ಕನ್ನಡ ಉಳಿಸಿ, ಬೆಳೆಸಲು ಸರ್ಕಾರದ ಬದ್ಧ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು

ಚಿತ್ರದುರ್ಗ: ಕಲ್ಯಾಣ ಕರ್ನಾಟಕ - ಕಿತ್ತೂರು ಕರ್ನಾಟಕದ ಮೂಲಕ ಕನ್ನಡದ ಕಂಪು ಎಲ್ಲೆಡೆ ಪಸರಿಸಿದೆ. ಕನ್ನಡವನ್ನು ಉಳಿಸಿ ಬೆಳೆಸಲು ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಇಲ್ಲಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
'ಹಿಂದಿ ಭಾಷೆಯ ನಂತರ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಕನ್ನಡಕ್ಕೆ. ಇದು ಕನ್ನಡ ಮತ್ತು ಕರ್ನಾಟಕದ ಶ್ರೀಮಂತಿಕೆ ಹಾಗೂ ಶ್ರೇಷ್ಠತೆಯನ್ನು ತೋರುತ್ತದೆ. ಕನ್ನಡವನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜೊತೆಯಾಗಿ ದುಡಿಯೋಣ, ಜೊತೆಯಾಗಿ ಬೆಳೆಸೋಣ' ಎಂದು ಹೇಳಿದರು.
'ಅಡಳಿತ ನಡೆಸುವವರಲ್ಲಿ ಕನ್ನಡ ಪ್ರೀತಿ-ಅಭಿಮಾನ ಜೆ.ಎಚ್. ಪಟೇಲ್ ಅವರಂತೆ ಇರಬೇಕು. ಜನಪ್ರತಿನಿಧಿಯಾಗಿ ಅವರು ಕನ್ನಡದ ಕುರಿತ ದಿಟ್ಟ ನಿಲುವು ತಳೆದರು. ಸಂಸತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿ ಪ್ರಾದೇಶಿಕ ಭಾಷೆಗಳ ಘನತೆ ಹೆಚ್ಚಿಸಿದರು. ಭಾರತೀಯ ಭಾಷೆಗಳನ್ನು ಮಾತನಾಡುವ ಸಂಸದರಿಗೆ ಪಟೇಲರು ಸ್ಫೂರ್ತಿ, ಉತ್ಸಾಹ ತುಂಬಿದರು' ಎಂದರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬದರಿನಾಥ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.