ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ತೋಟದ ಮನೆಯಲ್ಲೇ ಕೋವಿಡ್ ಆರೈಕೆ ಕೇಂದ್ರ

ಕುಟುಂಬದ ಸದಸ್ಯರು, ಶೋರೂಂ ಸಿಬ್ಬಂದಿಗಾಗಿ ಹಿರಿಯೂರಿನ ಉದ್ಯಮಿಯಿಂದ ನಿರ್ಮಾಣ
Last Updated 1 ಆಗಸ್ಟ್ 2020, 12:34 IST
ಅಕ್ಷರ ಗಾತ್ರ

ಹಿರಿಯೂರು: ಶಿಕ್ಷಣ ಸಂಸ್ಥೆ, ದ್ವಿಚಕ್ರ ವಾಹನ ಶೋರೂಂ ಜತೆಗೆ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಯುವ ಉದ್ಯಮಿಯೊಬ್ಬರು ತಮ್ಮ ಕುಟುಂಬದ ಸದಸ್ಯರಿಗೆ, ತಮ್ಮ ಏಜೆನ್ಸಿ, ಜಮೀನುಗಳಲ್ಲಿ ಕೆಲಸ ಮಾಡುತ್ತಿರುವವರಿಗಾಗಿ ಕೋವಿಡ್ ಆರೈಕೆ ಕೇಂದ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಹಿರಿಯೂರಿನ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಚಿತ್ರದುರ್ಗ ಹಾಗೂ ಹಿರಿಯೂರಿನಲ್ಲಿ ಹೋಂಡಾ ಶೋರೂಂ ಮಾಲೀಕ ಬಿ.ಜಿ. ಗಿರೀಶ್ (ತಿಮ್ಮಾರೆಡ್ಡಿ) ಅವರು ತಮ್ಮ ಕುಟುಂಬದಲ್ಲಿ ಹಾಗೂ ಶೋರೂಂನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದರೆ ಸಕಾಲಕ್ಕೆ ಆಸ್ಪತ್ರೆಯಲ್ಲಿ ಬೆಡ್‌ ಸಿಗದಿದ್ದರೆ ಪರದಾಡುವಂತಾಗಬಾರದು ಎಂದು ಮುಂಜಾಗ್ರತಾ ಕ್ರಮವಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಮೇಟಿಕುರ್ಕೆ ಗ್ರಾಮದ ಸಮೀಪದಲ್ಲಿರುವ ಇವರ ತೋಟ ನೋಡಿಕೊಳ್ಳಲು ತಲಾ ನಾಲ್ಕು ಜನರಿರುವ ಎರಡು ಕುಟುಂಬಗಳಿವೆ. ಜೊತೆಗೆ ಗಿರೀಶ್‌ ಅವರಿಗೆ 80 ವರ್ಷದ ಆಸುಪಾಸಿನ ತಂದೆ–ತಾಯಿ ಇದ್ದಾರೆ. ತೋಟದ ಕೆಲಸ ಮಾಡುವವರಲ್ಲಿ ಒಂದಿಬ್ಬರು ಇದೇ ವಯಸ್ಸಿನವರಿದ್ದಾರೆ. ಇವರಲ್ಲಿ ಯಾರಿಗಾದರೂ ಕೊರೊನಾ ತಗುಲಿದರೆ ಸಕಾಲಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದಿದ್ದರೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಕೋವಿಡ್ ಕೇಂದ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.

‘ಸದ್ಯಕ್ಕೆ ತೋಟದ ಮನೆಯಲ್ಲಿ ಎರಡು ಡಬಲ್ ಕಾಟ್, ಒಂದು ಸಿಂಗಲ್ ಕಾಟ್ ವ್ಯವಸ್ಥೆ ಮಾಡಿದ್ದೇನೆ. ಒಂದೆರಡು ದಿನಗಳಲ್ಲಿ 16x30 ಅಡಿ ಅಳತೆಯ ದೊಡ್ಡ ಹಾಲ್ ನಿರ್ಮಾಣ ಕಾರ್ಯ ಮುಗಿಯಲಿದೆ. ಇಲ್ಲಿ ಎಂಟು ಜನರನ್ನು ಕ್ವಾರಂಟೈನ್ ಮಾಡಬಹುದು. ಚಿತ್ರದುರ್ಗದ ಶೋರೂಂನಲ್ಲಿ 60, ಹಿರಿಯೂರಿನಲ್ಲಿ 13 ಸಿಬ್ಬಂದಿ, ನಮ್ಮ ಮನೆಯಲ್ಲಿ 10 ಜನ, ತೋಟದಲ್ಲಿ 8 ಜನರಿದ್ದಾರೆ. ತುರ್ತು ಸಂದರ್ಭ ಬಂದರೆ ಅನುಕೂಲಕ್ಕೆ ಬರುತ್ತದೆ ಎಂದು ಮುನ್ನೆಚ್ಚರಿಕೆ ವಹಿಸಿದ್ದೇನೆ’ ಎಂದು ಗಿರೀಶ್ ಹೇಳಿದರು.

‘ಕ್ವಾರಂಟೈನ್‌ಗೆ ಬೇಕಿರುವ 15 ಪಿಪಿಇ ಕಿಟ್, ಎನ್–95 ಮಾಸ್ಕ್, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ತರಿಸಿದ್ದೇನೆ. ಬೆಂಗಳೂರಿನಲ್ಲಿರುವ ನನ್ನ ತಮ್ಮನಿಗೆ ಜ್ವರ ಕಾಣಿಸಿಕೊಂಡಾಗ ಆಸ್ಪತ್ರೆಗೆ ಸೇರಿಸಲು ಪರದಾಡಿದ್ದರಿಂದಲೇ ಮುನ್ನೆಚ್ಚರಿಕಾ ಕ್ರಮವಾಗಿ ಆರೈಕೆ ಕೇಂದ್ರ ನಿರ್ಮಿಸುತ್ತಿದ್ದೇವೆ. ಸ್ವಂತ ಕ್ವಾರಂಟೈನ್ ಕೇಂದ್ರದಿಂದ ನಮ್ಮ ಕೆಲಸಗಾರರಲ್ಲಿ ಆತ್ಮ ವಿಶ್ವಾಸ ಹೆಚ್ಚಿದೆ. ಈಗ ಕೆಲಸಕ್ಕೆ ಧೈರ್ಯದಿಂದ ಬರುತ್ತಿದ್ದಾರೆ’ ಎಂದು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT