ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆನಾಡು ಪ್ರವೇಶಿಸಿದ ಕಾಡಾನೆ

Last Updated 14 ಫೆಬ್ರುವರಿ 2020, 12:48 IST
ಅಕ್ಷರ ಗಾತ್ರ

ಚಿತ್ರದುರ್ಗ: ಚನ್ನಗಿರಿ ತಾಲ್ಲೂಕಿನಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಶುಕ್ರವಾರ ಚಿತ್ರದುರ್ಗ ಜಿಲ್ಲೆ ಪ್ರವೇಶಿಸಿದ್ದು, ಹೊಳಲ್ಕೆರೆ ತಾಲ್ಲೂಕಿನ ಹಿರೇಕಂಡವಾಡಿ ಗ್ರಾಮ ಸಮೀಪದ ಅರಣ್ಯದಲ್ಲಿ ಪ್ರತ್ಯಕ್ಷವಾಗಿದೆ.

ಆನೆಯನ್ನು ಭದ್ರಾ ಅಭಯಾರಣ್ಯದ ಕಾರಿಡಾರ್‌ಗೆ ಮರಳಿಲು ಅರಣ್ಯ ಇಲಾಖೆ ಮುಂದಾಗಿದೆ. ರಾತ್ರಿ ವೇಳೆಯ ಚಲನವಲನ ಗಮನಿಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ.

ಸಂತೇಬೆನ್ನೂರು ಸಮೀಪದ ಗ್ರಾಮಗಳಲ್ಲಿ ಸುತ್ತಾಡಿದ ಆನೆ ಗುರುವಾರ ರಾತ್ರಿ ಚಿತ್ರದುರ್ಗ ಜಿಲ್ಲೆಯತ್ತ ಬಂದಿರುವ ಸಾಧ್ಯತೆ ಇದೆ. ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಸಮೀಪದ ಜಮೀನುಗಳಲ್ಲಿ ಶುಕ್ರವಾರ ನಸುಕಿನಲ್ಲಿ ಹೆಜ್ಜೆಗುರುತು ಕಾಣಿಸಿಕೊಂಡಿವೆ. ಮಳಲಿ, ಕೇಶವಾಪುರ ಗ್ರಾಮಗಳಲ್ಲಿ ಆನೆ ಸಂಚರಿಸಿದ ಕುರುಹು ಪತ್ತೆಯಾಗಿವೆ. ಹಿರೇಕಂದವಾಡಿ ಬೆಟ್ಟದಲ್ಲಿ ಬೀಡುಬಿಟ್ಟ ಆನೆ, ಅರಣ್ಯ ಇಲಾಖೆ ಸಿಬ್ಬಂದಿಗೆ ಗೋಚರಿಸಿದೆ.

‘ಚಿಕ್ಕ ವಯಸ್ಸಿನ ಒಂಟಿ ಸಲಗ ಹೊಳಲ್ಕೆರೆ ತಾಲ್ಲೂಕಿನಲ್ಲಿ ಕಾಣಿಸಿಕೊಂಡಿದೆ. 30ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ. ಆನೆಯನ್ನು ಭದ್ರಾ ಅಭಯಾರಣ್ಯಕ್ಕೆ ಮರಳಿಸುವ ಆಲೋಚನೆ ಇದೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇವೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ನಾಯಕ್‌ ತಿಳಿಸಿದ್ದಾರೆ.

ಹೊನ್ನಾಳಿ ತಾಲ್ಲೂಕಿನ ನದಿತೀರದಲ್ಲಿ ಕಾಣಿಸಿಕೊಂಡಿದ್ದ ಆನೆ, ಎರಡು ದಿನ ದಾವಣಗೆರೆ ಜಿಲ್ಲೆಯಲ್ಲಿ ಸಂಚರಿಸಿತ್ತು. ತೋಟಗಳಿಗೆ ನುಗ್ಗಿ ಹಾನಿ ಮಾಡಿತ್ತು. ಹಲವರಿಗೆ ತಿವಿದು ಗಾಯಗೊಳಿಸಿದ ಆನೆಯ ಬಗ್ಗೆ ಹೊಳಲ್ಕೆರೆ ತಾಲ್ಲೂಕಿನ ಜನರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.

ಭದ್ರಾ ಅಭಯಾರಣ್ಯದಿಂದ ದಾರಿತಪ್ಪಿ ಬಂದಿದ್ದ 22 ವರ್ಷದ ಕಾಡಾನೆಯನ್ನು ಜೋಗಿಮಟ್ಟಿ ವನ್ಯಧಾಮದಲ್ಲಿ ಡಿ.9ರಂದು ಸೆರೆಹಿಡಿಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT