ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಂಗಾ ಬಿತ್ತನೆ ಬೀಜ ಖರೀದಿಗೆ ಆಂಧ್ರಪ್ರದೇಶದತ್ತ ಹೊರಟ ರೈತರು

Last Updated 10 ಜೂನ್ 2021, 5:55 IST
ಅಕ್ಷರ ಗಾತ್ರ

ಧರ್ಮಪುರ: ಶೇಂಗಾ ಬಿತ್ತನೆ ಬೀಜಕ್ಕೆ ಸರ್ಕಾರ ನಿಗದಿಪಡಿಸಿರುವ ದರ ಹೆಚ್ಚು ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈತರು ಈಗ ಬಿತ್ತನೆ ಬೀಜ ಖರೀದಿಗೆ ನೆರೆಯ ಆಂಧ್ರಪ್ರದೇಶಕ್ಕೆ ಹೋಗುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಶೇಂಗಾ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಧರ್ಮಪುರ ಹೋಬಳಿ ಸಂಪೂರ್ಣ ಮಳೆಯಾಶ್ರಿತ ಖುಷ್ಕಿ ಭೂಮಿಯಾಗಿದ್ದು, ಶೇಂಗಾವೇ ಪ್ರಧಾನ ಬೆಳೆಯಾಗಿದೆ. ಎರಡು ವರ್ಷಗಳಿಂದ ಮಳೆ ಇಲ್ಲದೇ ಶೇಂಗಾ ಬೆಳೆ ಕೈಗೆ ಬಂದಿಲ್ಲ. ಈ ಬಾರಿ ಸುಮಾರು 17 ಸಾವಿರ ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆಯಾಗುವ ನಿರೀಕ್ಷೆ ಇದೆ. ಕೊರೊನಾ ಲಾಕ್‌ಡೌನ್ ಸಮಸ್ಯೆಯಿಂದ ಬೆಂಗಳೂರು ಮತ್ತಿತರ ನಗರ ಪ್ರದೇಶಗಳಿಂದ ಊರುಗಳಿಗೆ ಬಂದಿರುವ ರೈತರು ಈಗ ಶೇಂಗಾ ಬೆಳೆಯಲು ಉತ್ಸುಕರಾಗಿದ್ದಾರೆ. ಆದರೆ, ಸರ್ಕಾರ ನಿಗದಿಪಡಿಸಿರುವ ಶೇಂಗಾ ದರ ಅವೈಜ್ಞಾನಿಕವಾಗಿದೆ ಎಂದು ರೈತ ಹರಿಯಬ್ಬೆ ಪರಮೇಶ್
ದೂರಿದ್ದಾರೆ.

ಆಂಧ್ರಪ್ರದೇಶದಿಂದ ಖರೀದಿ: ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ ಮಾಡಿಕೊಂಡಿರುವ ರೈತರು ಶೇಂಗಾ ಬೀಜದ ದರ ನೋಡಿ ಕಂಗಾಲಾಗಿದ್ದಾರೆ. ಕಳೆದ ವರ್ಷ ಧರ್ಮಪುರ ರೈತ ಸಂಪರ್ಕ ಕೇಂದ್ರದಲ್ಲಿ ಸುಮಾರು 2,100 ಕ್ವಿಂಟಲ್ ಶೇಂಗಾ ಖರ್ಚಾಗಿತ್ತು. ಈ ಸಾಲಿನಲ್ಲಿ 1,312 ಕ್ವಿಂಟಲ್ ಬೀಜ ಪೂರೈಕೆಯಾಗಿದೆ. ಹತ್ತು ದಿನಗಳಲ್ಲಿ ಕೇವಲ 300 ಕ್ವಿಂಟಲ್ ಬೀಜ ಮಾತ್ರ ಮಾರಾಟವಾಗಿದೆ.

ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ರೈತರು ಬಿತ್ತನೆ ಬೀಜ ಖರೀದಿಗೆ ಇತ್ತ ಸುಳಿಯುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಶೇಂಗಾ ಬಿತ್ತನೆಯ ಬೀಜ 1 ಚೀಲಕ್ಕೆ ₹ 2,010 ಇದೆ. ನೆರೆಯ ಆಂಧ್ರಪ್ರದೇಶದಲ್ಲಿ 1 ಚೀಲಕ್ಕೆ ₹ 1,563 ಇದೆ. ಹೀಗಾಗಿ ಹೋಬಳಿಯ ಗಡಿ ಗ್ರಾಮದ ರೈತರು ಆಂಧ್ರಪ್ರದೇಶದ ಅಮರಾಪುರಂಗೆ ಹೋಗಿ ಶೇಂಗಾ ಖರೀದಿ ಮಾಡಿಕೊಂಡು ಬರುತ್ತಿದ್ದಾರೆ. ಇದರಿಂದ ಇಲ್ಲಿ ಶೇಂಗಾ ಬಿತ್ತನೆಯ ಬೀಜದ ಖರೀದಿ ಸಹಜವಾಗಿಯೇ ಕಡಿಮೆಯಾಗಿದೆ.

‘ಕೊರೊನಾ ಲಾಕ್‌ಡೌನ್‌ನಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಎಲ್ಲ ಸಚಿವರು, ಸಂಸದರು, ಶಾಸಕರು ಸ್ಪಂದಿಸಿ ಶೇಂಗಾ ದರವನ್ನು ಕಡಿಮೆ ಮಾಡಿಸಬೇಕು ಎಂದು ಕೃಷಿ ಸಚಿವರ ಮೇಲೆ ಒತ್ತಡ ಹೇರಬೇಕು’ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬ್ಯಾಡರಹಳ್ಳಿ ಶಿವಕುಮಾರ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT