ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಆನೆ ಪತ್ತೆಗೆ 'ಡ್ರೋಣ್‌' ಕಾರ್ಯಾಚರಣೆ

ಹಿರಿಯೂರು ತಾಲ್ಲೂಕಿನ ಹಳ್ಳಿಗಳಲ್ಲೂ ಕಟ್ಟೆಚ್ಚರ
Last Updated 7 ಡಿಸೆಂಬರ್ 2019, 9:43 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ಕೆಲ ಹಳ್ಳಿಗಳಲ್ಲಿ ಹೆಜ್ಜೆ ಗುರುತು ಉಳಿಸಿದ ಆನೆ ಶುಕ್ರವಾರವೂ ಪತ್ತೆಯಾಗಿಲ್ಲ. ಗಜರಾಜನ ‍ಪತ್ತೆಗೆ ಅರಣ್ಯ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆ ಮುಂದುವರಿದಿದ್ದು, ಡ್ರೋಣ್‌ ನೆರವು ಪಡೆಯಲಾಗಿದೆ.

ಜೋಗಿಮಟ್ಟಿ ವನ್ಯಧಾಮದಲ್ಲಿ ಸೊಪ್ಪು ಮುರಿದು ತಿಂದ ಕುರುಹು ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಕ್ಕಿದೆ. ತಾಲ್ಲೂಕಿನ ಕುರುಮರಡಿ ಕೆರೆವರೆಗೂ ಹೆಜ್ಜೆಗುರುತು ಸಿಕ್ಕಿವೆ. ಗುರುವಾರ ರಾತ್ರಿ ಅಂದಾಜು 15 ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸಿದ ಸಾಧ್ಯತೆ ಇದೆ.

ಅರಣ್ಯ ಇಲಾಖೆಯ ಸಿಬ್ಬಂದಿ ಎರಡು ದಿನಗಳಿಂದ ಆನೆಗೆ ಹುಡುಕಾಟ ನಡೆಸುತ್ತಿದ್ದಾರೆ. ಹೆಜ್ಜೆಗುರುತುಗಳ ಆಧಾರದ ಮೇರೆಗೆ ಜೋಗಿಮಟ್ಟಿಯಲ್ಲಿದೆ ಎಂದು ಅಂದಾಜಿಸಲಾಗಿತ್ತು. ಗುರುವಾರ ರಾತ್ರಿ ಅಲ್ಲಿಂದ ಹೊರಟ ಆನೆ, ಹಿರಿಯೂರು ತಾಲ್ಲೂಕಿನ ಗಡಿಭಾಗದವರೆಗೆ ಸಂಚರಿಸಿದೆ. ಅಲ್ಲಿಂದ ಮುಂದಕ್ಕೆ ಯಾವುದೇ ಕುರುಹು ಸಿಕ್ಕಿಲ್ಲ. ಜೋಗಿಮಟ್ಟಿಯ ಗೋಡೆಕಣಿವೆ ಎಂಬಲ್ಲಿ ಆಲದ ಮರದ ಸೊಪ್ಪನ್ನು ಆನೆ ಮುರಿದು ತಿಂದಿದೆ.

ವನ್ಯಜೀವಿ ಪ್ರೇಮಿ ರಘು ಎಂಬುವರು ಅರಣ್ಯ ಇಲಾಖೆಗೆ ಡ್ರೋಣ್‌ ಒದಗಿಸಿದ್ದಾರೆ. ಡ್ರೋಣ್‌ ನೆರವಿನಿಂದ ಬೆಟ್ಟದ ಪ್ರದೇಶಗಳನ್ನು ಪರಿಶೀಲಿಸಲಾಗಿದೆ. ಕ್ಯಾಮೆರಾ ಕಣ್ಣಿಗೆ ಇಡೀ ದಿನ ಆನೆ ಸೆರೆಸಿಕ್ಕಿಲ್ಲ. ನೀರು ಅರಸಿ ಬರುವ ಸಾಧ್ಯತೆ ಇರುವುದರಿಂದ ಚಿಕ್ಕಸಿದ್ದವ್ವನಹಳ್ಳಿ ಕೆರೆ ಬಳಿಯೂ ಸಿಬ್ಬಂದಿ ಪರಿಶೀಲಿಸಿದ್ದಾರೆ.

ಸಾಮಾನ್ಯವಾಗಿ ಆನೆ ದಿನಕ್ಕೆ 40 ಕಿ.ಮೀ. ಸಂಚರಿಸುತ್ತದೆ. ಆದರೆ, ಗುರುವಾರ ರಾತ್ರಿ ಅದು 15 ಕಿ.ಮೀ ವ್ಯಾಪ್ತಿಯಲ್ಲಿ ಮಾತ್ರ ಸುತ್ತಾಡಿದೆ. ಹೀಗಾಗಿ, ಆನೆಗೆ ವಯಸ್ಸಾಗಿರಬಹುದು ಅಥವಾ ಆತಂಕಗೊಂಡಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

‘ಆನೆ ಶುಕ್ರವಾರ ರಾತ್ರಿ ಮತ್ತೆ ಸಂಚರಿಸಲಿದೆ. ಬುಕಾಪಟ್ಟಣದ ಕಡೆಗೆ ಸಾಗಿದರೆ ಆನೆ ಕಾರಿಡಾರ್‌ ಸಿಗಲಿದೆ. ಅದು ಸುರಕ್ಷಿತವಾಗಿ ಅಭಯಾರಣ್ಯ ತಲುಪಲಿದೆ. ಇಲ್ಲದೇ ಇದ್ದರೆ ಹಿರಿಯೂರು ತಾಲ್ಲೂಕಿನ ಹಳ್ಳಿಗಳಲ್ಲಿ ಕಾಣಿಸಿಕೊಳ್ಳಲಾಗಿದೆ. ಹೀಗಾಗಿ, ಗಡಿಭಾಗದ ಕೆಲ ಹಳ್ಳಿಗಳಲ್ಲಿ ಕಟ್ಟೆಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಹೊಳಲ್ಕೆರೆ ತಾಲ್ಲೂಕಿನಲ್ಲಿ ಕಾಣಿಸಿಕೊಂಡಿದ್ದ ಆನೆ ಜೋಗಿಮಟ್ಟಿ ಬೆಟ್ಟದ ಸಾಲು ಹೊಕ್ಕಿತ್ತು. ತೋಟದ ಬೇಲಿಗಳನ್ನು ಮುರಿದು, ಜನರಲ್ಲಿ ಭೀತಿ ಸೃಷ್ಟಿಸಿತ್ತು. ಹಿಂಡಿನಿಂದ ಬೇರ್ಪಟ್ಟು ಒಂಟಿಯಾಗಿರುವ ಆನೆ ಮುಂದಕ್ಕೆ ಸಾಗಬೇಕಿತ್ತು. ಎರಡು ದಿನಗಳಿಂದ ಜೋಗಿಮಟ್ಟಿ ಸಮೀಪವೇ ಇರುವುದು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಚಿಂತೆಗೀಡು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT