ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ ಪರಿಷ್ಕರಣೆಗೆ ಸಲ್ಲಿಸುವ ಆನ್‌ಲೈನ್‌ ಅರ್ಜಿಗಳೇ ಹೆಚ್ಚು ತಿರಸ್ಕೃತ

ಮತದಾರರ ಪಟ್ಟಿ ಪರಿಷ್ಕರಣೆ; ಚುನಾವಣಾ ವೀಕ್ಷಕರ ಸಭೆ
Last Updated 4 ಜನವರಿ 2021, 11:48 IST
ಅಕ್ಷರ ಗಾತ್ರ

ಚಿತ್ರದುರ್ಗ: ಮತದಾರರ ಪಟ್ಟಿ ಪರಿಷ್ಕರಣೆಗೆ ಸಲ್ಲಿಕೆಯಾಗುವ ಅರ್ಜಿಗಳಲ್ಲಿ ದಾಖಲೆಯ ಕೊರತೆಯಿಂದ ಆನ್‌ಲೈನ್‌ ಅರ್ಜಿಗಳು ಹೆಚ್ಚಾಗಿ ತಿರಸ್ಕೃತಗೊಳ್ಳುತ್ತಿವೆ.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪರಿಶೀಲನಾ ಸಭೆಯಲ್ಲಿ ಈ ವಿಚಾರ ಬಹಿರಂಗವಾಯಿತು.

‘ಆನ್‌ಲೈನ್‌ ಮೂಲಕ ಸಲ್ಲಿಕೆಯಾಗುವ ಅರ್ಜಿಗಳಿಗೆ ಸರಿಯಾದ ದಾಖಲೆ ಇರುವುದಿಲ್ಲ. ಹೀಗಾಗಿ, ಆನ್‌ಲೈನ್‌ ಅರ್ಜಿಗಳೇ ಹೆಚ್ಚಾಗಿ ತಿರಸ್ಕೃತಗೊಳ್ಳುತ್ತಿವೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಸಂಗಪ್ಪ ಅವರು ಮತದಾರರ ಪಟ್ಟಿ ವೀಕ್ಷಕರಾದ ಡಾ.ಶಮ್ಲಾ ಇಕ್ಬಾಲ್ ಅವರಿಗೆ ವಿವರಣೆ ನೀಡಿದರು.

‘ಮತದಾರರ ಪಟ್ಟಿಗೆ ಪರಿಷ್ಕರಣೆ ಸಂಬಂಧ ಸಲ್ಲಿಕೆಯಾಗುವ ಆನ್‍ಲೈನ್ ಹಾಗೂ ಆಪ್‍ಲೈನ್ ಅರ್ಜಿಗಳನ್ನು ತಿರಸ್ಕರಿಸುವುದಕ್ಕೂ ಮುನ್ನ ಸಕಾರಣ ನೀಡಬೇಕು. ಸಂಬಂಧಪಟ್ಟವರಿಗೆ ನೋಟಿಸ್‌ ನೀಡಿ ವಿವರಣೆ ಪಡೆಯಬೇಕು. ಬಳಿಕ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಬೇಕು’ ಎಂದು ತಾಕೀತು ಮಾಡಿದರು.

‘ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ದೂರು ಬಂದಿಲ್ಲ. ಮತದಾರರ ಪಟ್ಟಿ ದೋಷರಹಿತವಾಗಿದ್ದರೆ ಚುನಾವಣೆ ಪಾರದರ್ಶಕವಾಗಿ ನಡೆಯುತ್ತದೆ. ಮತದಾನದ ಸಂದರ್ಭದಲ್ಲಿ ಯಾವುದೇ ದೂರುಗಳು ಬಾರದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ’ ಎಂದು ಸೂಚನೆ ನೀಡಿದರು.

‘ಮತದಾರರ ಪಟ್ಟಿಯ ನೋಂದಣಿ ಹಾಗೂ ಮತದಾರರ ಹೆಸರು ಕೈಬಿಡುವ ಮುನ್ನ ಆಲೋಚಿಸಬೇಕು. ಸಂಬಂಧಿಸಿದ ದಾಖಲೆಗಳನ್ನು ಕಲೆಹಾಕಿ ಕ್ರಮ ಕೈಗೊಳ್ಳಬೇಕು. ಪರಿಶೀಲನೆಯ ಸಂದರ್ಭದಲ್ಲಿ ಈ ದಾಖಲೆಗಳು ಲಭ್ಯವಾಗಬೇಕು’ ಎಂದು ಹೇಳಿದರು. ಮತದಾರರ ಪಟ್ಟಿಗೆ ಹೆಸರು ಸೇರಿಸುವಂತೆ ಯುವ ಮತದಾರರು ಸಲ್ಲಿಸುವ ಅರ್ಜಿಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದರು.

ಮತದಾರರ ನೋಂದಣಿ ಕುಸಿತ

ಕೊರೊನಾ ಸೋಂಕು ಕಾಣಿಸಿಕೊಂಡು ಕಾಲೇಜುಗಳು ಹಲವು ತಿಂಗಳು ಮುಚ್ಚಿದ್ದರಿಂದ ಯುವ ಮತದಾರರ ನೋಂದಣಿಯಲ್ಲಿ ಕುಸಿತ ಕಂಡುಬಂದಿದೆ.

‘ನವೆಂಬರ್‌ನಲ್ಲಿ ಹೊರಡಿಸಿದ ಕರಡು ಮತದಾರ ಪಟ್ಟಿಯಂತೆ ಜಿಲ್ಲೆಯಲ್ಲಿ 13,61,973 ಮತದಾರರಿದ್ದಾರೆ. ಯುವ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಲು ಮಿಂಚಿನ ನೋಂದಣಿ ಅಭಿಯಾನ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಉಪವಿಭಾಗಾಧಿಕಾರಿ ಎಲ್‌.ನಾಗರಾಜ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಧುಸೂದನ್, ತಹಶೀಲ್ದಾರ್‌ ವೆಂಕಟೇಶಯ್ಯ, ಸತ್ಯನಾರಾಯಣ, ಜಿಲ್ಲಾ ಅಂವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಪೌರಾಯುಕ್ತ ಜೆ.ಟಿ.ಹನುಮಂತರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT