ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಆಡಳಿತ ನಡೆಸುವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಶ್ರದ್ಧಾಂಜಲಿ ಕಾರ್ಯಕ್ರಮ
Last Updated 25 ಸೆಪ್ಟೆಂಬರ್ 2021, 6:16 IST
ಅಕ್ಷರ ಗಾತ್ರ

ಭರಮಸಾಗರ/ಸಿರಿಗೆರೆ: ‘ಲಿಂ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ಜನಸಾಮಾನ್ಯರ ಜೊತೆ ಬೆರೆತು ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಪರಿಶಿಷ್ಟರು, ಗಿರಿಜನರು, ಬಡವರ ಬಗ್ಗೆ ದನಿ ಎತ್ತಿದವರು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.

ಸಿರಿಗೆರೆಯ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಶುಕ್ರವಾರ ನಡೆದ ಲಿಂ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ 29ನೇ ಶ್ರದ್ಧಾಂಜಲಿ ಕಾರ್ಯಕ್ರಮ(ವರ್ಚುವಲ್‌)ದಲ್ಲಿ ಅವರು ಮಾತನಾಡಿದರು.

‘ಅವರು ಶೈಕ್ಷಣಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ಧಾರ್ಮಿಕ ತಳಹದಿಗೆ ಒತ್ತು ನೀಡಿದವರು. ಬಸವಣ್ಣನವರ ನಡೆ–ನುಡಿಗಳ ಪಡಿಯಚ್ಚಾದವರು. ನಡೆದಂತೆ ನುಡಿ, ನುಡಿದಂತೆ ನಡೆ ಎಂಬುದು ಅವರ ತತ್ವ. ಶ್ರೀಮಠದ ವ್ಯಾಪ್ತಿಯ ರೈತರಿಗೆ ಅವರ ಆಶೀರ್ವಾದ ಇತ್ತು. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಕ್ರಾಂತಿ ಮಾಡಿದವರು. ಅವರ ಮಾರ್ಗದಲ್ಲಿಯೇ ಇಂದಿನ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನಡೆಯುತ್ತಿದ್ದಾರೆ. ಅವರ ಮಾರ್ಗದರ್ಶನದಂತೆ ಆಡಳಿತ ನಡೆಸುತ್ತೇನೆ’ ಎಂದು ಹೇಳಿದರು.

‘ಶ್ರೀಮಠದ ಚರಿತ್ರೆಯಲ್ಲಿಯೇ ಲಿಂಗೈಕ್ಯ ಸ್ವಾಮಿಗಳ ಸಾಧನೆ ಅಸಾಮಾನ್ಯವಾಗಿದೆ. ಅವರು ಇಟ್ಟ ದಿಟ್ಟ ಹೆಜ್ಜೆ ಆಶ್ಚರ್ಯ ಮೂಡಿಸುವಂತಹದ್ದು. ಅವರ ಜೀವನ ಪೀಠಾಧಿಪತಿಗಳಾದವರಿಗೆ ಮಾರ್ಗದರ್ಶನ’ ಎಂದು ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.

‘ಲಿಂಗೈಕ್ಯ ಗುರುಗಳು ಮಠಕ್ಕೆ ಹೊಸ ಕಾಯಕಲ್ಪ ಕೊಟ್ಟವರು. ಸಿರಿಗೆರೆಮಠ ನಾಡಿನ ಎಲ್ಲ ಮಠಗಳಿಗೆ ಮಾರ್ಗದರ್ಶಕವಾಗಿದೆ. ಕಾಯಕ, ಭಕ್ತಿಯ ಉಪಾಸನೆ ಎರಡನ್ನೂ ಇಲ್ಲಿ ಕಾಣಬಹುದು’ ಎಂದು ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

‘ಶೈಕ್ಷಣಿಕ ಕ್ರಾಂತಿಯ ಮೂಲಕ ಮಕ್ಕಳ ಬದುಕು ಹಸನಾಗಲು ಹಿರಿಯ ಗುರುಗಳು ಶ್ರಮಿಸಿದವರು. ಬದುಕಿನಲ್ಲಿ ನೋವು, ಬೆಂಕಿಯ ಮಧ್ಯೆ ಬೆಳೆದು ತಂಪು ನೀಡಿದವರು. ಪ್ರಪಂಚವೇ ಒಂದು ಕೋಟೆ ಎಂದು ಭಾವಿಸಿ ಎಲ್ಲ ಭಕ್ತರ ಮನದಾಳದಲ್ಲಿದ್ದವರು. ಸಮರ್ಥ ಗುರುವಾಗಿದ್ದವರು’ ಎಂದು ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಬಣ್ಣಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ‘ಹಿರಿಯ ಗುರುವರ್ಯರು ಸಾಧು ವೀರಶೈವರನ್ನು ಸಂಘಟಿಸಿ ಸಮಾಜದ ಭಕ್ತರನ್ನು ಬಡಿದೆಬ್ಬಿಸಿದವರು. ಎಲ್ಲೆಡೆ ಶಾಲೆ, ಕಾಲೇಜು, ರೈತ ಕಾಳಜಿ ಹೊಂದಿ ಸರ್ಕಾರವನ್ನೇ ತಮ್ಮ ಹತೋಟಿಯಲ್ಲಿಟ್ಟಿದ್ದರು’ ಎಂದು ಸ್ಮರಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ‘ಕಾಂಗ್ರೆಸ್ ಪಕ್ಷದೊಂದಿಗೆ ಹಿರಿಯ ಗುರುಗಳು ಅವಿನಾಭಾವ ಸಂಪರ್ಕ ಹೊಂದಿ ಮಾರ್ಗದರ್ಶನ ನೀಡುತ್ತಿದ್ದರು. ಕವಿ, ಲೇಖಕ, ನಾಟಕ ನಿರ್ದೇಶಕರಾಗಿ ಸಾಮರಸ್ಯ ಮೆರೆದವರು ಅನ್ನ, ಅಕ್ಷರ ದಾಸೋಹ ಪದ್ಧತಿ ತಂದವರು’ ಎಂದು ಕೊಂಡಾಡಿದರು.

ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ‘ರಾಜ್ಯದ ಭಕ್ತರಿಗೆ ಭಕ್ತಿ ಮತ್ತು ಮಾರ್ಗದರ್ಶನ ನೀಡಿದವರು ಸಿರಿಗೆರೆಯ ಹಿರಿಯ ಸ್ವಾಮೀಜಿ’ ಎಂದರು.

ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ. ಮಾಧುಸ್ವಾಮಿ, ಕೃಷಿ ಸಚಿವ ಬಿ.ಸಿ. ಪಾಟೀಲ, ವಸತಿ ನಗರಾಭಿವೃದ್ಧಿ ಸಚಿವ ವಿ. ಸೋಮಣ್ಣ, ಚಿತ್ರಕಲಾ ಪರಿಷತ್ ಅಧ್ಯಕ್ಷ ವಿ.ಎಲ್. ಶಂಕರ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನುಡಿನಮನ ಸಲ್ಲಿಸಿದರು.

ಭಾವಚಿತ್ರಗಳಿಗೆ ಪುಷ್ಪನಮನ

ವೇದಿಕೆಯಲ್ಲಿ ಬೃಹತ್ ಎಲ್.ಇ.ಡಿ ಪರದೆ ಅಳವಡಿಸಲಾಗಿತ್ತು. ಲಿಂ.ಗುರುಶಾಂತೇಶ್ವರ ಸ್ವಾಮೀಜಿ ಹಾಗೂ ಲಿಂ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಭಾವಚಿತ್ರವನ್ನು ಅಳವಡಿಸಲಾಗಿತ್ತು. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಎರಡೂ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು. ‘ವರ್ಚುವಲ್ ತಾಣ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಾಡಿನಾದ್ಯಂತ ಯುಟ್ಯೂಬ್‌ನಲ್ಲಿ ವೀಕ್ಷಣೆಗೆ ಅವಕಾಶ ನೀಡಲಾಯಿತು.

ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಇದ್ದರು. ದಾವಣಗೆರೆಯ ಸುಶ್ರಾವ್ಯ ತಂಡದ ಯಶ ದಿನೇಶ್‌ ವಚನಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT