ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ: ಮಲ್ಟಿಜಿಮ್‌ ಯುಗದಲ್ಲೂ ಮುಕ್ಕಾಗದ ಗರಡಿಮನೆ ಖ್ಯಾತಿ

ದುರ್ಗದ ಪೈಲ್ವಾನರಿಗೆ ಪ್ರೇರಕ ಶಕ್ತಿಯಾಗಿದ್ದ ಕುಸ್ತಿ, ಅಳಿಯದ ಪರಂಪರೆ
Published 25 ಆಗಸ್ಟ್ 2024, 5:48 IST
Last Updated 25 ಆಗಸ್ಟ್ 2024, 5:48 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಂಟರ್‌ನೆಟ್‌ ಯುಗದಲ್ಲಿ ಯುವಜನರು ದೈಹಿಕ ಆರೋಗ್ಯಕ್ಕಾಗಿ ಮಲ್ಟಿಜಿಮ್‌, ಅತ್ಯಾಧುನಿಕ ಫಿಟ್‌ನೆಸ್‌ ಕೇಂದ್ರಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಕೋಟೆನಾಡಿನ ಹುಡುಗರು ಇಂದಿಗೂ ಗರಡಿಮನೆಯಲ್ಲಿ ಕಸರತ್ತು ಮಾಡುತ್ತಿದ್ದು ಐತಿಹಾಸಿಕ ಪರಂಪರೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆಗೂ ಗರಡಿಮನೆಗೂ, ಕುಸ್ತಿಗೂ ಆಪ್ತ ಸಂಬಂಧವಿದೆ. ನಾಯಕ ಅರಸರ ಕಾಲದಲ್ಲಿ ಕುಸ್ತಿಗೆ ಪ್ರಮುಖ ಆದ್ಯತೆ ನೀಡಲಾಗಿತ್ತು ಎಂಬ ಮಾಹಿತಿ ಇತಿಹಾಸದಲ್ಲಿ ದಾಖಲಾಗಿದೆ. ಪಾಳೇಗಾರರ ಪೌರುಷ, ಪರಾಕ್ರಮಕ್ಕೆ ಕುಸ್ತಿಯೇ ಆಧಾರವಾಗಿತ್ತು. ಗಲ್ಲಿಗಲ್ಲಿಗಳಲ್ಲಿ ಗರಡಿಮನೆಗಳಿದ್ದವು ಎಂದು ಹಿರಿಯರು ಹೇಳುತ್ತಾರೆ.

ಮೈಸೂರು ರಾಜರಿಂದ ‘ರಾಜ್ಯ ಪೈಲ್ವಾನ್‌’ ಎನಿಸಿಕೊಂಡಿದ್ದ ನಂಜಪ್ಪ, ಖ್ಯಾತ ಪೈಲ್ವಾನ್‌ಗಳಾಗಿದ್ದ ರಾಮಣ್ಣ, ಗೋಪಾಲಪ್ಪ, ಭೈರಪ್ಪ ಮುಂತಾದವರು ದುರ್ಗದ ಕುಸ್ತಿ ಕಲೆಯನ್ನು ರಾಜ್ಯ, ಹೊರರಾಜ್ಯಗಳವರೆಗೂ ಕೊಂಡೊಯ್ದಿದ್ದರು. ಅಂತಹ ಗರಡಿ ಮನೆಯ ಪರಂಪರೆ ಇಂದಿಗೂ ಉಳಿದುಕೊಂಡು ಬಂದಿರುವುದು ವಿಶೇಷವಾಗಿದೆ.

ನಗರದಲ್ಲಿ ಈಗಲೂ ಮೂರು ಪ್ರಮುಖ ಗರಡಿಮನೆಗಳಿವೆ. ಬುರುಜನಹಟ್ಟಿ ಗರಡಿಮನೆ ಅಲ್ಲಿಯ ಯುವಕರಿಗೆ ಪ್ರೇರಣೆಯ ಶಕ್ತಿ ಕೇಂದ್ರವಾಗಿದೆ. ಬಡಾವಣೆಯ ಹತ್ತಾರು ಯುವಕರು ನಿತ್ಯವೂ ಅಲ್ಲಿಗೆ ಬಂದು ಕಸರತ್ತು ಮಾಡುತ್ತಾರೆ. ಬುರುಜನಹಟ್ಟಿ ಗರಡಿಮನೆಗೆ ದೊಡ್ಡ ಹಿನ್ನೆಲೆ ಇದ್ದು ಹಲವರು ಇಲ್ಲಿ ಕಸರತ್ತು ಮಾಡಿ ಊರಿಗೆ ಕೀರ್ತಿ ತಂದಿದ್ದಾರೆ. ಗರಡಿಮನೆಯಲ್ಲಿ ಹಲವು ಉತ್ಸವಗಳು ನಡೆಯಲಿದ್ದು, ಮಟ್ಟಿ ಉತ್ಸವ ಪ್ರಮುಖವಾದುದಾಗಿದೆ.

‘ನಾಗರಹಾವು’ ಚಿತ್ರದಲ್ಲಿ ನಾಯಕನಟ ವಿಷ್ಣುವರ್ಧನ್‌ ಕುಸ್ತಿ ತರಬೇತಿ ಪಡೆಯುತ್ತಿದ್ದ ಗರಡಿಮನೆ ಇದೇ ಆಗಿದ್ದು, ಈ ವಿಷಯ ಇಲ್ಲಿಯ ಯುವಕರಿಗೆ ಹೆಮ್ಮೆಯಾಗಿದೆ. ವಿಷ್ಣುವರ್ಧನ್‌ ಅವರು ಕುಸ್ತಿ ಆಡುವ ದೃಶ್ಯಗಳ ಛಾಯಾಚಿತ್ರಗಳನ್ನು ಸಂಗ್ರಹಿಸಿ ಇಡಲಾಗಿದೆ. ಈಗ ಈ ಗರಡಿಮನೆಯ ಚಿತ್ರಣ ಬದಲಾಗಿದ್ದು, ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಕೋಟೆಯ ತಟದಲ್ಲೇ ಇರುವ ಈ ಗರಡಿಮನೆ ಇತಿಹಾಸದ ಹಲವು ನೆನಪುಗಳನ್ನು ಬಿಚ್ಚಿಡುವ ತಾಣವಾಗಿದೆ.

‘ಮೊದಲು ನಮ್ಮ ಗರಡಿಮನೆಯಲ್ಲಿ ಕುಸ್ತಿ ತರಬೇತಿ ನೀಡುವ ಪೈಲ್ವಾನರಿದ್ದರು. ಈಗ ಎಲ್ಲರಿಗೂ ವಯಸ್ಸಾಗಿದ್ದು ಯಾರೂ ತರಬೇತಿ ನೀಡುತ್ತಿಲ್ಲ. ಆದರೂ ನಾವೇ ಸ್ವಯಂ ಅಭ್ಯಾಸ ಮಾಡುತ್ತಿದ್ದೇವೆ. ಈ ಗರಡಿ ಮನೆ ಮುಂದಿನ ಪೀಳಿಗೆಗೂ ಉಳಿಯಬೇಕು ಎಂಬುದೇ ನಮ್ಮ ಆಶಯ’ ಎಂದು ಬುರುಜನಹಟ್ಟಿ ಗರಡಿ ಮನೆ ಯುವಕರ ಸಂಘದ ಅಧ್ಯಕ್ಷ ತೇಜಣ್ಣ ಹೇಳಿದರು.

ದೊಡ್ಡಪೇಟೆಯಲ್ಲಿರುವ ದೊಡ್ಡಗರಡಿ ಮನೆ ಜಿಲ್ಲೆಯ ಅತ್ಯಂತ ಹಳೆಯ ಗರಡಿಮನೆಯಾಗಿದೆ. ರಾಜ್ಯ, ಹೊರರಾಜ್ಯಗಳ ಖ್ಯಾತ ಪೈಲ್ವಾನರು ಇದೇ ಗರಡಿಯಿಲ್ಲಿ ಅಭ್ಯಾಸ ಮಾಡಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಈಚೆಗೆ ಈ ಗರಡಿಮನೆ ತನ್ನ ಗತ ವೈಭವವನ್ನು ಕಳೆದುಕೊಂಡಿದೆ. ಆದರೂ ಕೆಲ ಯುವಕರು ಸ್ವಯಂ ಪ್ರೇರಿತವಾಗಿ ಕುಸ್ತಿ ಅಭ್ಯಾಸ ಮಾಡುತ್ತಿದ್ದಾರೆ. ಶೃಂಗೇರಿ ಮಠ ಬಡಾವಣೆಯಲ್ಲಿರುವ ಚಿಕ್ಕ ಗರಡಿಗೂ ಐತಿಹಾಸಿಕ ಹಿನ್ನೆಲೆ ಇದೆ. ಈ ಭಾಗದ ಯುವಕರು ಚಿಕ್ಕಗರಡಿ ಮನೆಯಲ್ಲಿ ಅಭ್ಯಾಸ ಮುಂದುವರಿಸಿದ್ದಾರೆ.

‘ಜಿಲ್ಲೆಯಲ್ಲಿ ಗರಡಿ ಮನೆ ಸಂಸ್ಕೃತಿ ಎಂದಿಗೂ ಅಳಿಯುವುದಿಲ್ಲ. ಇಲ್ಲಿಯ ಐತಿಹಾಸಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಗರಡಿಮನೆಗಳಿಗೆ ಸರ್ಕಾರದ ಸಹಾಯ ಬೇಕಾಗಿದೆ’ ಎಂದು ದೊಡ್ಡಗರಡಿ ಸಂಘದ ಅಧ್ಯಕ್ಷ ತಿಪ್ಪಣ್ಣ ಹೇಳಿದರು.

ಮಟ್ಟಿ ಉತ್ಸವದ ಅಂಗವಾಗಿ ಗರಡಿಮನೆಯ ಮಣ್ಣಿಗೆ ಮೂರುತಿ ರೂಪ ನೀಡಿರುವುದು
ಮಟ್ಟಿ ಉತ್ಸವದ ಅಂಗವಾಗಿ ಗರಡಿಮನೆಯ ಮಣ್ಣಿಗೆ ಮೂರುತಿ ರೂಪ ನೀಡಿರುವುದು
ಗರಡಿಮನೆಯಲ್ಲಿರುವ ಗುಂಡು ಹಾಗೂ ಇತರ ಪರಿಕರಗಳು
ಗರಡಿಮನೆಯಲ್ಲಿರುವ ಗುಂಡು ಹಾಗೂ ಇತರ ಪರಿಕರಗಳು

ಗರಡಿಮನೆಯಲ್ಲಿ ಜಿಮ್‌ ಪರಿಕರ!

ಚಿತ್ರದುರ್ಗದಲ್ಲಿರುವ ಮೂರೂ ಗರಡಿಮನೆಗಳಲ್ಲಿ ಸ್ಥಳೀಯರು ಜಿಮ್ ಪರಿಕರಗಳನ್ನು ತಂದಿಟ್ಟಿದ್ದಾರೆ. ಜಿಮ್‌ ಇಷ್ಟಪಡುವವರು ಜಿಮ್‌ ಜೊತೆಗೆ ಗರಡಿಮನೆಯಲ್ಲೂ ಕಸರತ್ತು ಮಾಡಲು ಅವಕಾಶವಿದೆ. ‘ಯುವಕರು ಜಿಮ್‌ ಕಡೆ ಹೊರಳುತ್ತಿರುವ ಕಾರಣ ಗರಡಿಮನೆಯಲ್ಲೇ ಜಿಮ್‌ ಉಪಕರಣ ಇಡಲಾಗಿದೆ. ಗರಡಿ ಮನೆಗಳನ್ನು ಉಳಿಸಲು ಇದು ಅನಿವಾರ್ಯವಾಗಿದೆ’ ಎಂದು ಬುರುಜನಹಟ್ಟಿ ಗರಡಿಮನೆ ಸಂಘದ ಸದಸ್ಯರು ಹೇಳಿದರು.

ಮಣ್ಣು ಉತ್ಸವದ ವೈಭವ

ಗರಡಿಮನೆಗಳಲ್ಲಿ ಪ್ರತಿ ವರ್ಷ ನಡೆಯುವ ಮಣ್ಣು ಪೂಜೆ (ಮಟ್ಟಿ ಉತ್ಸವ) ಐತಿಹಾಸಿಕ ಹಿನ್ನೆಲೆ ಹೊಂದಿದೆ. ಬುರುಜನಹಟ್ಟಿಯಲ್ಲಿ ಕಳೆದೆರಡು ದಿನಗಳಿಂದ ವೈಭವಯುತವಾಗಿ ಮಣ್ಣಿನ ಪೂಜೆ ನಡೆಯುತ್ತಿದೆ. ಗರಡಿಮನೆಯ ಮಣ್ಣಿಗೆ ಮೂರ್ತಿ ರೂಪ ಕೊಟ್ಟು ಪೂಜೆಗೈಯಲಾಗುತ್ತದೆ. ಇಡೀ ಬಡಾವಣೆಗೆ ದೀಪಾಲಂಕಾರ ಮಾಡಲಾಗಿದ್ದು ಗರಡಿಮನೆಯನ್ನು ಯುವಜನರು ಆರಾಧಿಸುತ್ತಿದ್ದಾರೆ. ಸೆ.21ರಂದು ದೊಡ್ಡ ಗರಡಿಮನೆಯಲ್ಲಿ ಮಟ್ಟಿ ಉತ್ಸವ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT