ಪರಶುರಾಂಪುರ: ಮಳೆಯ ತೀವ್ರ ಕೊರತೆ ಎದುರಿಸಿರುವ ಹೋಬಳಿಯ ಬಹುತೇಕ ರೈತರು ಜಾನುವಾರುಗಳ ಮೇವಿಗಾಗಿ ಅವಧಿಗೆ ಮುನ್ನವೇ ಶೇಂಗಾ ಬೆಳೆಯ ಕಟಾವು ಕಾರ್ಯದಲ್ಲಿ ತೊಡಗಿದ್ದು, ಬೆಳೆ ನಷ್ಟ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ಈಗಾಗಲೇ ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ಈ ಭಾಗದ ಜಮೀನುಗಳಿಗೆ ಭೇಟಿ ನೀಡಿ ಹೋಗಿದ್ದಾರೆ. ಕೇಂದ್ರದ ಬರ ಅಧ್ಯಯನ ತಂಡವು ಬಂದು ಪರಿಶೀಲನೆ ನಡೆಸಿ ತೆರಳಿದೆ. ಜಿಲ್ಲೆಯನ್ನು ‘ಬರಪೀಡಿತ ಪ್ರದೇಶ’ವೆಂದು ಘೋಷಿಸಲಾಗಿದೆ. ಆದರೆ ಪರಿಹಾರ ಯಾವಾಗ ದೊರೆಯಲಿದೆ ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ ಎಂದು ರೈತರೊಬ್ಬರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.
ಹೋಬಳಿ ವ್ಯಾಪ್ತಿಯ ಪ್ರಮುಖ ಬೆಳೆಯಾದ ಶೇಂಗಾ 20,600 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಆದರೆ, ಈ ಬಾರಿ ಮಳೆ ಕೊರತೆಯಿಂದ ಬೆಳೆ ಕಾಯಿ ಕಟ್ಟದೆ ಹಾಳಾಗಿದ್ದು, ರೈತರ ಸ್ಥಿತಿ ಚಿಂತಾಜನಕವಾಗಿದೆ.
‘ಮಳೆ ಇಲ್ಲದ್ದರಿಂದ ಬೆಳೆ ಸಂಪೂರ್ಣ ನೆಲಕಚ್ಚಿದೆ. ಪ್ರತಿ ವರ್ಷ ನವೆಂಬರ್ ಕೊನೆಯ ವಾರದಲ್ಲಿ ಶೇಂಗಾ ಕಟಾವಿಗೆ ಬರುತ್ತಿತ್ತು. ಆದರೆ, ಜಾನುವಾರುಗಳಿಗೆ ಮೇವಾದರೂ ಸಿಗಲಿ ಎಂದು ಆಲೋಚಿಸಿ ಅವಧಿಗೂ ಮನ್ನವೇ ಕಟಾವು ಮಾಡುತ್ತಿದ್ದೇವೆ’ ಎಂದು ಚೌಳೂರಿನ ರೈತ ಈರಣ್ಣ ವಸ್ತುಸ್ಥಿತಿ ತೆರೆದಿಟ್ಟರು.
‘ಶೇಂಗಾ ಬೆಳೆಯಲು ಹಾಕಿದ ಹಣವೂ ಇಲ್ಲ; ಇತ್ತ ಬೆಳೆಯೂ ಇಲ್ಲದ ಸಂಕಷ್ಟಕ್ಕೆ ರೈತರು ಸಿಲುಕಿದ್ದಾರೆ. ಸರ್ಕಾರ ನೆರವಿಗೆ ಬರಬೇಕು. ಇಲ್ಲವಾದರೆ ಕೃಷಿಕರು, ಕೃಷಿ ಕೂಲಿಕಾರರು ಗುಳೆ ಹೋಗುವ ಅನಿವಾರ್ಯತೆ ಸೃಷ್ಟಿಯಾಗಲಿದೆ’ ಎಂದು ಪರಶುರಾಂಪುರ ಹೋಬಳಿ ರೈತ ಸಂಘದ ಅಧ್ಯಕ್ಷ ನವೀನ್ ಗೌಡ ಮತ್ತು ಅಣ್ಣಪ್ಪ, ರಾಜಪ್ಪ, ತಿಮ್ಮಣ್ಣ, ಬಾಷಾ ಆತಂಕ ವ್ಯಕ್ತಪಡಿಸಿದರು
‘ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ. ರೈತರು ಎಫ್‌ಐಡಿ ಮಾಡಿಸಿ ಜಮೀನಿನ ಪಹಣಿ ಮತ್ತು ಆಧಾರ್ ಕಾರ್ಡ್ ಜೋಡಣೆ ಆಗಿದೆಯೇ ನೋಡಿಕೊಳ್ಳಬೇಕು. ಆಂದಾಗ ಮಾತ್ರ ರೈತರ ಖಾತೆಗೆ ನೇರವಾಗಿ ಪರಿಹಾರದ ಹಣ ಜಮೆಯಾಗುತ್ತದೆ’ ಎಂದು ಕೃಷಿ ಅಧಿಕಾರಿ ಜೀವನ್ ಹೇಳಿದರು.
ಮಳೆ ಆಶ್ರಿತ ಬೆಳೆಗಳು ಸಂಪೂರ್ಣ ನೆಲ ಕಚ್ಚಿದ್ದು ಕೂಡಲೇ ಸರ್ಕಾರ ರೈತರಿಗೆ ಬೆಳೆನಷ್ಟ ಪರಿಹಾರ ನೀಡಬೇಕು. ಜಾನುವಾರುಗಳಿಗಾಗಿ ಗೋಶಾಲೆ ತೆರೆಯಬೇಕು.ನವೀನ್ ಗೌಡ ಹೋಬಳಿ ರೈತ ಸಂಘದ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.