ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆನಾಡ ಚಿತ್ರಮಂದಿರ ತೆರೆಯುವುದು ಅನುಮಾನ

ಚಿತ್ರಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ ಕೇಂದ್ರ ಸರ್ಕಾರ, ಕಠಿಣ ನಿಯಮ ಪಾಲನೆ ಕಷ್ಟ
Last Updated 14 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಏಳು ತಿಂಗಳ ಬಳಿಕ ಚಿತ್ರಪ್ರದರ್ಶನಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ, ಕೋಟನಾಡಿನ ಚಿತ್ರಮಂದಿರಗಳಲ್ಲಿ ಗುರುವಾರದಿಂದ ಸಿನಿಮಾ ಪ್ರದರ್ಶನಗೊಳ್ಳುವುದು ಅನುಮಾನ. ಸೋಂಕಿನ ಭಯದಿಂದ ಪ್ರೇಕ್ಷಕರು ಹೊರಬರುವವರೆಗೂ ಕಾದುನೋಡಲು ಚಿತ್ರಮಂದಿರದ ಮಾಲೀಕರು ಮುಂದಾಗಿದ್ದಾರೆ.

ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ನಾಲ್ಕು, ಚಳ್ಳಕೆರೆ ನಾಲ್ಕು, ಹಿರಿಯೂರು ಎರಡು, ಮೊಳಕಾಲ್ಮುರು ಹಾಗೂ ಹೊಸದುರ್ಗ ಪಟ್ಟಣದಲ್ಲಿ ತಲಾ ಒಂದು ಸಿನಿಮಾ ಮಂದಿರಗಳಿವೆ. ಏಕಪರದೆಯ 12 ಚಿತ್ರಮಂದಿರಗಳಲ್ಲಿ ಹಿರಿಯೂರು ಹಾಗೂ ಚಳ್ಳಕೆರೆಯ ಎರಡು ಸಿನಿಮಾ ಮಂದಿರಗಳು ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿವೆ. ಉಳಿದವರು ಇನ್ನಷ್ಟು ದಿನ ಬಾಗಿಲು ಮುಚ್ಚಲು ನಿರ್ಧರಿಸಿದ್ದಾರೆ.

ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ ಸರ್ಕಾರ ಹಲವು ನಿರ್ಬಂಧಗಳನ್ನು ವಿಧಿಸಿದೆ. ಈ ನಿರ್ಬಂಧಗಳನ್ನು ಪಾಲನೆ ಮಾಡುವುದು ಮಾಲೀಕರಿಗೆ ಕಷ್ಟವಾಗಿದೆ. ಲಾಕ್‌ಡೌನ್‌ ಸಂಕಷ್ಟಕ್ಕೆ ಸಿಲುಕಿದ ಚಿತ್ರಮಂದಿರದ ಮಾಲೀಕರು ಮುಂದಿಟ್ಟ ಬೇಡಿಕೆಗಳಿಗೆ ಸರ್ಕಾರ ಈವರೆಗೆ ಸ್ಪಂದಿಸಿಲ್ಲ. ಸರ್ಕಾರದ ಭರವಸೆ ಸಿಗುವವರೆಗೂ ಚಿತ್ರಮಂದಿರ ತೆರೆಯದಿರಲು ಮಾಲೀಕರ ಸಂಘ ಸಲಹೆ ನೀಡಿದೆ. ಇದಕ್ಕೆ ಕೋಟೆನಾಡಿನ ಬಹುತೇಕ ಚಿತ್ರಮಂದಿರದ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿತ್ಯ ಏರುತ್ತಿದೆ. ಕೋವಿಡ್‌ ಪ್ರಕರಣಗಳ ಸಂಖ್ಯೆ ಹತ್ತು ಸಾವಿರದ ಗಡಿದಾಟಿದೆ. ಇದು ಸಾರ್ವಜನಿಕರನ್ನು ಇನ್ನಷ್ಟು ಭೀತಿಗೆ ತಳ್ಳಿದೆ. ಮಾರುಕಟ್ಟೆಗೆ ಭೇಟಿ ನೀಡಲು ಹಿಂಜರಿಯುವ ಸಾರ್ವಜನಿಕರು ಥಿಯೇಟರ್‌ಗೆ ಬರುತ್ತಾರೆಯೇ ಎಂಬ ಅನುಮಾನ ಚಿತ್ರಮಂದಿರದ ಮಾಲೀಕರಲ್ಲಿದೆ. ಸಿನಿಮಾ ಪ್ರದರ್ಶನಕ್ಕೆ ಹಾಕುವ ಬಂಡವಾಳ ಮರಳುವ ಭರವಸೆ ಇಲ್ಲವಾಗಿದೆ. ಇವೆಲ್ಲವೂ ಚಿತ್ರಪ್ರದರ್ಶನದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.

ಸಿನಿಮಾ ಪ್ರದರ್ಶನಕ್ಕೆ ಸಜ್ಜಾಗುವ ಚಿತ್ರಮಂದಿರ ಕೋವಿಡ್‌ ನಿಯಮವನ್ನು ಕಟ್ಟನಿಟ್ಟಾಗಿ ಪಾಲನೆ ಮಾಡುವಂತೆ ಸರ್ಕಾರ ಸೂಚಿಸಿದೆ. ಸರ್ಕಾರದ ಮಾರ್ಗಸೂಚಿಯ ಪ್ರಕಾರ ಡಿಜಿಟಲ್‌ ಟಿಕೆಟ್‌ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಮಾಸ್ಕ್‌ ಧರಿಸಿದ ಪ್ರೇಕ್ಷಕರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಬೇಕು. ಪ್ರತಿಯೊಬ್ಬರನ್ನು ಥರ್ಮಲ್‌ ಸ್ಕ್ಯಾನಿಂಗ್‌ಗೆ ಒಳಪಡಿಸಬೇಕು. ಪ್ರದರ್ಶನ ಮುಗಿದ ಬಳಿಕ ಕಡ್ಡಾಯವಾಗಿ ಸ್ಯಾನಿಟೈಸೇಷನ್‌ ಮಾಡಬೇಕು. ಚಿತ್ರದುರ್ಗ ಜಿಲ್ಲೆಯಲ್ಲಿ ಇಂತಹ ನಿಯಮಗಳನ್ನು ಪಾಲನೆ ಮಾಡುವುದು ಕಷ್ಟ ಎಂಬುದು ಚಿತ್ರಮಂದಿರದ ಮಾಲೀಕರ ಅಭಿಪ್ರಾಯ.

‘ಚಿತ್ರಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆಯಾದರೂ ಹೊಸ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಒಂದೆರಡು ಸಿನಿಮಾಗಳನ್ನು ಎಲ್ಲ ಥಿಯೇಟರ್‌ಗಳಲ್ಲಿ ಹಾಕಲು ಸಾಧ್ಯವಿಲ್ಲ. ಹಳೆಯ ಚಿತ್ರಗಳನ್ನು ಪ್ರದರ್ಶಿಸಿದರೆ ಪ್ರೇಕ್ಷಕರು ಬರುವುದು ಅನುಮಾನ. ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ ಚಿತ್ರಗಳು ಬಿಡುಗಡೆಯಾದರೆ ಮಾತ್ರ ಚಿತ್ರಮಂದಿರಗಳು ಕಳೆಗಟ್ಟುತ್ತವೆ. ಕೆಲವೇ ಸಿನಿಮಾಗಳನ್ನು ನಂಬಿಕೊಂಡು ಚಿತ್ರಮಂದಿರ ತೆರೆಯುವುದು ಹೊರೆಯಾಗುತ್ತದೆ’ ಎನ್ನುತ್ತಾರೆ ಜಿಲ್ಲಾ ಚಿತ್ರಪ್ರದರ್ಶಕರ ಸಂಘದ ಅಧ್ಯಕ್ಷ ಜಿ.ಪಿ.ಕುಮಾರ್‌.

ಸುಪ್ರಸಿದ್ಧ ತಾರೆಯರ ದೊಡ್ಡ ಬಜೆಟ್‌ ಸಿನಿಮಾಗಳೇ ಏಕಪರದೆ ಚಿತ್ರಮಂದಿರದ ಜೀವಾಳ. ಬಿಡುಗಡೆಯಾದ ಹಲವು ದಿನ ಪ್ರೇಕ್ಷಕರು ಕಿಕ್ಕಿರಿದು ಸೇರುತ್ತಿದ್ದರು. ಅರ್ಧದಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಇರುವುದರಿಂದ ದೊಡ್ಡ ಬಜೆಟ್‌ ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಇದರಿಂದ ಚಿತ್ರಮಂದಿರದ ಬಾಗಿಲು ತೆಗೆಯಲು ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ.

‘ಬಾಗಿಲು ತೆರೆದ ಚಿತ್ರಮಂದಿರದ ನಿರ್ವಹಣೆಗೆ ನಿತ್ಯ ₹ 10 ಸಾವಿರದ ಅಗತ್ಯವಿದೆ. ಸಿಬ್ಬಂದಿ ವೆಚ್ಚ, ಸ್ಯಾನಿಟೈಸೇಷನ್‌, ತೆರಿಗೆ ಪಾವತಿಯನ್ನು ಕಡ್ಡಾಯವಾಗಿ ಮಾಡಬೇಕಾಗುತ್ತದೆ. ವೆಚ್ಚ ಸರಿದೂಗಿಸುವ ಆದಾಯ ಸಿಗದಿದ್ದರೆ ಸಂಕಷ್ಟ ಇನ್ನಷ್ಟು ಹೆಚ್ಚಾಗುತ್ತದೆ’ ಎನ್ನುತ್ತಾರೆ ಕುಮಾರ್‌.

ಜಿಎಸ್‌ಟಿ, ವಿದ್ಯುತ್‌ ಬಿಲ್‌ ರಿಯಾಯಿತಿ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಸಂಕಷ್ಟದಲ್ಲಿರುವ ಮಾಲೀಕರಿಗೆ ಸ್ಪಂದಿಸುವವರೆಗೆ ಚಿತ್ರಮಂದಿರದ ಬಾಗಿಲು ತೆರೆಯುವುದಿಲ್ಲ.

ಜಿ.‍ಪಿ.ಕುಮಾರ್‌

ಜಿಲ್ಲಾ ಚಿತ್ರಪ್ರದರ್ಶಕರ ಸಂಘದ ಅಧ್ಯಕ್ಷ

ಆರು ಅಡಿ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಸೂಚಿಸಿದೆ. ಆಸನಗಳ ಮರುಹೊಂದಾಣಿಕೆ ಸೇರಿ ಚಿತ್ರಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಗುತ್ತಿಗೆದಾರರಿಗೆ ಅನುಮತಿ ನೀಡಿದ್ದೇವೆ.

ಮನೋಜ್‌ ಹೊಸಮನೆ
ಪದ್ಮಾ ಚಿತ್ರಮಂದಿರ, ಚಳ್ಳಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT