ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಮಳೆ: ಗರಿಗೆದರಿದ ಕೃಷಿ ಕಾರ್ಯ

ರಾಯಾಪುರದಲ್ಲಿ 79 ಮಿ.ಮೀ ಮಳೆ ದಾಖಲು
Last Updated 8 ಜುಲೈ 2021, 4:13 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನಾ ದ್ಯಂತ ಮಂಗಳವಾರ ರಾತ್ರಿ ಹದಮಳೆ ಸುರಿದಿದ್ದು, ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಗರಿಗೆದರಿವೆ.

ಮಂಗಳವಾರ ಬೆಳಿಗ್ಗೆಯಿಂದ ತೀವ್ರ ಬಿಸಿಲಿನಿಂದ ಜನರು ತತ್ತರಿಸಿದ್ದರು. ರಾತ್ರಿ 8.30ರ ಸುಮಾರಿಗೆ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಆರಂಭವಾದ ಮಳೆ 1 ಗಂಟೆಗೂ ಹೆಚ್ಚು ಕಾಲ ಸುರಿಯಿತು.

ತಾಲ್ಲೂಕು ಕಚೇರಿ ಮೂಲಗಳ ಪ್ರಕಾರ ಮೊಳಕಾಲ್ಮುರು ವ್ಯಾಪ್ತಿಯಲ್ಲಿ 18.4 ಮಿಲಿ ಮೀಟರ್‌, ಬಿ.ಜಿ.ಕೆರೆ ಭಾಗದಲ್ಲಿ 24 ಮಿ.ಮೀ, ರಾಯಾಪುರ ವ್ಯಾಪ್ತಿಯಲ್ಲಿ 79 ಮಿ.ಮೀ, ರಾಂಪುರ ಭಾಗದಲ್ಲಿ 40 ಮಿ.ಮೀ ಮತ್ತು ದೇವಸಮುದ್ರ ಸುತ್ತಮುತ್ತ 50 ಮಿ.ಮೀ ಮಳೆ ದಾಖಲಾಗಿದೆ.

ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಶೇಂಗಾ ಬಿತ್ತನೆಗೆ ಇದು ಹೆಚ್ಚು ಅನುಕೂಲ ಮಾಡಿಕೊಟ್ಟಿದೆ. ಭೂಮಿ ಸಿದ್ಧತೆ ಕಾರ್ಯ ಮಾಡಲಾಗಿತ್ತು. ಈ ಮಳೆಗೆ ಬಹುತೇಕ ರೈತರು ಬಿತ್ತನೆ ಮಾಡುತ್ತಿದ್ದಾರೆ. ತಾಲ್ಲೂಕಿನ 1,900 ಹೆಕ್ಟೇರ್ ಪ್ರದೇಶದಲ್ಲಿ ಈವರೆಗೆ ಹತ್ತಿ, ರಾಗಿ, ಸಜ್ಜೆ, ಜೋಳ ಬಿತ್ತನೆಯಾಗಿವೆ.

‘ತಾಲ್ಲೂಕಿನಲ್ಲಿ ಜೂನ್‌ 6ರವರೆಗೆ ವಾಡಿಕೆ ಮೀರಿ 89 ಮಿ.ಮೀಗಳಷ್ಟು ಮಳೆಯಾಗಿದೆ’ ಎಂದು ಕೃಷಿ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ವಿ.ಸಿ. ಉಮೇಶ್ ತಿಳಿಸಿದರು.

‘ರಾಯಾಪುರ ಮತ್ತು ಹಾನಗಲ್ ಸುತ್ತಮುತ್ತ, ಬಿ.ಜಿ. ಕೆರೆ ಅರಣ್ಯ ಪ್ರದೇಶದಲ್ಲಿ ಹಳ್ಳಗಳು ತುಂಬಿ ಹರಿದಿದೆ. ಚೆಕ್ ಡ್ಯಾಂಗಳು ತುಂಬಿಕೊಂಡಿವೆ. ಜನ, ಜಾನುವಾರಿಗೆ ಕುಡಿಯುವ ನೀರಿಗೆ ಅನುಕೂಲವಾಗಿದೆ. ಮೇವು ಬೆಳೆಗೂ ಮಳೆ ಅನುಕೂಲ ಕಲ್ಪಿಸಿದೆ. ರಾಯಾಪುರದಲ್ಲಿ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ. ಆರ್.ವಿರೂಪಾಕ್ಷಪ್ಪ ತಿಳಿಸಿದರು.

ರಾಯಾಪುರದಲ್ಲಿ ಅಂಧ ಈಶ್ವರ ಅವರಿಗೆ ಸೇರಿದ ಹೀರೇಕಾಯಿ ತೋಟ ಮತ್ತು ಸಹೋದರ ಕೃಷ್ಣಪ್ಪ ಅವರಿಗೆ ಸೇರಿದ ಮೆಣಸಿನಕಾಯಿ ತೋಟಕ್ಕೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT