ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕೋಸು ಬೆಳೆದು ತುಸು ಕಾಸು ಕಂಡ ರೈತ

ಎರಡು ಎಕರೆ ಜಮೀನಿನಲ್ಲಿ ಲಾಭ ಪಡೆದ ಕಾಳಘಟ್ಟದ ನಾಗರಾಜ್‌
Last Updated 21 ಸೆಪ್ಟೆಂಬರ್ 2022, 5:53 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಈ ಬಾರಿ ಅಧಿಕ ಮಳೆ ಸುರಿದಿದ್ದರೂ ನಡುವೆಯೂ ಎಲೆಕೋಸು ಬೆಳೆದಿರುವ ಸಮೀಪದ ಕಾಳಘಟ್ಟ ಗ್ರಾಮದ ರೈತ ಡಿ.ಈ. ನಾಗರಾಜ್‌ ಉತ್ತಮ ಇಳುವರಿ ಕಂಡುಕೊಳ್ಳುವ ಮೂಲಕ ಲಾಭ ಗಳಿಸುತ್ತಿದ್ದಾರೆ.

ಎರಡು ಎಕರೆ ಪ್ರದೇಶದಲ್ಲಿ ಎಲೆಕೋಸು ನಾಟಿ ಮಾಡುವ ಉದ್ದೇಶದಿಂದ ಜೂನ್‌ನಲ್ಲಿ ಸಸಿಗಳನ್ನು ಸಿದ್ಧಪಡಿಸಿಕೊಡುವಂತೆ ಫಾರಂ ಒಂದಕ್ಕೆ ತಿಳಿಸಿದ್ದ ಇವರು, ಪ್ರತಿ ಸಸಿಗೆ 50 ಪೈಸೆ ದರ ನೀಡಿ ತಂದು ಜುಲೈನಲ್ಲಿ ನಾಟಿ ಮಾಡಿದ್ದರು.

‘ಭೂಮಿಯನ್ನು ಹಸನುಗೊಳಿಸಿದ ನಂತರ ಸಾಲು ಮಾಡಿ ತಳಗೊಬ್ಬರ ಹಾಕಿದ್ದೆವು. ನಂತರ, ಮೂರು ಬಾರಿ ಮೇಲುಗೊಬ್ಬರ ನೀಡಿದೆವು. ಆಗಾಗ ಮಳೆ ಬರುತ್ತಿದ್ದುದರಿಂದ ಯಾವುದೇ ಸಸಿಗಳು ಒಣಗಲಿಲ್ಲ. ಸಸಿಗಳು ಬೆಳೆದಂತೆ 10 ದಿನಗಳಿಗೊಮ್ಮೆ ಔಷಧ ಸಿಂಪಡಣೆ ಮಾಡುತ್ತಿದ್ದೆವು. ಇದರಿಂದಾಗಿ ರೋಗಬಾಧೆ ಉಂಟಾಗಲಿಲ್ಲ. ಮಳೆ ಬಂದಿದ್ದರಿಂದ ಕೊಳವೆ ಬಾವಿ ನೀರು ಹಾಯಿಸುವ ಪ್ರಮೇಯ ಒದಗಲಿಲ್ಲ. ನಮ್ಮ ಜಮೀನು ಇಳಿಜಾರು ಪ್ರದೇಶದಲ್ಲಿ ಇದ್ದುದರಿಂದ ಎಲ್ಲೂ ಮಳೆ ನೀರು ನಿಲ್ಲುತ್ತಿರಲಿಲ್ಲ. ಹಾಗಾಗಿ ಸಸಿಗಳು ಶೀತ ವಾತಾವರಣದಿಂದ ಮುಕ್ತವಾಗಿದ್ದವು’ ಎಂದು ನಾಗರಾಜ್‌ ವಿವರಿಸಿದರು.

‘ಬಿತ್ತನೆಪೂರ್ವ ಬೇಸಾಯ, ಸಾಲು, ತಳಗೊಬ್ಬರ, ಸಸಿ ನಾಟಿ, ಮೂರು ಬಾರಿ ಮೇಲುಗೊಬ್ಬರ, ಔಷಧ ಸಿಂಪಡಣೆ, ಕೂಲಿ ಸೇರಿ ಈವರೆಗೆ ₹ 1.80 ಲಕ್ಷ ಖರ್ಚಾಗಿದೆ. ಈಗ ಕೋಸು ಕೊಯ್ಲಿಗೆ ಬಂದಿದ್ದು, ಹಾವೇರಿ ಜಿಲ್ಲೆ ಬ್ಯಾಡಗಿಯ ವ್ಯಾಪಾರಿಯೊಬ್ಬರಿಗೆ ಕೆ.ಜಿ.ಗೆ ₹ 13ರಂತೆ ಮಾರಾಟ ಮಾಡಲಾಗಿದೆ. ಅವರೇ ಬಂದು ಕೊಯ್ಲು ಮಾಡಿಕೊಂಡು ಹೋಗುತ್ತಾರೆ. ಮೊದಲ ಕೊಯ್ಲಿನಲ್ಲಿ 26 ಟನ್‌ ಕೋಸನ್ನು ಮಾರಾಟ ಮಾಡಿದ್ದು, ₹ 3.38 ಲಕ್ಷ ಆದಾಯ ಬಂದಿದೆ. ಇನ್ನೂ ಅಂದಾಜು 12ರಿಂದ 14 ಟನ್‌ ಕೊಯ್ಲು ಬಾಕಿ ಇದೆ. ಖರ್ಚು ಕಳೆದು ₹ 2.88 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದೇನೆ’ ಎಂದು ಅವರು ಹೇಳಿದರು.

‘ಕಳೆದ ವರ್ಷವೂ ಇದೇ ಜಮೀನಿನಲ್ಲಿ ಎಲೆಕೋಸನ್ನು ಬೆಳೆದಿದ್ದೆ. ಆಗ 25 ಟನ್‌ ಇಳುವರಿ ಬಂದಿತ್ತು. ಕೆ.ಜಿ.ಗೆ ₹ 8.50 ರಂತೆ ಮಾರಾಟ ಮಾಡಿದ್ದೆ. ಉತ್ತಮ ಇಳುವರಿ, ಬೆಲೆ ಸಿಗುತ್ತಿರುವುದು ಸಮಾಧಾನಕರ ಸಂಗತಿ’ ಎಂದು ನಾಗರಾಜ್‌ ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT