ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಬಿತ್ತನೆಗೆ ಸಜ್ಜಾದ ರೈತ

Last Updated 30 ಮೇ 2022, 4:33 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ನಿರೀಕ್ಷೆ ಮೀರಿ ಸುರಿದಿದ್ದು, ರೈತರು ಹರ್ಷದಿಂದ ಭೂಮಿ ಉಳುಮೆ ಮಾಡುತ್ತಿದ್ದಾರೆ. ಬಿತ್ತನೆ ಚಟುವಟಿಕೆ ಗರಿಗೆದರಿದ್ದು, ಹತ್ತಿ, ಹೆಸರು, ಎಳ್ಳು ಬಿತ್ತನೆ ಭರದಿಂದ ಸಾಗಿದೆ. ಭೂಮಿ ಸಿದ್ಧತೆ, ಬೀಜ ಹಾಗೂ ಗೊಬ್ಬರ ಖರೀದಿ ಹಾಗೂ ದಾಸ್ತಾನು ಮಾಡಿಕೊಳ್ಳುವತ್ತ ರೈತರು ಚಿತ್ತ ಹರಿಸಿದ್ದಾರೆ.

ಸಾಮಾನ್ಯವಾಗಿ ಜಿಲ್ಲೆಯಲ್ಲಿ ಮೇ ತಿಂಗಳಿಂದ ಆರಂಭವಾದ ಬಿತ್ತನೆ ಜುಲೈ ಅಂತ್ಯದವರೆಗೂ ನಡೆಯುತ್ತದೆ. ಹೊಸದುರ್ಗ, ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನ ಕೆಲವೆಡೆ ಮೇ ಮತ್ತು ಜೂನ್‌ ತಿಂಗಳಲ್ಲಿ ಬಿತ್ತನೆ ನಡೆಯುತ್ತದೆ. ಚಳ್ಳಕೆರೆ, ಮೊಳಕಾಲ್ಮುರು ಹಾಗೂ ಹಿರಿಯೂರು ತಾಲ್ಲೂಕಿನ ಕೆಲ ಭಾಗಗಳಲ್ಲಿ ಮಾತ್ರ ಜುಲೈ ಅಂತ್ಯದವರೆಗೆ ಈ ಕಾರ್ಯ ಮುಂದುವರಿಯುತ್ತದೆ.

3.35 ಲಕ್ಷ ಹೆಕ್ಟೇರ್‌ ಬಿತ್ತನೆ ನಿರೀಕ್ಷೆ: ಜಿಲ್ಲೆಯಲ್ಲಿ 3.35 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗುವ ಸಾಧ್ಯತೆ ಇದೆ. ಹಿರಿಯೂರು, ಹೊಸದುರ್ಗ ತಾಲ್ಲೂಕಿನಲ್ಲಿ ಈಗಾಗಲೇ 10 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹತ್ತಿ, ಎಳ್ಳು, ಹೆಸರು ಮೇ ತಿಂಗಳಲ್ಲಿಯೇ ಬಿತ್ತನೆ ಹೆಚ್ಚು. ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ, ತೊಗರಿ ಸೇರಿ ಇತರ ಬೆಳೆಗಳ ಬಿತ್ತನೆ ಕಾರ್ಯ ಇನ್ನಷ್ಟೇ ಆರಂಭವಾಗಬೇಕಿದೆ. ಜೂನ್‌ ತಿಂಗಳಲ್ಲಿ ಬಿತ್ತನೆ ಕಾರ್ಯ ಭರದಿಂದ ಸಾಗುವ ನಿರೀಕ್ಷೆ ಇದೆ.

ಸಾಮಾನ್ಯವಾಗಿ ಮೇ ಅಂತ್ಯದವರೆಗೂ ಜಿಲ್ಲೆಯಲ್ಲಿ ಮಳೆ ಸುರಿಯುವುದು ಅಪರೂಪ. ಪೂರ್ವ ಮುಂಗಾರು ಮಳೆ ಸುರಿದರೂ ಜಲಮೂಲಗಳಿಗೆ ನೀರು ಬರುತ್ತಿರಲಿಲ್ಲ. ಭೂಮಿ ಉಳುಮೆ ಮಾಡಿಕೊಳ್ಳಲು ಸಾಕಾಗುವಷ್ಟು ಹದ ಮಳೆ ಆಗುತ್ತಿತ್ತು. ಆದರೆ, ಪ್ರಸಕ್ತ ವರ್ಷ ಈ ಸ್ಥಿತಿ ಬದಲಾಗಿದೆ. ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ನಿರೀಕ್ಷೆ ಮೀರಿದ ಮಳೆ ಬಂದಿದೆ. ಇದು ರೈತರಲ್ಲಿ ಮುಂಗಾರು ಮಳೆಯ ಬಗೆಗೆ ಭರವಸೆ ಮೂಡಿಸಿದೆ. ಉತ್ತಮ ಮಳೆ ಸುರಿಯಬಹುದೆಂದು ಸಂತಸಗೊಂಡಿರುವ ರೈತರು ಜಮೀನು ಸಿದ್ಧತೆಯಲ್ಲಿ ಉತ್ಸಾಹ ತೋರುತ್ತಿದ್ದಾರೆ.

ಕೃಷಿ ಇಲಾಖೆ ಕೂಡ ಬಿತ್ತನೆ ಬೀಜ, ರಸಗೊಬ್ಬರ ಸೇರಿ ಇತರ ಸಿದ್ಧತೆಯನ್ನು ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಬಿತ್ತನೆಯಾಗುವ ಶೇಂಗಾದ 23 ಸಾವಿರ ಕ್ವಿಂಟಲ್‌ ಬಿತ್ತನೆ ಬೀಜ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇದರಲ್ಲಿ 8 ಸಾವಿರ ಬೀಜವನ್ನು ‘ಕದ್ರಿ ಲೇಪಾಕ್ಷಿ’ ತಳಿ ವಿತರಿಸಲು ನಿರ್ಧರಿಸಲಾಗಿದೆ. ಸೂರ್ಯಕಾಂತಿ ಸೇರಿ ಎಣ್ಣೆಕಾಳುಗಳ ಬಿತ್ತನೆ ಪ್ರದೇಶ ಏರಿಕೆಯಾಗುವ ಸಾಧ್ಯತೆ ಇದೆ. ಇದಕ್ಕೆ ಅನುಗುಣವಾಗಿ ಬಿತ್ತನೆ ಬೀಜಗಳನ್ನು ಸಂಗ್ರಹಿಸಿಟ್ಟುಕೊಂಡಿರುವುದಾಗಿ ಕೃಷಿ ಇಲಾಖೆ ಭರವಸೆ ನೀಡಿದೆ.

ಕಳಪೆ ಬಿತ್ತನೆ ಬೀಜದ ಎಚ್ಚರ: ಬಿತ್ತನೆ ಮಾಡುವ ಬೀಜದ ಗುಣಮಟ್ಟದ ಬಗ್ಗೆ ರೈತರು ಗಮನಹರಿಸಬೇಕು ಹಾಗೂ ಕಳಪೆ ಬಿತ್ತನೆ ಬೀಜದ ಕುರಿತು ಎಚ್ಚರ ವಹಿಸಬೇಕು ಎಂದು ಕೃಷಿ ಇಲಾಖೆ ಸಲಹೆ ನೀಡಿದೆ.

ಅನಧಿಕೃತ ಸೂರ್ಯಕಾಂತಿ ಬಿತ್ತನೆ ಬೀಜ ಸಾಗಣೆ ಮಾಡುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಕ್ವಿಂಟಲ್‌ಗೂ ಅಧಿಕ ಬೀಜವನ್ನು ಜಪ್ತಿ ಮಾಡಿದೆ. ಕಳೆದ ವರ್ಷ ಶೇಂಗಾ ಬಿತ್ತನೆ ಬೀಜದ ವಿಚಾರದಲ್ಲಿಯೂ ಅನೇಕ ರೈತರು ಮೋಸ ಹೋಗಿದ್ದರು.

‘ಅಧಿಕೃತ ಮಾರಾಟಗಾರರು ಹಾಗೂ ಪ್ರಮಾಣಿಕೃತ ಬಿತ್ತನೆ ಬೀಜಗಳನ್ನು ಮಾತ್ರ ಖರೀದಿಸಬೇಕು. ಬಿಲ್‌ ಕಾಪಾಡಿಕೊಳ್ಳಬೇಕು. ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಪಡೆಯಬೇಕು. ಬಿಡಿಯಾಗಿ ವಿತರಿಸುವ ಅನಧಿಕೃತ ಕಂಪನಿಯ ಬಿತ್ತನೆ ಬೀಜಗಳನ್ನು ಯಾವುದೇ ಕಾರಣಕ್ಕೂ ಖರೀದಿಸಬಾರದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರಮೇಶಕುಮಾರ್‌ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ 28 ರೈತ ಸಂಪರ್ಕ ಕೇಂದ್ರಗಳಿವೆ. ಹೆಚ್ಚುವರಿಯಾಗಿ ಇನ್ನೂ ಹತ್ತು ಕೇಂದ್ರಗಳನ್ನು ಕೃಷಿ ಇಲಾಖೆ ತೆರೆದಿದೆ. ಬಿತ್ತನೆ ಬೀಜ ಹಾಗೂ ಇತರ ಪರಿಕರಗಳು ಇಲ್ಲಿ ಲಭ್ಯ ಇವೆ. ಸಲಹೆ, ಸೂಚನೆಗಳನ್ನು ಇಲ್ಲಿ ಪಡೆಯಬಹುದಾಗಿದೆ. ಮುಂಗಾರು ಬಿತ್ತನೆಗೆ ಜಿಲ್ಲೆಗೆ 99 ಸಾವಿರ ಮೆಟ್ರಿಕ್‌ ಟನ್‌ ರಸಗೊಬ್ಬರ ಬೇಕಾಗಬಹುದು. ಈ ಪೈಕಿ 26 ಸಾವಿರ ಮೆಟ್ರಿಕ್‌ ಟನ್‌ ದಾಸ್ತಾನು ಇಟ್ಟುಕೊಳ್ಳಲಾಗಿದೆ.

165 ಮಿ.ಮೀ. ಮಳೆ

ಮೇ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ 75 ಮಿ.ಮೀ ವಾಡಿಕೆ ಮಳೆಯಾಗುತ್ತಿತ್ತು. ಆದರೆ, 165 ಮಿ.ಮೀ ಮಳೆಯಾಗಿದೆ. ವಾಡಿಕೆಗಿಂತ ಶೇ 121ರಷ್ಟು ಹೆಚ್ಚು ಮಳೆಯಾಗಿದೆ.

ಏಪ್ರಿಲ್‌ ಕೊನೆಯ ಭಾಗದಲ್ಲಿ ಆರಂಭವಾದ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಉಳುಮೆ ಮಾಡಿಕೊಂಡು ಭೂಮಿಯನ್ನು ಸ್ವಚ್ಛಗೊಳಿಸಿಕೊಳ್ಳಲು ಅನುಕೂಲವಾಯಿತು. ರೈತರು ಈ ಕಾರ್ಯದಲ್ಲಿ ಮಗ್ನರಾಗಿರುವಾಗಲೇ ಮೇ ತಿಂಗಳಲ್ಲಿ ಆರಂಭವಾದ ಮಳೆ ರೈತರಲ್ಲಿ ಹರ್ಷವುಂಟು ಮಾಡಿತು. ಚೆಕ್‌ಡ್ಯಾಂ, ಬ್ಯಾರೇಜ್‌ಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಯಿತು. ಕೆರೆ–ಕಟ್ಟೆ ಸೇರಿ ಜಲಮೂಲಗಳಿಗೆ ನೀರು ಹರಿದುಬಂದಿದೆ. ರೈತರು ಮುಂಗಾರು ಹಂಗಾಮು ಬಿತ್ತನೆಯ ಕಾರ್ಯಕ್ಕೆ ಖುಷಿಯಿಂದ ಮುಂದಾಗಿದ್ದಾರೆ.

ಬಿತ್ತನೆಗೆ ಭೂಮಿ ಸಿದ್ಧತೆ

ಜೆ.ತಿಮ್ಮಪ್ಪ

ಚಿಕ್ಕಜಾಜೂರು: ಏಪ್ರಿಲ್‌ ತಿಂಗಳಿಂದ ಪೂರ್ವ ಮುಂಗಾರು ಮಳೆಗಳು ಬಿದ್ದಿದ್ದರಿಂದ ರೈತರು ಬಿತ್ತನೆ ಪೂರ್ವದಲ್ಲಿ ಜಮೀನು ಹಸನು ಮಾಡಿಕೊಳ್ಳಲು ನೆರವಾಗಿದೆ. ರೈತರು ಹರ್ಷದಿಂದಲೇ ಕೃಷಿ ಚಟುವಟಿಕೆಯಲ್ಲಿ ತಲ್ಲೀನರಾಗಿದ್ದಾರೆ.

ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಸುರಿದ ಬಿರುಗಾಳಿ ಸಹಿತ ಮಳೆ, ಮಳೆಯಿಂದಾಗಿ ಬಹುತೇಕ ರೈತರು ಬಿತ್ತನೆಗಾಗಿ ಜಮೀನುಗಳನ್ನು ಹಸನು ಮಾಡಿಕೊಳ್ಳಲು ಅನುಕೂಲವಾಗಿದೆ. ಈಗಾಗಲೇ ಎರಡು ಬಾರಿ ಜಮೀನುಗಳನ್ನು ಹಸನು ಮಾಡಿಕೊಂಡಿದ್ದು, ಕೃತಿಕಾ ಮಳೆ ಬಿದ್ದ ಪರಿಣಾಮ ಶೃಂಗೇರಿ ಹನುಮನಹಳ್ಳಿ, ಕಡೂರು ಮೊದಲಾದ ಕಡೆಗಳಲ್ಲಿ ಕೆಲವು ರೈತರು ಹತ್ತಿಯನ್ನು ಬಿತ್ತನೆ ಮಾಡಿದ್ದಾರೆ.

ಮುಂದಿನ ಮಳೆಗಳು ನಿಗದಿತ ಸಮಯಕ್ಕೆ ಸುಗಮವಾಗಿ ಬಿದ್ದರೆ ಮೆಕ್ಕೆಜೋಳ, ಜೋಳ, ಅವರೆ, ತೊಗರಿ, ರಾಗಿಯನ್ನು ಬಿತ್ತನೆ ಮಾಡಲು ಅನುಕೂಲ. ಪೂರ್ವ ಮುಂಗಾರು ವಾಡಿಕೆಗಿಂತ ಹೆಚ್ಚು ಸುರಿದ ಪರಿಣಾಮ ಮುಂಗಾರು ಮಳೆಯೂ ಉತ್ತಮವಾಗಿ ಸುರಿಯಬಹುದು ಎಂಬುದು ರೈತರ ನಿರೀಕ್ಷೆ. ಬಿತ್ತನೆ ಪೂರ್ವದಲ್ಲಿ ಭೂಮಿ ಉಳುಮೆ ಮಾಡಿ ಸಿದ್ಧತೆ ಮಾಡಿಕೊಳ್ಳಲು ಇದರಿಂದ ಅನುಕೂಲವಾಗಿದೆ.

‘ಹದಿನೈದು ದಿನಗಳ ಹಿಂದೆ ಜಮೀನಿನಲ್ಲಿ ಹುಲ್ಲು ಬೆಳೆದಿದ್ದರಿಂದ ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡಿದ್ದೆ. ವಾರದ ನಂತರ ಮತ್ತೆ ಬಲರಾಮ ನೇಗಿಲನ್ನು ಹೊಡೆದಿದ್ದೆ. ಕಳೆದ ವಾರ ಮಳೆ ಸತತವಾಗಿ ಮೂರು ದಿನ ಉತ್ತಮವಾಗಿ ಸುರಿದಿದೆ. ಭೂಮಿಯಲ್ಲಿ ಚೆನ್ನಾಗಿ ನೀರು ಇಂಗಿದೆ. ಈಗ ಮತ್ತೊಮ್ಮೆ ನೇಗಿಲಿನಿಂದ ಮಗುಚುತ್ತಿರುವೆ’ ಎನ್ನುತ್ತಾರೆ ಚಿಕ್ಕಜಾಜೂರಿನ ಅಂಜಿನಪ್ಪ.

ರಸಗೊಬ್ಬರದ ಬೆಲೆ ಏರಿಕೆ

ವಿ.ಎಂ. ಶಿವಪ್ರಸಾದ್

ಭರಮಸಾಗರ:ಹೋಬಳಿ ವ್ಯಾಪ್ತಿಯಲ್ಲಿ ಬಿತ್ತನೆಗೆ ಹೊಲ ಸಜ್ಜುಗೊಳಿಸುವ ಕಾರ್ಯ ಬಹುತೇಕ ಮುಕ್ತಾಯದ ಹಂತದಲ್ಲಿದ್ದು, ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ರೈತರಿಗೆ ದೊರೆಯಬೇಕಿದೆ.

ಹೋಬಳಿ ವ್ಯಾಪ್ತಿಯಲ್ಲಿ ಮೆಕ್ಕೆಜೋಳ ಪ್ರಮುಖ ಬೆಳೆಯಾಗಿದೆ. ಭರಮಸಾಗರ, ಕೊಳಹಾಳ್, ಸಿರಿಗೆರೆ, ಚಿಕ್ಕಬೆನ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸದ್ಯಕ್ಕೆ ಅಗತ್ಯ ರಸಗೊಬ್ಬರ, ಯೂರಿಯಾ ಗೊಬ್ಬರ ದಾಸ್ತಾನು ಇದೆ.

ಉತ್ಪಾದನೆ ಕೊರತೆ ಕಾರಣದಿಂದ ಡಿಎಪಿ ಗೊಬ್ಬರ ಸಿಗುತ್ತಿಲ್ಲ.ಡಿಎಪಿ ಗೊಬ್ಬರಕ್ಕಾಗಿ ರೈತರು ಅಂಗಡಿಗಳಿಗೆ ಅಲೆಯುತ್ತಿರುವ ದೃಶ್ಯ ಕಂಡುಬರುತ್ತಿದೆ.ಕಳೆದ ಬಾರಿ ಕ್ವಿಂಟಲ್‌ಗೆ ₹ 2,400 ಇದ್ದ ಡಿಎಪಿ ಗೊಬ್ಬರದ ಬೆಲೆ ಈ ಬಾರಿ ₹ 2,900ಕ್ಕೆ ಏರಿದೆ. 20-20-0-13, 15-15-15 ಇತರೆ ರಸಗೊಬ್ಬರ ಕಳೆದ ಬಾರಿ 50 ಕೆಜಿ ಪಾಕೇಟ್ ₹ 925ರಿಂದ ₹ 1,100ಕ್ಕೆ ಸಿಗುತ್ತಿತ್ತು. ಆದರೆ, ಈ ಬಾರಿ ಅದು ₹ 1,450ರಿಂದ ₹ 1,500ವರೆಗೆ ಹೆಚ್ಚಾಗಿದೆ. ಬಿತ್ತನೆ ಬೀಜದ ದರ ಕೂಡ ₹ 100ರಿಂದ ₹ 150ರವರೆಗೆ ಹೆಚ್ಚಾಗಿದೆ.

‘ಫ್ಯಾಕ್ಟಂಪಸ್, ಕೋರಮಂಡಲ ಕಂಪನಿಯ 20-20-0-13 ಗೊಬ್ಬರದ ದಾಸ್ತಾನು ಇದೆ. ಕಳೆದ ಬಾರಿ ಒಂದು ಪ್ಯಾಕೇಟ್ (50 ಕೆಜಿ)ಗೆ ₹ 1 ಸಾವಿರ ಇದ್ದ ಫ್ಯಾಕ್ಟಂಪಸ್ ರಸಗೊಬ್ಬರದ ದರ ಈ ಬಾರಿ ₹ 1,490 ಆಗಿದೆ. ಕೋರಮಂಡಲ 1 ಪಾಕೇಟ್‌ಗೆ ₹ 1,450 ಇದೆ’ ಎಂದು ಭರಮಸಾಗರ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ಶೆಟ್ಟಿ ತಿಳಿಸುತ್ತಾರೆ.

ರೈತ ಸಂಪರ್ಕ ಕೇಂದ್ರದಲ್ಲಿ ವಿವಿಧ ಕಂಪನಿಯ ಮೆಕ್ಕೆಜೋಳ ಬಿತ್ತನೆ ಬೀಜ ಲಭ್ಯವಿದ್ದು, ಮೇ 30ರಿಂದ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತದೆ ಎಂದು ಸಹಾಯಕ ಕೃಷಿ ಅಧಿಕಾರಿ ಪತ್ತರ್ ತಿಳಿಸುತ್ತಾರೆ.

ಪೂರ್ವ ಮುಂಗಾರು ಮಳೆ ನಿರೀಕ್ಷೆ ಮೀರಿ ಸುರಿದಿದ್ದರಿಂದ ಕೃಷಿ ಚಟುವಟಿಕೆ ಆರಂಭವಾಗಿವೆ. ಬಿತ್ತನೆ ಬೀಜ, ರಸಗೊಬ್ಬರ ಅಗತ್ಯಕ್ಕೆ ತಕ್ಕಷ್ಟು ದಾಸ್ತಾನು ಇಟ್ಟುಕೊಳ್ಳಲಾಗಿದೆ. ರೈತರು ಪರಿಶೀಲಿಸಿ ಬಿತ್ತನೆ ಬೀಜ ಖರೀದಿಸಬೇಕು.

–ಡಾ.ಪಿ.ರಮೇಶಕುಮಾರ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ

ಹೊಲ ಸಂಪೂರ್ಣವಾಗಿ ಹುಲ್ಲು ಮುಕ್ತವಾಗಿದೆ. ಮುಂದಿನ ಮಳೆ ಬಂದಾಗ, ಕುಂಟೆ ಹೊಡೆದು ಮೆಕ್ಕೆಜೋಳ ಬಿತ್ತನೆ ಮಾಡಲು ಅನುಕೂಲ ಆಗುವುದು. –ಆಂಜಿನಪ್ಪ, ರೈತ, ಚಿಕ್ಕಜಾಜೂರು

ಕಷ್ಟಪಟ್ಟು ಬೆಳೆಯುವ ಬೆಳೆಗೆ ಮಾತ್ರ ನಿಗದಿತ ಬೆಲೆ ಇಲ್ಲ. ಮಾರುಕಟ್ಟೆಯಲ್ಲಿನ ಬೆಲೆ ವ್ಯತ್ಯಯಕ್ಕೆ ಅನೇಕ ಬಾರಿ ನಾವು ಕಂಗಾಲಾಗಿದ್ದೇವೆ.ಕೃಷಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಲೇ ಇದೆ.

–ಹನುಮಂತಪ್ಪ, ರೈತ, ಕಾಲ್ಗೆರೆ, ಭರಮಸಾಗರ ಹೋಬಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT