ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲು ಗೆಲುವಿನ ಲೆಕ್ಕಾಚಾರ ಜೋರು

ಲೋಕಸಭಾ ಚುನಾವಣೆ, ಮತಯಂತ್ರ ಸೇರಿದ ಮತದಾರರ ‘ತೀರ್ಪು’
Published 28 ಏಪ್ರಿಲ್ 2024, 6:07 IST
Last Updated 28 ಏಪ್ರಿಲ್ 2024, 6:07 IST
ಅಕ್ಷರ ಗಾತ್ರ

ಚಿತ್ರದುರ್ಗ: ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದ್ದು, ಅಭ್ಯರ್ಥಿಗಳ ಸೋಲು– ಗೆಲುವಿನ ಲೆಕ್ಕಾಚಾರ ಕ್ಷೇತ್ರದಲ್ಲಿ ಜೋರಾಗಿದೆ. ಫಲಿತಾಂಶದ ಬಗೆಗೆ ಕುತೂಹಲ ಮೂಡಿದ್ದು, ರಾಜಕೀಯ ಪಕ್ಷಗಳು ಹಲವು ಆಯಾಮಗಳಲ್ಲಿ ವಿಶ್ಲೇಷಣೆ ಮಾಡುತ್ತಿವೆ.

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರ ತುಮಕೂರು ಜಿಲ್ಲೆಯಲ್ಲಿಯೂ ಹರಡಿಕೊಂಡಿದೆ. ಚಿತ್ರದುರ್ಗ ಸೇರಿ ರಾಜ್ಯದ 14 ಕ್ಷೇತ್ರಗಳಿಗೆ ಏ. 26ರಂದು ಮತದಾನವಾಗಿದೆ. ಮತದಾನದ ಪ್ರಮಾಣ, ಮತಗಟ್ಟೆ ಸಮೀಪ ಮತದಾರರು ನೀಡಿದ ಅಭಿಪ್ರಾಯ, ರಾಜಕೀಯ ಪಕ್ಷಗಳ ಕಾರ್ಯಕರ್ತರ ವರದಿ ಆಧರಿಸಿ ವಿಶ್ಲೇಷಣೆಗಳು ನಡೆಯುತ್ತಿವೆ.

ಕ್ಷೇತ್ರದಲ್ಲಿ ಸ್ಪರ್ಧಿಸಿದ 20 ಅಭ್ಯರ್ಥಿಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ಮತ್ತು ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ನಡುವೆ ಗೆಲ್ಲುವವರು ಯಾರು ಎಂಬ ಕುತೂಹಲ ಕೆರಳಿದೆ. ಎರಡು ಪಕ್ಷಗಳ ನಾಯಕರಲ್ಲಿ ಮಂದಹಾಸ ಮೂಡಿದ್ದು, ಗೆಲುವು ತಮ್ಮದೇ ಎಂಬ ಬಲವಾದ ನಂಬಿಕೆಯಲ್ಲಿದ್ದಾರೆ. ಮತ ಎಣಿಕೆ ಜೂನ್‌ 4ರಂದು ನಡೆಯಲಿದ್ದು, ತಿಂಗಳಿಗೂ ಹೆಚ್ಚು ಕಾಲ ಕಾಯುವುದು ಮತದಾರರಿಗೂ ಕಷ್ಟವಾಗಿದೆ.

‘ಕೈ’ ಪಾಳೆಯದಲ್ಲಿ ‘ಗ್ಯಾರಂಟಿ’ ಪುಳಕ: ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ‘ಗ್ಯಾರಂಟಿ’ಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಮತಯಾಚನೆ ಮಾಡಿತ್ತು. ಪ್ರಣಾಳಿಕೆಯಲ್ಲಿ ಘೋಷಿಸಿದ ಹೊಸ ಗ್ಯಾರಂಟಿಗಳನ್ನು ಪ್ರಚುರಪಡಿಸಿ ಮತ ಕೇಳಿತ್ತು. ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಂದಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ‘ತಾರಾ ಪ್ರಚಾರಕಿ’ ಪ್ರಿಯಾಂಕಾ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಗ್ಯಾರಂಟಿ’ಗಳನ್ನು ಬಲವಾಗಿ ಪ್ರತಿಪಾದಿಸಿದ್ದರು. ಈ ‘ಗ್ಯಾರಂಟಿ’ಗಳು ಎಷ್ಟರ ಮಟ್ಟಿಗೆ ಮತಗಳಾಗಿ ಪರಿವರ್ತನೆಯಾಗಿವೆ ಎಂಬ ಲೆಕ್ಕಾಚಾರದಲ್ಲಿ ‘ಕೈ’ ಪಡೆ ಮುಳುಗಿದೆ.

‘ಗೃಹಲಕ್ಷ್ಮಿ’ ಯೋಜನೆಯ ₹ 2,000 ನಗದು ಕ್ಷೇತ್ರ ವ್ಯಾಪ್ತಿಯ ಫಲಾನುಭವಿಗಳಿಗೆ ವಾರದ ಹಿಂದೆಯಷ್ಟೇ ತಲುಪಿದೆ. ಕಳೆದ ಎರಡು ತಿಂಗಳ ನೆರವು ಒಮ್ಮೆಗೆ ಬ್ಯಾಂಕ್‌ ಖಾತೆಗೆ ಜಮಾ ಆಗಿದ್ದರಿಂದ ಕಾಂಗ್ರೆಸ್‌ ಪಾಳೆಯ ಪುಳಕಗೊಂಡಿತ್ತು. ಮತಗಟ್ಟೆ ಎದುರು ಸಾಲುಗಟ್ಟಿ ನಿಂತಿದ್ದ ಮಹಿಳಾ ಮತದಾರರು ‘ಕೈ’ ಬಿಟ್ಟಿಲ್ಲ ಎಂಬುದು ಕಾಂಗ್ರೆಸ್‌ ನಂಬಿಕೆ.

ಮೋದಿ ನಾಮದ ಮೇಲೆ ಬಿಜೆಪಿ ವಿಶ್ವಾಸ: ಪ್ರಧಾನಿ ನರೇಂದ್ರ ಮೋದಿ ಅಲೆ ಮತದಾರರನ್ನು ಪ್ರಭಾವಿಸಿದೆ ಎಂಬುದು ಬಿಜೆಪಿಯ ಬಲವಾದ ನಂಬಿಕೆ. ‘ದೇಶಕ್ಕಾಗಿ ಮತದಾರರು ಹಕ್ಕು ಚಲಾಯಿಸಿದ್ದಾರೆ’ ಎಂದು ಕೇಸರಿ ಪಡೆ ವಿಶ್ಲೇಷಣೆ ಮಾಡುತ್ತಿದೆ. ಕ್ಷೇತ್ರದ ಅಭ್ಯರ್ಥಿ ಕೂಡ ಮೋದಿ ನಾಮ ಜಪ ಮಾಡಿ ಮತಯಾಚಿಸಿದ್ದರು. ಯುವ ಸಮೂಹ, ರೈತರು, ಪುರುಷರು, ಹೊಸ ಮತದಾರರು ಬೆಂಬಲಿಸಿದ್ದಾರೆ ಎಂದೇ ಬಿಜೆಪಿ ಪ್ರತಿಪಾದಿಸುತ್ತಿದೆ.

ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಇತ್ತೀಚಿಗೆ ಪಾವತಿಯಾಗಿದೆ. ‘ಜಿಲ್ಲೆಯ ಸಾವಿರಾರು ರೈತ ಕುಟುಂಬಗಳಿಗೆ ಸಿಕ್ಕಿರುವ ವಿಮೆ ಪರಿಹಾರವು ಮತಗಳಾಗಿ ಪರಿವರ್ತನೆಯಾಗಿವೆ’ ಎಂಬುದು ಬಿಜೆಪಿ ವಾದ. ಬೆಳೆ ವಿಮೆ ಪಡೆದ ರೈತ ಕುಟುಂಬ, ಕಿಸಾನ್‌ ಸಮ್ಮಾನ್‌ ಯೋಜನೆಯ ಫಲಾನುಭವಿಗಳು ಕಮಲ ಅರಳುವಂತೆ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಈ ಲೆಕ್ಕಾಚಾರಗಳಲ್ಲಿ ಯಾವುದು ಸರಿ ಎಂಬುದು ಮತ ಎಣಿಕೆಯ ಬಳಿಕವಷ್ಟೇ ಖಚಿತವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT