ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ಮತ ಚಲಾಯಿಸಲು ನಿರಾಸಕ್ತಿ ತೋರಿದ ಜನ

ಹುಣವಿನಡು ಗ್ರಾ.ಪಂ. ಕಪ್ಪಗೆರೆ ಮತಗಟ್ಟೆಯಲ್ಲಿ ಶೇ 52.27ರಷ್ಟು ಮತದಾನ
Last Updated 24 ಡಿಸೆಂಬರ್ 2020, 2:44 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಹುಣವಿನಡು ಗ್ರಾಮ ಪಂಚಾಯಿತಿಯ ಕಪ್ಪಗೆರೆ–1 ಮತಗಟ್ಟೆಯಲ್ಲಿ ಮಂಗಳವಾರ ಶೇ 52.27ರಷ್ಟು ಕನಿಷ್ಠ ಮತದಾನವಾಗಿದೆ.

ಇದು ತಾಲ್ಲೂಕಿನಲ್ಲಿ ನಡೆದ 247 ಮತಗಟ್ಟೆಗಳಲ್ಲಿಯೇ ಅತಿ ಕಡಿಮೆ ಮತದಾನವಾದ ಕ್ಷೇತ್ರವಾಗಿದೆ. ಈ ಕ್ಷೇತ್ರದಿಂದ 3 ಸ್ಥಾನಗಳ ಆಯ್ಕೆಗೆ ಅವಕಾಶ ಕಲ್ಪಿಸಲಾಗಿತ್ತು. ಅದರಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿದ್ದ ಒಂದು ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ನಡೆದಿತ್ತು.

ಇನ್ನುಳಿದ ಸಾಮಾನ್ಯ ಹಾಗೂ ಸಾಮಾನ್ಯ ಮಹಿಳೆ ಮೀಸಲು ಸ್ಥಾನಕ್ಕೆ 3 ಅಭ್ಯರ್ಥಿಗಳು ಕಣದಲ್ಲಿದ್ದರು. 441 ಪುರುಷರು, 395 ಮಹಿಳೆಯರು ಸೇರಿ ಒಟ್ಟು 836 ಮತದಾರರಿದ್ದರು. ಅದರಲ್ಲಿ ಕೇವಲ 231 ಪುರುಷರು, 206 ಮಹಿಳೆಯರು ಸೇರಿ 437 ಮತದಾರರು ಮತ ಚಲಾವಣೆ ಮಾಡಿದ್ದಾರೆ.

ಮತದಾನಕ್ಕಿಂತ 3 ದಿನ ಮುಂಚಿತವಾಗಿಯೇ ಈ ಗ್ರಾಮದಲ್ಲಿ ಮತದಾನ ಮಾಡದಂತೆ ವ್ಯಕ್ತಿಯೊಬ್ಬ ಪ್ರಭಾವ ಬೀರಿರುವ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿಗೆ ವಾಟ್ಸ್‌ಆ್ಯಪ್‌ ಮೂಲಕ ದೂರು ಸಲ್ಲಿಸಲಾಗಿತ್ತು. ಇದರಿಂದಾಗಿ ಈ ಬಗ್ಗೆ ಪರಿಶೀಲಿಸಿ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ತಾಲ್ಲೂಕು ಸ್ವೀಪ್‌ ಸಮಿತಿಗೆ ಸೂಚಿಸಿದ್ದರು. ಅದರಂತೆ ಸೆಕ್ಟರ್‌ ಅಧಿಕಾರಿ, ಇಒ, ಬಿಇಒ, ಪಿಡಿಒ ಮತದಾನದ ಮುನ್ನದಿನವಾದ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿದ್ದರು.

ನಂತರ ಗ್ರಾಮದ ಬೀದಿಗಳಲ್ಲಿ ಟಾಂಟಾಂ ಹೊಡೆಸುವ ಮೂಲಕ ಮತದಾರರು ಕಡ್ಡಾಯವಾಗಿ ಮತದಾನ ಮಾಡಿ, ಮತದಾನದ ಪಾವಿತ್ರ್ಯ ಕಾಪಾಡಬೇಕು ಎಂದು ಮನವಿ ಮಾಡಿ ಬಂದಿದ್ದರು.

‘ಆದರೂ ಮತದಾನದ ದಿನ ಮಧ್ಯಾಹ್ನ 3ರವರೆಗೆ ಶೇ 30ರಷ್ಟು ಮಾತ್ರ ಮತದಾನವಾಗಿತ್ತು. ಕನಿಷ್ಠ ಮತದಾನವಾಗಿರುವ ಮಾಹಿತಿ ಮೇರೆಗೆ ಇಒ, ಡಿವೈಎಸ್‌ಪಿ, ಸರ್ಕಲ್‌ ಇನ್‌ಸ್ಪೆಕ್ಟರ್‌ ಜತೆಗೂಡಿ ಮತದಾನದ ದಿನವೂ ಮತ್ತೆ ಗ್ರಾಮಕ್ಕೆ ಭೇಟಿ ನೀಡಿ ಮನೆ ಮನೆಗೆ ಹೋಗಿ ಮತದಾರರ ಮನವೊಲಿಸಿದೆವು’ ಎಂದು ತಹಶೀಲ್ದಾರ್‌ ವೈ.ತಿಪ್ಪೇಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

***

ಚುನಾವಣೆಗೆ ಸ್ಪರ್ಧಿಸಿದ್ದ ವ್ಯಕ್ತಿಯೊಬ್ಬ ಗ್ರಾಮದ ಜನರ ಮಾತಿಗೆ ಬೆಲೆ ಕೊಡಲಿಲ್ಲ ಎಂಬ ಕಾರಣಕ್ಕೆ ಮತ ಚಲಾಯಿಸಲು ಹಿಂದೇಟು ಹಾಕಿದ್ದರು. ಮತದಾರರ ಮನವೊಲಿಸಿದ್ದರಿಂದ ಶೇ 52.27ರಷ್ಟು ಮತದಾನವಾಯಿತು.

ವೈ.ತಿಪ್ಪೇಸ್ವಾಮಿ, ತಹಶೀಲ್ದಾರ್‌

***

ಸ್ವೀಪ್‌ ಸಮಿತಿಯಿಂದ ಮತದಾನ ಜಾಗೃತಿ ಮೂಡಿಸಿದ್ದೆವು. ಯಾರಾದರೂ ಮತದಾನ ಮಾಡದಂತೆ ಹೆದರಿಸುವುದರೆ ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದೆವು.

ಕೆ.ಒ.ಜಾನಕಿರಾಮ್‌, ತಾ.ಪಂ. ಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT