪಡಿಸಿದ್ದಾರೆ’ ಎಂದು ನುಡಿದರು.

ಆದೇಶ ಪಾಲಿಸುವೆ: ಬಸವರಾಜನ್‌

‘ಈ ಹಿಂದೆ ಮಾಡಿದ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಮಠ ಹಾಗೂ ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ. ಪೀಠಾಧಿಪತಿಗಳ ಆದೇಶವನ್ನು ಪಾಲಿಸುವೆ’ ಎಂದು ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಎಸ್‌.ಕೆ. ಬಸವರಾಜನ್‌ ತಿಳಿಸಿದರು.

‘ಒಂದೂವರೆ ದಶಕದಲ್ಲಿ ಮಠ ಸಾಕಷ್ಟು ಬೆಳೆದಿದೆ. ಈ ಅಭಿವೃದ್ಧಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಪ್ರಯತ್ನ ಮಾಡುವೆ. ನಾನು ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಯಲ್ಲ. ಮಠದ ಆಡಳಿತದಲ್ಲಿ ಕುಟುಂಬ ಹಸ್ತಕ್ಷೇಪ ಮಾಡದಂತೆ ಎಚ್ಚರವಹಿಸುವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಆಡಳಿತಾಧಿಕಾರಿಗೆ ವಿಧಿಸಿದ ನಿಬಂಧನೆಗಳು

* ಪ್ರತಿಯೊಂದು ವಿಚಾರವನ್ನು ಪೀಠಾಧೀಶರೊಂದಿಗೆ ಚರ್ಚಿಸಬೇಕು. ಪೀಠಾಧ್ಯಕ್ಷರದ್ದೇ ಅಂತಿಮ ನಿರ್ಧಾರ.

* ಗುಂಪುಗಾರಿಕೆ, ಸ್ವಜನಪಕ್ಷಪಾತಕ್ಕೆ ಅವಕಾಶವಿಲ್ಲ.

* ಆಡಳಿತದಲ್ಲಿ ಕುಟುಂಬ, ಪರಿವಾರ ಹಾಗೂ ಆಪ್ತರು ಹಸ್ತಕ್ಷೇಪ ಮಾಡಬಾರದು.

* ಆಡಳಿತಾಧಿಕಾರಿಯಾಗಿದ್ದ ಅವಧಿಯಲ್ಲಿ ಖರೀದಿಸಿದ ಜಮೀನು, ಕಾವೇರಿ ಸ್ಟೋರ್‌ ಅನ್ನು ಮಠದ ಸುಪರ್ದಿಗೆ ನೀಡಬೇಕು.

* ಮಠ ಹಾಗೂ ಪೀಠಾಧ್ಯಕ್ಷರ ವಿರುದ್ಧ ಷಡ್ಯಂತ್ರ ರೂಪಿಸಬಾರದು. ಪಾರದರ್ಶಕ ಆಡಳಿತ ನೀಡಬೇಕು.

* ಮಠವನ್ನು ರಾಜಕೀಯಕ್ಕೆ ಬಳಸಿಕೊಳ್ಳದೇ, ಪಕ್ಷಾತೀತ ಭಾವನೆ ಹೊಂದಬೇಕು.

* ವೇತನ ನಿರಾಕರಿಸಿದ ಬಸವರಾಜನ್‌ ಅವರಿಗೆ ಆಡಳಿತಾತ್ಮಕ ಖರ್ಚು ನೀಡಲಾಗುವುದು.

* ಮಠದ ಆವರಣದಲ್ಲಿ ಕಚೇರಿ ಒದಗಿಸಲಾಗುವುದು. ಶಾಖಾ ಮಠದ ಸ್ವಾಮೀಜಿಗಳಿಗೆ ಸರಿಯಾಗಿ ಸ್ಪಂದಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT