ಸೋಮವಾರ, ಮೇ 23, 2022
26 °C
ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರಿಂದ ಪ್ರತಿಭಟನೆ

ಚಿತ್ರದುರ್ಗ: ಬೆಳೆ ವಿಮೆ ಪರಿಹಾರಕ್ಕೆ ರೈತರ ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಜಿಲ್ಲೆಯಲ್ಲಿ 2020–21ನೇ ಸಾಲಿನ ಬೆಳೆ ವಿಮೆ ಹಾಗೂ ಬೆಳೆ ನಷ್ಟ ಪರಿಹಾರ ತ್ವರಿತವಾಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ವಿಮೆ ನೀಡುವಲ್ಲಿ ವಿಮಾ ಕಂಪನಿಗಳು ಹಾಗೂ ಬೆಳೆ ನಷ್ಟ ಪರಿಹಾರ ನೀಡುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಧಿಕ್ಕಾರ ಕೂಗಿದರು. ಈ ಕುರಿತು ಕೂಡಲೇ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.

ಈ ವಿಚಾರವಾಗಿ ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ವಿಳಂಬ ಮಾಡಿದಲ್ಲಿ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದರೆ ಘೇರಾವ್‌ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ‘2017ರಿಂದ 2020ರ ವರೆಗೂ ರೈತರು ವಿಮೆ ಪಾವತಿಸಿದ್ದಾರೆ. ಆದರೆ, ಸಕಾಲಕ್ಕೆ ಪರಿಹಾರ ನೀಡದೆ ಅವೈಜ್ಞಾನಿಕ ನೀತಿಯಿಂದ ವಿಮಾ ಕಂಪನಿಗಳು ರೈತರಿಗೆ ವಂಚಿಸುತ್ತಿವೆ. ಸರ್ಕಾರ ವಿಮಾ ಕಂಪನಿಗಳಿಗೆ ಸೂಕ್ತ ನಿರ್ದೇಶನ ನೀಡಿ ವಿಮೆ ಪಾವತಿಸಲು ಸೂಚಿಸಬೇಕು’ ಎಂದು ಆಗ್ರಹಿಸಿದರು.

‘ಸರ್ಕಾರ 2020ನೇ ಸಾಲಿನಲ್ಲಿ ಚಿತ್ರದುರ್ಗವನ್ನು ಅತಿವೃಷ್ಟಿ ಜಿಲ್ಲೆ ಎಂಬುದಾಗಿ ಘೋಷಿಸಿದೆ. ರೈತರು ಬಿತ್ತಿದ ಶೇಂಗಾ, ಈರುಳ್ಳಿ ಇತರೆ ಬೆಳೆಗಳು ಅತಿವೃಷ್ಟಿಯಿಂದ ಕೊಳೆತು ಯಾವೊಬ್ಬ ರೈತರಿಗೂ ಹಾಕಿದ ಬಂಡವಾಳ ಕೂಡ ವಾಪಾಸು ಬಂದಿಲ್ಲ. ಇದರಿಂದಾಗಿ ನಷ್ಟ ಅನುಭವಿಸಿದ್ದಾರೆ. ಕೋವಿಡ್‌ ಕಾರಣಕ್ಕೆ ಎರಡು ವರ್ಷದಿಂದ ಕಂಗಾಲಾಗಿದ್ದು, ಅನೇಕರು ಸಾಲಗಾರರಾಗಿದ್ದಾರೆ. ಕಷ್ಟದಲ್ಲಿ ಇರುವ ರೈತರ ಕುರಿತು ಕಾಳಜಿ ಇಲ್ಲವೇ’ ಎಂದು ಪ್ರಶ್ನಿಸಿದರು.

ಮುಖಂಡರಾದ ಕೆ.ಪಿ. ಭೂತಯ್ಯ, ಎಂ.ಬಿ. ತಿಪ್ಪೇಸ್ವಾಮಿ, ಧನಂಜಯ, ಆರ್. ರಾಜಣ್ಣ, ಟಿ. ಹಂಪಣ್ಣ, ಜಿ.ಎಚ್‌. ತಿಪ್ಪೇಸ್ವಾಮಿ, ರಾಮಚಂದ್ರಪ್ಪ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು