ಗುರುವಾರ , ಸೆಪ್ಟೆಂಬರ್ 23, 2021
21 °C

‘ಶಿಕ್ಷಣದಿಂದ ಸಮಸ್ಯೆಗೆ ಪರಿಹಾರ ಸಾಧ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಣಿವಿಲಾಸಪುರ (ಹಿರಿಯೂರು): ‘ದೇವಾಲಯಗಳ ಮುಂದೆ ನಿಲ್ಲುವಂತೆ ಶಾಲೆಗಳ ಮುಂದೆ ಶಿಕ್ಷಣ ಪಡೆಯಲು ಜನ ಮುಂದಾದರೆ ಶೇ 100 ಸಾಕ್ಷರತೆ ಸಾಧ್ಯ’ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕಿನ ವಾಣಿವಿಲಾಸಪುರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಾಕ್ಷರತಾ ದಿನಾಚರಣೆ ಹಾಗೂ ಅಂತರರಾಷ್ಟ್ರೀಯ ಸಾಕ್ಷರತಾ ಸಪ್ತಾಹದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಸಾಕ್ಷರತಾ ಪ್ರಮಾಣ ಹೆಚ್ಚಳಕ್ಕೆ ಶಿಕ್ಷಕರು, ಸಾಕ್ಷರತಾ ಕಾರ್ಯಕರ್ತರು ಹೆಚ್ಚಿನ ಶ್ರಮವಹಿಸಬೇಕು. ವಯಸ್ಕರ ಶಿಕ್ಷಣ, ಕಡ್ಡಾಯ ಶಿಕ್ಷಣ ಮೊದಲಾದ ಯೋಜನೆಗಳಿದ್ದರೂ ಅನಕ್ಷರಸ್ಥರು ಇರುವುದು ಬೇಸರದ ಸಂಗತಿ. ಶಿಕ್ಷಣದಿಂದ ಮಾತ್ರ ದೇಶದ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆಗೆ ಜಿಲ್ಲಾ ಪಂಚಾಯಿತಿಯಿಂದ ಜೊತೆಗೆ ಸಿಎಸ್‌ಆರ್ ಫಂಡ್‌ನಿಂದ ಅನುದಾನ ಕೊಡಿಸುತ್ತೇನೆ’ ಎಂದು ಅವರು ಭರವಸೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್, ‘ತಾಲ್ಲೂಕಿನಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೋವಿಡ್ ಸಂಕಷ್ಟದಿಂದ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗಿದೆ. ಶಿಕ್ಷಕರು, ಪೋಷಕರು, ಲೋಕ ಶಿಕ್ಷಣ ಸಮಿತಿಯವರು ಸಾಕ್ಷರತೆ ಪ್ರಮಾಣ ಹೆಚ್ಚಿಸಬೇಕು’ ಎಂದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಪಿ.ಎನ್. ಮಂಜುಳ ಮಾತನಾಡಿದರು.

ಜಿಲ್ಲಾ ಉತ್ತಮ ಶಿಕ್ಷಕ ಬಿ.ಕೆ. ಹನುಮಂತಪ್ಪ, ರಾಜ್ಯ ಪ್ರಶಸ್ತಿ ಪುರಸ್ಕೃತ ಕೆ.ಜಿ. ಹನುಮಂತರಾಯ, ಜಿಲ್ಲಾ ವಿಶೇಷ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬಿ.ಕೆ. ಸತೀಶ್ ಹಾಗೂ ನೇಷನ್ ಬಿಲ್ಡರ್ ಅವಾರ್ಡ್ ಪಡೆದ ಶಂಕರ್ ನಾಯ್ಕ್ ಹಾಗೂ ತಾಲ್ಲೂಕಿನಲ್ಲಿ ವಿಶೇಷವಾಗಿ ಕಾರ್ಯನಿರ್ವಹಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಆಯ್ದ ಶಾಲೆಗಳಿಗೆ ಪುಸ್ತಕಗಳನ್ನು ನೀಡಲಾಯಿತು.

ಡಯಟ್ ಉಪನ್ಯಾಸಕ ನಾಗರಾಜ್, ಕಾರ್ಯಕ್ರಮ ಸಹಾಯಕ ಮಂಜುನಾಥ್, ಮುಖ್ಯಶಿಕ್ಷಕಿ ಶಿವಲಿಂಗಮ್ಮ, ಈಶಣ್ಣ, ತಿಮ್ಮಪ್ಪ, ಗುರುಸಿದ್ದಮೂರ್ತಿ, ರಂಗಸ್ವಾಮಿ, ಶಾಂತವೀರಣ್ಣ, ಶ್ರೀಧರ್, ಚರಣ್ ರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೃತಿ, ಸದಸ್ಯರಾದ ತಂಗವೇಲು, ಅಬ್ದುಲ್ಲಾ, ಕೆಂಚಪ್ಪ, ಪ್ರಕಾಶ್, ತಿಪ್ಪೇಸ್ವಾಮಿ, ವೀರಭದ್ರಪ್ಪ, ಮುಬಾರಕ್ ಇದ್ದರು.

ಪುರುಷೋತ್ತಮ್ ಪ್ರಾರ್ಥಿಸಿದರು. ಚರಣರಾಜ್ ಸ್ವಾಗತಿಸಿದರು. ಮುಖ್ಯಶಿಕ್ಷಕ ತಿಮ್ಮಪ್ಪ ವಂದಿಸಿದರು. ಶ್ರೀಧರ್ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.