ಶುಕ್ರವಾರ, ಜುಲೈ 1, 2022
28 °C

ಪಠ್ಯದಿಂದ ಹೆಡಗೇವಾರ್ ಭಾಷಣ ಕೈಬಿಡಿ: ಕ್ಯಾಂಪಸ್‌ ಫ್ರಂಟ್‌ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ಕನ್ನಡ ಪಠ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಕೇಶವ್ ಬಲಿರಾಮ್‌ ಹೆಡಗೇವಾರ್‌ ಅವರ ಭಾಷಣವನ್ನು ಸೇರ್ಪಡೆ ಮಾಡಿದ್ದು, ಕೂಡಲೇ ಇದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಜಿಲ್ಲಾ ಘಟಕ ಶುಕ್ರವಾರ ಪ್ರತಿಭಟನೆ ನಡೆಸಿತು.

ನಗರದ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು, ‘ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ‘ನಿಜವಾದ ಆದರ್ಶ ಪುರುಷ ಯಾರಾಗಬೇಕು? ಎಂಬ ತಲೆಬರಹದಲ್ಲಿ ಹೆಡಗೇವಾರ್‌ ಭಾಷಣ ಪಠ್ಯವಾಗಿ ಸೇರಿಸಿದೆ. ಇದು ಶಿಕ್ಷಣದ ಕೇಸರೀಕರಣದ ಮುಂದುವರಿದ ಭಾಗವಾಗಿದೆ. ಇದನ್ನು ಕೂಡಲೇ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ಪಠ್ಯಪುಸ್ತಕದ ಪಠ್ಯಕ್ರಮವನ್ನು ಬ್ರಾಹ್ಮಣೀಕರಣಗೊಳಿಸುವ ಗುರಿಯೊಂದಿಗೆ ಸಂಘದಲ್ಲಿ ಪಳಗಿರುವ ರೋಹಿತ್ ಚಕ್ರತೀರ್ಥ ಅಂತಹವರನ್ನು ಪರಿಷ್ಕರಣಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ದೇಶದಲ್ಲಿ ಹಲವು ಬಾರಿ ನಿಷೇಧಿಸಲ್ಪಟ್ಟ ಭಯೋತ್ಪಾದನಾ ಸಂಘಟನೆಯಾದ ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡಗೇವಾರ್‌ ಹೇಗೆ ಆದರ್ಶ ಪುರುಷನಾಗಲು ಸಾಧ್ಯ ಎಂದು ಪ್ರಶ್ನಿಸಿದರು.

ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ತನ್ನದೇ ಆದ ಹಿಂದೂ ರಾಷ್ಟ್ರದ ಕಲ್ಪನೆಯೊಂದಿಗೆ ಜನರ ದಾರಿ ತಪ್ಪಿಸಿದ ವ್ಯಕ್ತಿಯ ಭಾಷಣವನ್ನು ಪಠ್ಯಕ್ರಮದಲ್ಲಿ ಸೇರಿಸಿರುವುದು ಶಿಕ್ಷಣದಲ್ಲಿ ಹಿಂದುತ್ವ ಹೇರಿಕೆಯ ಭಾಗ.

ಕೂಡಲೇ ಆ ಪಠ್ಯವನ್ನು ತೆಗೆದು ಹಾಕಿ ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯಗಳನ್ನು ಕಲಿಸಬೇಕು. ಸಮಾಜದಲ್ಲಿ ಸೌಹಾರ್ದ, ಸಾಮರಸ್ಯಕ್ಕೆ ಒತ್ತುಕೊಡುವ ನಿಟ್ಟಿನಲ್ಲಿ ವಿದ್ಯೆಯನ್ನು ನೀಡಬೇಕು. ಈ ಬಗ್ಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು