ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರಿಯೂರು: ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆಗೆ ಆಗ್ರಹ

ಹಿರಿಯೂರು ತಾಲ್ಲೂಕಿನ ದಿಂಡಾವರ ಗ್ರಾಮಸ್ಥರ ಧರಣಿ
Published 26 ಫೆಬ್ರುವರಿ 2024, 15:47 IST
Last Updated 26 ಫೆಬ್ರುವರಿ 2024, 15:47 IST
ಅಕ್ಷರ ಗಾತ್ರ

ಹಿರಿಯೂರು: ಕುಡಿಯುವ ನೀರಿಗೆ ಶಾಶ್ವತ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ತಾಲ್ಲೂಕಿನ ದಿಂಡಾವರ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾಧಿಸುತ್ತದೆ. ಗ್ರಾಮದ ಹೊಸೂರು ಹಾಗೂ ದಿಂಡಾವರ ಗ್ರಾಮದ ಶಾಲೆಗಳಲ್ಲಿ ನೀರಿಲ್ಲದ ಕಾರಣ 15 ದಿನಗಳಿಂದ ಸರಿಯಾಗಿ ಬಿಸಿಯೂಟ ತಯಾರಿಸುತ್ತಿಲ್ಲ. ಕೂಲಿಗೆ ಹೋಗುವುದನ್ನು ಬಿಟ್ಟು ನೀರಿಗಾಗಿ ಖಾಲಿ ಕೊಡ ಹಿಡಿದು ಕಿಲೋ ಮೀಟರ್‌ಗಟ್ಟಲೆ ಅಲೆಯಬೇಕಾದ ಸ್ಥಿತಿ ಇದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿದ್ದಪ್ಪ ಆರೋಪಿಸಿದರು.

‘50 ವರ್ಷಗಳಿಂದ ಕುಡಿಯುವ ನೀರಿಗೆ ಶಾಶ್ವತ ವ್ಯವಸ್ಥೆ ಮಾಡುವಂತೆ ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೆ, ಜನಪ್ರತಿನಿಧಿಗಳು ನೀರಿಗೆ ಬರ ಬಂದಾಗ ಭೇಟಿ ನೀಡಿ ಕೊಳವೆಬಾವಿ ಕೊರೆಯಿಸಿ ಕೊಡುತ್ತಿದ್ದಾರೆ. ಒಂದಿಂಚು, ಅರ್ಧ ಇಂಚು ಬರುವ ನೀರು 10–15 ದಿನಗಳಲ್ಲಿ ಪೂರ್ಣ ಬತ್ತಿ ಹೋಗುತ್ತದೆ. ಹೀಗಾಗಿ ನೀರಿನ ಸಮಸ್ಯೆ ಶಾಶ್ವತವಾಗಿ ಉಳಿದಿದೆ’ ಎಂದು ಗ್ರಾಮದ ಪ್ರಗತಿಪರ ರೈತ ಚಂದ್ರಗಿರಿ ತಿಳಿಸಿದರು.

‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 23 ಹಳ್ಳಿಗಳಿವೆ. ಎಲ್ಲಾ ಕಡೆಯೂ ಇದೇ ಸಮಸ್ಯೆ ಇದೆ. ನಮ್ಮೂರಿನಿಂದ ಗಾಯತ್ರಿ ಜಲಾಶಯ ಕೇವಲ 5–6 ಕಿ.ಮೀ. ದೂರದಲ್ಲಿದೆ. ವಾಣಿವಿಲಾಸ ಜಲಾಶಯದ ಬಲನಾಲೆ 12 ಕಿ.ಮೀ. ದೂರದಲ್ಲಿದೆ. ಇವೆರಡರಲ್ಲಿ ಯಾವುದಾದರೂ ಒಂದರಿಂದ ಕುಡಿಯುವ ನೀರಿಗೆ ಶಾಶ್ವತ ವ್ಯವಸ್ಥೆ ಮಾಡಬೇಕು ಎಂಬುದು ನಮ್ಮ ಬೇಡಿಕೆ. ಟ್ಯಾಂಕರ್ ನೀರು ನಮಗೆ ಬೇಡ. ಅದರಿಂದ ನಮಗೆ ಅಗತ್ಯ ಇರುವಷ್ಟು ನೀರು ಸಿಗದು. ಶಾಶ್ವತ ವ್ಯವಸ್ಥೆ ಆಗುವವರೆಗೆ ಹೋರಾಟ ನಡೆಸುತ್ತೇವೆ’ ಎಂದು ಚಂದ್ರಗಿರಿ ಎಚ್ಚರಿಸಿದರು.

ತಕ್ಷಣಕ್ಕೆ ಗಾಯತ್ರಿ ಅಥವಾ ವಾಣಿವಿಲಾಸದ ನೀರು ಕೊಡಲು ಆಗದು. ಶಾಶ್ವತ ನೀರಿನ ವ್ಯವಸ್ಥೆ ಆಗಲು ಎರಡು ವರ್ಷ ಬೇಕು. ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ 16 ಕೊಳವೆಬಾವಿ ಕೊರೆಯಿಸಲಾಗಿದೆ. ರೈತರ ಪಂಪ್‌ಸೆಟ್‌ಗಳಿಂದ ಬಾಡಿಗೆಗೆ ನೀರು ಪಡೆದು ವಿತರಿಸುತ್ತಿದ್ದೇವೆ. ದಿಂಡಾವರ ಗ್ರಾಮದಲ್ಲಿ 4 ಕೊಳವೆ ಬಾವಿ ಕೊರೆಯಿಸಿದ್ದು, ಒಂದರಲ್ಲಿ ಅರ್ಧ ಇಂಚು, ಮತ್ತೊಂದರಲ್ಲಿ ಒಂದಿಂಚು ನೀರು ಬರುತ್ತಿದ್ದು, ಅದು ಸಾಕಾಗುತ್ತಿಲ್ಲ. ಇಡೀ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿತದಿಂದ ನೀರು ಸಿಗುತ್ತಿಲ್ಲ. ಆದ ಪ್ರಯುಕ್ತ ಟ್ಯಾಂಕರ್ ಮೂಲಕ ತಕ್ಷಣ ನೀರು ಪೂರೈಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಇಒ ಸತೀಶ್ ಕುಮಾರ್ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT