ಸೋಮವಾರ, ಡಿಸೆಂಬರ್ 6, 2021
25 °C
ಸರಳ ಮೆರವಣಿಗೆ ಪೊಲೀಸರ ಬಿಗಿ ಭದ್ರತೆ, ವಾಹನ ಸಂಚಾರ ನಿರ್ಬಂಧ

ಮಹಾಗಣಪತಿ ವಿಸರ್ಜನೆಗೆ ಚಿತ್ರದುರ್ಗ ನಗರ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಹಿಂದೂಮಹಾಗಣಪತಿ ವಿಸರ್ಜನೆ ಶನಿವಾರ ನಡೆಯಲಿದ್ದು, ಕೋಟೆನಗರಿ ಸಜ್ಜಾಗಿದೆ. ಗಣೇಶಮೂರ್ತಿ ವಿಸರ್ಜನೆ ಸರಳವಾಗಿ ನಡೆಯಲಿದೆಯಾದರೂ ಭದ್ರತೆ ಮಾತ್ರ ಎಂದಿನಂತೆ ಬಿಗಿಗೊಳಿಸಲಾಗಿದೆ.

ಮೆರವಣಿಗೆ ಸಾಗುವ ಮಾರ್ಗವನ್ನು ಸಿಂಗರಿಸಲಾಗಿದೆ. ಬಹುತೇಕ ವೃತ್ತಗಳು ಕೇಸರಿಮಯವಾಗಿವೆ. ಕಟ್ಟಡಗಳು, ವೃತ್ತಗಳಲ್ಲಿ ವಿದ್ಯುತ್‌ ದೀಪಲಂಕಾರ ಮಾಡಲಾಗಿದೆ. ಅದ್ಧೂರಿ ಶೋಭಯಾತ್ರೆ ಇಲ್ಲವಾದರೂ ಸಿದ್ಧತೆಗಳು ಮಾತ್ರ ನಡೆಯುತ್ತಿವೆ. ಪೊಲೀಸರು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಮಧ್ಯಾಹ್ನ 3 ಗಂಟೆಗೆ ವಿಸರ್ಜನಾ ಮೆರವಣಿಗೆ ಹೊರಡಲಿದೆ. ಜಿಲ್ಲಾ ಕ್ರೀಡಾಂಗಣ ರಸ್ತೆಯಲ್ಲಿ ಪುಷ್ಪಾಲಂಕೃತ ರಥಕ್ಕೆ ಮಠಾಧೀಶರು ಚಾಲನೆ ನೀಡಲಿದ್ದಾರೆ. ರಾಮದೇವರ ವಿಗ್ರಹ, ಉತ್ಸವ ಸಮಿತಿಯ ಸ್ವಯಂ ಸೇವಕರು ಹಾಗೂ ನಾದಸ್ವರದ ತಂಡ ಗಣೇಶಮೂರ್ತಿಯೊಂದಿಗೆ ಸಾಗಲಿದೆ. ವಿಸರ್ಜನಾ ಮೆರವಣಿಗೆಯಲ್ಲಿ ಸಾರ್ವಜನಿಕರು ಭಾಗವಹಿಸಲು ಅವಕಾಶವಿಲ್ಲ.

ಬಿ.ಡಿ.ರಸ್ತೆಯ ಮೂಲಕ ಸಾಗುವ ಮೆರವಣಿಗೆ ಸಂಜೆ 7.30ಕ್ಕೆ ಚಂದ್ರವಳ್ಳಿ ಕೆರೆ ತಲುಪಲಿದೆ. ಮಾರ್ಗ ಮಧ್ಯದ ಗಾಂಧಿ ವೃತ್ತದಲ್ಲಿ ಮಾತ್ರ ಆರತಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಉಳಿದಂತೆ ಯಾವುದೇ ಸ್ಥಳದಲ್ಲಿ ಪುಷ್ಪಾಲಂಕೃತ ರಥ ನಿಲುಗಡೆ ಮಾಡುವುದಿಲ್ಲ ಎಂದು ಉತ್ಸವ ಸಮಿತಿ ಸ್ಪಷ್ಟಪಡಿಸಿದೆ.

ಗಾಂಧಿ ವೃತ್ತ, ಮದಕರಿ ನಾಯಕ ವೃತ್ತ, ಒನಕೆ ಓಬವ್ವ ವೃತ್ತ, ಕನಕ ವೃತ್ತವನ್ನು ಕೇಸರಿ ಬಟ್ಟೆಯಿಂದ ಅಲಂಕಾರ ಮಾಡಲಾಗಿದೆ. ವೃತ್ತದ ಪ್ರತಿಮೆಯ ಹಿಂಭಾಗದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಪ್ರತಿಮೆಗಳಿಗೆ ಶನಿವಾರ ಬೆಳಿಗ್ಗೆ ಮಾಲಾರ್ಪಣೆ ಮಾಡಲಿದ್ದಾರೆ.

ವಾಹನ ಸಂಚಾರಕ್ಕೆ ನಿರ್ಬಂಧ: ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಬಿ.ಡಿ.ರಸ್ತೆ ಹಾಗೂ ಹೊಳಲ್ಕೆರೆ ರಸ್ತೆಯಲ್ಲಿ ಸಾಗಲಿದೆ. ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ಬಗೆಯ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಂಗಳೂರು ಮತ್ತು ಚಳ್ಳಕೆರೆ ಮಾರ್ಗವಾಗಿ ಸಾಗುವ ವಾಹನಗಳು ರಾಷ್ಟ್ರೀಯ ಹೆದ್ದಾರಿ-4ರ ಬೈಪಾಸ್ ರಸ್ತೆ, ಮೆದೆಹಳ್ಳಿ ರಸ್ತೆ, ಎಪಿಎಂಸಿ ಮಾರುಕಟ್ಟೆ ಮೂಲಕ ಬಸ್ ನಿಲ್ದಾಣ ತಲುಪಬಹುದು. ಪುನಾ ಇದೇ ಮಾರ್ಗದಲ್ಲಿ ತೆರಳಲು ಅವಕಾಶ ಕಲ್ಪಿಸಲಾಗಿದೆ.

ಶಿವಮೊಗ್ಗ, ಹೊಳಲ್ಕೆರೆ, ಭೀಮಸಮುದ್ರದ ಮಾರ್ಗದಿಂದ ಬರುವ ವಾಹನಗಳು ರಾಷ್ಟ್ರೀಯ ಹೆದ್ದಾರಿ-13 ಬೈಪಾಸ್‍ನಲ್ಲಿ ಸಾಗಬೇಕು. ಮುರುಘಾ ಮಠದ ಸಮೀಪ ರಾಷ್ಟ್ರೀಯ ಹೆದ್ದಾರಿ–4ಕ್ಕೆ ಸೇರಬೇಕು. ಅಲ್ಲಿಂದ ಬಿ.ಡಿ.ರಸ್ತೆಯ ಮೂಲಕ ಬಸ್‌ ನಿಲ್ದಾಣ ತಲುಪಬೇಕು. ಪುನಾ ಇದೇ ಮಾರ್ಗದಲ್ಲಿ ತೆರಳಬೇಕು. ದಾವಣಗೆರೆ ಮಾರ್ಗವಾಗಿ ಸಂಚರಿಸುವ ಬಸ್‌ಗಳಿಗೆ ಯಾವುದೇ ತೊಂದರೆ ಇಲ್ಲ.

ಮದ್ಯದ ಮಾರಾಟಕ್ಕೆ ನಿಷೇಧ: ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಅಂಗವಾಗಿ ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಮಾದ್ಯ ಮಾರಾಟ ನಿಷೇಧಿಸಲಾಗಿದೆ. ಸೆ.13ರ ಬೆಳಿಗ್ಗೆ 6ರವರೆಗೂ ಮದ್ಯದಂಗಡಿ ಬಾಗಿಲು ಮುಚ್ಚುವಂತೆ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಆದೇಶ ಹೊರಡಿಸಿದ್ದಾರೆ.

‘ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಗುಂಪು ಸೇರಲು ಅವಕಾಶವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ಗಣೇಶಮೂರ್ತಿ ವಿಸರ್ಜನೆ ನಡೆಯಲದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು