ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ಕೈಕೊಟ್ಟ ಶೇಂಗಾ, ಬೆಳೆಗಾರರು ಕಂಗಾಲು

ಶೇ 84ರಷ್ಟು ಮಳೆ ಕೊರತೆ, ಶೇ 75ರಷ್ಟು ಬೆಳೆಹಾನಿ ವರದಿ ಸಲ್ಲಿಕೆ
Last Updated 10 ಅಕ್ಟೋಬರ್ 2021, 5:55 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಮಳೆ ಕೊರತೆ, ರೋಗಬಾಧೆಯಿಂದಾಗಿ ತಾಲ್ಲೂಕಿನಲ್ಲಿ ಈ ವರ್ಷದ ಮುಂಗಾರು ಹಂಗಾಮಿನ ಶೇಂಗಾ ಬೆಳೆ ಪೂರ್ಣವಾಗಿ ಕೈತಪ್ಪಿ ಹೋಗಿದ್ದು, ಶೇಂಗಾ ಬೆಳೆಗಾರರು ದಿಕ್ಕು ತೋಚದ ಸ್ಥಿತಿ ತಲುಪಿದ್ದಾರೆ.

ಸತತ 5 ವರ್ಷಗಳಿಗೂ ಹೆಚ್ಚು ಬಾರಿ ನಷ್ಟಕ್ಕೀಡಾಗಿರುವ ಶೇಂಗಾ ಬೆಳೆಗಾರರಿಗೆ ಈ ಬಾರಿಯ ನಷ್ಟ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾಕಿದ ಬಂಡವಾಳ ನಷ್ಟದ ಜೊತೆಗೆ ಜಾನುವಾರುಗಳಿಗೆ ಮೇವು ಸಹ ದೊರೆಯುವುದಿಲ್ಲ ಎಂಬುದು ಖಾತ್ರಿಯಾಗುತ್ತಿರುವುದು ಆತಂಕ ಹೆಚ್ಚಳಕ್ಕೆ ಒತ್ತು ನೀಡಿದೆ.

ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಡಾ.ವಿ.ಸಿ. ಉಮೇಶ್ ಶನಿವಾರ ಮಾಹಿತಿ ನೀಡಿ, ‘ತಾಲ್ಲೂಕಿನಲ್ಲಿ ಈ ಬಾರಿ 25,135 ಹೆಕ್ಟೇರ್ ಪ್ರದೇಶದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಶೇಂಗಾ ಬಿತ್ತನೆ ಮಾಡಲಾಗಿತ್ತು. ಜುಲೈ, ಆಗಸ್ಟ್‌ ಮಧ್ಯ ಭಾಗದಲ್ಲಿ ಬಹುತೇಕ ಬಿತ್ತನೆ ನಡೆದಿದೆ. ಆರಂಭದಲ್ಲಿ ಮಳೆ ಬಂದರೂ ಕಾಯಿ ಕಟ್ಟುವ ಮತ್ತು ಹೂವು ನೆಲಕ್ಕಿಳಿಯುವ ಸಮಯದಲ್ಲಿ ಪೂರ್ಣವಾಗಿ ಮಳೆ ಕೈಕೊಟ್ಟಿತು. ಸೆಪ್ಟೆಂಬರ್ ತಿಂಗಳಿನಲ್ಲಿ ತಾಲ್ಲೂಕಿನ ವಾಡಿಕೆ ಮಳೆ 109 ಮಿ.ಮೀ. ಇದೆ. ಕೇವಲ 17 ಮಿ.ಮೀ ಮಳೆ ಬಿದ್ದಿದೆ. ಈ ಮೂಲಕ ಶೇ 84ರಷ್ಟು ಕೊರತೆಯಾಗಿದೆ. ಇದು ಒಟ್ಟು ಪ್ರಮಾಣದ ಶೇ 75ರಷ್ಟು ಇಳುವರಿ ಕುಸಿತಕ್ಕೆ ಕಾರಣವಾಯಿತು ಎಂದು ಹೇಳಿದರು.

ಈಗಾಗಲೇ ಕಂದಾಯ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ಹೊಲಗಳಿಗೆ ಭೇಟಿ ನೀಡಿ ಬೆಳೆ ನಷ್ಟ, ಈಚೆಗೆ ಕಂಡುಬಂದಿರುವ ಕೊಳೆ ರೋಗ, ಎಲೆಚುಕ್ಕಿ ರೋಗ ಪರಿಶೀಲಿಸಲಾಗಿದೆ. ಪ್ರಮುಖವಾಗಿ ಮಳೆ ಇಲ್ಲದೇ ಶೇ 75ಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈ ಬಗ್ಗೆ ಸಭೆ ನಡೆದಿದ್ದು, ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ರೋಗ ಹತೋಟಿಗೆ ಕ್ರಮಗಳನ್ನು ತೆಗೆದುಕೊಳ್ಳುವುದು ಈ ಸಮಯದಲ್ಲಿ ವ್ಯರ್ಥ ಹೋರಾಟ ಎಂದು
ಹೇಳಿದರು.

‘ಪ್ರತಿ ಎಕರೆಗೆ ₹ 12 ಸಾವಿರಕ್ಕೂ ಹೆಚ್ಚು ಖರ್ಚು ಮಾಡಲಾಗಿದೆ. ಹಿಂದಿನ ವರ್ಷಗಳಿಗಿಂತ ದುಬಾರಿ ಕೂಲಿ ನೀಡಿ ಕಳೆ ತೆಗೆಸಲಾಗಿದೆ. ಕಳೆದ ವರ್ಷ ಕಾಯಿ ಕಟ್ಟಿದ ನಂತರ ಬೆಳೆ ಕೈಕೊಟ್ಟಿತು. ಈ ವರ್ಷ ಹೂಡು (ಹೂ) ಇಳಿಯುವ ಸಮಯದಲ್ಲಿ ನಷ್ಟಕ್ಕೀಡಾಗಿದ್ದೇವೆ. ಪ್ರತಿ ವರ್ಷ ಇದೇ ಸ್ಥಿತಿ ಎದುರಾದಲ್ಲಿ ಕೃಷಿ ಏಕೆ ಬೇಕು? ನಮ್ಮ ಕಷ್ಟ ಸರ್ಕಾರಕ್ಕೆ ಮುಟ್ಟುತ್ತಿಲ್ಲ. ಹೊಸ ತಳಿ ಬಂದಿದ್ದರೂ ಎಲ್ಲ ರೈತರಿಗೆ ಸಿಗುತ್ತಿಲ್ಲ’ ಎಂದು ರಾಯಾಪುರದ ರೈತ ಪಾಪಣ್ಣ, ಮಾರಯ್ಯ
ದೂರಿದರು.

ಮಳೆ ಬಂದು ಹೆಚ್ಚು ಹಾನಿ
3-4 ದಿನಗಳಿಂದ ಮಳೆ ಬರುತ್ತಿದೆ. ಬೇಕಿದ್ದಾಗ ಮಳೆ ಬರಲಿಲ್ಲ. ಈಗ ಗಿಡಗಳು ಒಣಗಿದ್ದು ಬಂದು ಕೊಳೆಸುತ್ತಿದೆ. ಇದರಿಂದ ಜಾನುವಾರು ಬಾಯಿಗೂ ಮಣ್ಣು ಬಿದ್ದಿದೆ. ಗಿಡ ಕೊಳೆಯಲು ಆರಂಭವಾಗಿದ್ದು ಕಾಯಿ, ಬಳ್ಳಿ ಬೇರ್ಪಡುತ್ತಿವೆ. ಇದರಿಂದ ಪೂರ್ಣ ನಷ್ಟ ಶತಸಿದ್ಧ ಎಂದು ರೈತರಾದ ಗುರುಲಿಂಗಣ್ಣ, ಮಾರುತೇಶ್ ದೂರಿದರು.

ವಿಮೆ ಅವಕಾಶ ಇದೆಯೇ..?
‘ಪ್ರಕೃತಿ ವಿಕೋಪ ಕಾನೂನಿನಲ್ಲಿ ಶೇ 75ಕ್ಕೂ ಹೆಚ್ಚು ನಷ್ಟವಾಗಿದ್ದಲ್ಲಿ ಫಸಲ್ ಬಿಮಾ ಯೋಜನೆಯಲ್ಲಿ ವಿಮೆ ಮಾಡಿಸಿರುವ ರೈತರಿಗೆ ಪ್ರಾಥಮಿಕ ಪರಿಹಾರವಾಗಿ ಶೇ 25ರಷ್ಟು ವಿಮೆ ನೀಡಲು ಅವಕಾಶವಿದೆ. ಈ ಬಗ್ಗೆ ವಿಮೆ ಕಂಪನಿಗೆ ಮನವಿ ಮಾಡಿದಾಗ ಅವರು ಕಟಾವು ಪೂರ್ಣವಾಗಲಿ ಎಂದು ಹೇಳುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಿ ಅವಕಾಶವಿದ್ದಲ್ಲಿ ಪ್ರಾಥಮಿಕ ವಿಮೆ ಮಂಜೂರಿಗೆ ಕ್ರಮ ಕೈಗೊಂಡು ನೆರವಿಗೆ ಬರಬೇಕು’ ಎಂದು ರೈತರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT