ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲದ ಹೊರೆ: ಯುವ ರೈತ ಆತ್ಮಹತ್ಯೆ

ಕೈಕೊಟ್ಟ ಕೊಳವೆಬಾವಿ: ಒಣಗಿದ ತೆಂಗು, ದಾಳಿಂಬೆ ತೋಟ
Last Updated 9 ಮೇ 2019, 15:53 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ಆರನಕಟ್ಟೆ ಗ್ರಾಮದಲ್ಲಿ ಒಣಗುತ್ತಿರುವ ತೆಂಗು, ದಾಳಿಂಬೆ ತೋಟ ಉಳಿಸಲು ತಂದೆ ಮಾಡಿದ ಸಾಲದ ಹೊರೆಯಿಂದ ಬೇಸತ್ತು ರೈತ ಅಮೃತ್‌ರಾಜ್‌ (21) ಬುಧವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಮೃತ್‌ರಾಜ್‌ ಕುಟುಂಬಕ್ಕೆ ಆರು ಎಕರೆ ಭೂಮಿ ಇದೆ. ಮೂರು ಎಕರೆ ತೆಂಗಿನ ತೋಟ ನೀರಿಲ್ಲದೆ ಒಣಗಿದೆ. ಹಿಂದೆ ಉತ್ತಮ ಇಳುವರಿ ಕೊಡುತ್ತಿದ್ದ ಒಂದೂವರೆ ಎಕರೆ ದಾಳಿಂಬೆ ತೋಟದಿಂದಲೂ ಎರಡು ವರ್ಷಗಳಿಂದ ಆದಾಯ ಬರುತ್ತಿಲ್ಲ. ಮೂರ್ನಾಲ್ಕು ಕೊಳವೆಬಾವಿ ಕೊರೆಸಿದರೂ ನೀರು ಸಿಕ್ಕಿಲ್ಲ. ಟ್ಯಾಂಕರ್ ಮೂಲಕ ನೀರುಣಿಸಲು ಹಣವಿರಲಿಲ್ಲ. ಹೃದ್ರೋಗಿಯಾದ ತಂದೆ ಗೋವಿಂದರಾಜು ಹೆಸರಿನಲ್ಲಿ ವಿಜಯಾ ಬ್ಯಾಂಕಿನಲ್ಲಿ ₹ 4 ಲಕ್ಷಕ್ಕೂ ಹೆಚ್ಚು ಸಾಲವಿತ್ತು. ಇದರಿಂದ ಮನನೊಂದು ಅಮೃತ್‌ರಾಜ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸಾವಿಗೆ ಸರ್ಕಾರವೇ ಹೊಣೆ: ‘ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿಸಿದ್ದರೆ ತಾಲ್ಲೂಕಿನಲ್ಲಿ ಅಂತರ್ಜಲ ಸಮೃದ್ಧವಾಗಿರುತ್ತಿತ್ತು. ರೈತರ ತೋಟವೂ ಒಣಗುತ್ತಿರಲಿಲ್ಲ. 2008ರಲ್ಲಿ ಆರಂಭವಾದ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಈಗಲೂ ನೀರು ಬರುವುದು ಅನುಮಾನ ಎಂಬ ಕಾರಣಕ್ಕೆ ಯುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದರ ಹೊಣೆಯನ್ನು ಸರ್ಕಾರವೇ ಹೊರಬೇಕು’ ಎಂದು ವಾಣಿವಿಲಾಸ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಒತ್ತಾಯಿಸಿದ್ದಾರೆ.

‘ಒಂದೆರಡು ವರ್ಷದಲ್ಲಿ ಭದ್ರೆಯ ನೀರು ಬರಲಿದೆ ಎಂಬ ನಿರೀಕ್ಷೆಯಲ್ಲಿ ಹಲವು ರೈತರು ಟ್ಯಾಂಕರ್ ಮೂಲಕ ನೀರು ಉಣಿಸಿ ತೋಟ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಭದ್ರೆಯ ನೀರು ಹರಿಯುವುದು ತಡವಾದಷ್ಟು ರೈತರ ತಾಳ್ಮೆಯ ಕಟ್ಟೆ ಒಡೆಯುತ್ತದೆ. ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಿ ರೈತರ ಪ್ರಾಣ ಉಳಿಸಬೇಕು’ ಎಂದು ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಆರನಕಟ್ಟೆ ಶಿವಕುಮಾರ್ ಮನವಿ ಮಾಡಿದ್ದಾರೆ.

‘ವಾಣಿವಿಲಾಸ ಜಲಾಶಯದಲ್ಲಿ ನೀರು ತಳ ಮಟ್ಟಕ್ಕೆ ಕುಸಿದಿದೆ. ಹಳ್ಳಿಗಳಲ್ಲಿ 800–900 ಅಡಿ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಕಳೆದ ವರ್ಷ 20 ಸಾವಿರಕ್ಕೂ ಹೆಚ್ಚು ತೆಂಗು ಮತ್ತು ಅಡಿಕೆ ಮರಗಳು ಒಣಗಿವೆ. ಈ ವರ್ಷ ಶೇ 80ರಷ್ಟು ತೋಟಗಳು ಒಣಗಿವೆ’ ಎಂದು ತಾಲ್ಲೂಕು ರೈತ ಸಂಘದ ಕಾರ್ಯಾಧ್ಯಕ್ಷ ಸಿ. ಸಿದ್ದರಾಮಣ್ಣ ಆತಂಕ ವ್ಯಕ್ತಪಡಿಸಿದ್ದಾರೆ.

ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ತಾಲ್ಲೂಕಿನ ರಂಗನಾಥಪುರದಲ್ಲಿ ಕಳೆದ ವಾರವಷ್ಟೇ ಕೊಳವೆಬಾವಿ ವೈಫಲ್ಯದಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT