ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ. 2ಕ್ಕೆ 150 ಐಟಿಐ ಕಾಲೇಜು ಲೋಕಾರ್ಪಣೆ: ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ

ಜಿಟಿಟಿಸಿ ಕೇಂದ್ರ ಲೋಕಾರ್ಪಣೆಯಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ
Last Updated 18 ಸೆಪ್ಟೆಂಬರ್ 2021, 15:15 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಎಂಜಿನಿಯರಿಂಗ್‌ ಕಾಲೇಜುಗಳನ್ನು ಮೀರಿಸುವಂತೆ 150 ಐಟಿಐ ಕಾಲೇಜುಗಳನ್ನು ₹ 5 ಸಾವಿರ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ನ. 2 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಲಿದ್ದಾರೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಕುಂಚಿಗನಾಳ್‌ ಕಣಿವೆಮಾರಮ್ಮ ದೇಗುಲ ಸಮೀಪ ನೂತನವಾಗಿ ನಿರ್ಮಿಸಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು (ಜಿಟಿಟಿಸಿ) ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿದ್ದ 270 ಐಟಿಐ ಕಾಲೇಜುಗಳ ಪೈಕಿ 150 ಕಾಲೇಜುಗಳನ್ನುಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿಪಡಿಸಲಾಗಿದೆ. ಪಾಲಿಟೆಕ್ನಿಕ್‌ ಕಾಲೇಜುಗಳನ್ನು ಅಭಿವೃದ್ಧಿ ಪಡಿಸಿ ರಾಷ್ಟ್ರೀಯ ಮಟ್ಟಕ್ಕೆ ಅನ್ವಯವಾಗುವಂತೆ ಪಠ್ಯಕ್ರಮ ತಿದ್ದುಪಡಿ ತರಲಾಗುತ್ತಿದೆ. ದೇಶದ ಯಾವ ರಾಜ್ಯದಲ್ಲೂ ಒಂದೇ ಒಂದು ಕಾಲೇಜನ್ನು ಇಲ್ಲಿಯ ರೀತಿ ಅಭಿವೃದ್ಧಿ ಮಾಡಿಲ್ಲ’ ಎಂದರು.

‘ಸಮಾಜ ಸುಧಾರಣೆ ಕಾಣಲು ಪ್ರಸ್ತುತ ದಿನಗಳಲ್ಲಿ ಶಿಕ್ಷಣದ ಜತೆಗೆ ಕೌಶಲ ಕೂಡ ತುಂಬಾ ಅತ್ಯಗತ್ಯವಾಗಿದೆ. ಇದರಿಂದ ಕುಟುಂಬದ ಪ್ರಗತಿಯೂ ಸಾಧ್ಯವಿದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಕೌಶಲಾಧಾರಿತ ತರಬೇತಿ ನೀಡಿ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ. ಈಗಾಗಲೇ 35 ಸಾವಿರ ವಿದ್ಯಾರ್ಥಿಗಳು ಪ್ರವೇಶ ಅವಕಾಶ ಪಡೆಯಲು ಮುಂದಾಗಿದ್ದಾರೆ. ಶೇ 100ರಷ್ಟು ಸೀಟುಗಳು ಭರ್ತಿಯಾಗುತ್ತಿವೆ’ ಎಂದು ಮಾಹಿತಿ ನೀಡಿದರು.

‘ವಿದ್ಯಾರ್ಥಿ ಯುವಸಮೂಹಕ್ಕೆ ಕೌಶಲಾಧಾರಿತ ತರಬೇತಿ ನೀಡುವಂಥ ವೇದಿಕೆ ಕಲ್ಪಿಸಿ ಉದ್ಯೋಗ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಜಿಟಿಟಿಸಿ ಶ್ರಮಿಸುತ್ತಿದೆ. ತರಬೇತಿ ಪಡೆದ ವಿದ್ಯಾರ್ಥಿಗಳು ಶೇ 100ರಷ್ಟು ಉದ್ಯೋಗಾವಕಾಶ ಹೊಂದಲಿದ್ದಾರೆ. ಇದರಲ್ಲಿ ಅನುಮಾನ ಬೇಡ’ ಎಂದು ಅಶ್ವತ್ಥನಾರಾಯಣ ಹೇಳಿದರು.

‘ಕಂಪನಿಗಳ ಬೇಡಿಕೆ ಅನ್ವಯ ಹೊಸ ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದೆ. ಇಲ್ಲಿ ತಯಾರಾದ ಗುಣಮಟ್ಟದ ಉಪಕರಣಗಳಿಗೆ ಬೃಹತ್‌ ಕಂಪನಿಗಳಿಂದ ಬೇಡಿಕೆಯೂ ಇದೆ. ಆದರೆ, ಇಂತಹ ಉಪಯುಕ್ತ ಕಾರ್ಯಕ್ರಮದ ಮಾಹಿತಿ ಯುವಸಮೂಹಕ್ಕೆ ತಿಳಿಯುತ್ತಿಲ್ಲ. ಇದನ್ನು ಸದುಪಯೋಗ ಪಡಿಸಿಕೊಂಡಲ್ಲಿ ಉಜ್ವಲ ಭವಿಷ್ಯವಿದೆ’ ಎಂದು ತಿಳಿಸಿದರು.

ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ‘ಸರ್ಕಾರಿ ವಿಜ್ಞಾನ, ಕಲಾ ಕಾಲೇಜು ಸೇರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಸುಮಾರು 15ರಿಂದ 20 ಕಿ.ಮೀ ದೂರದಿಂದ ವಿದ್ಯಾರ್ಥಿನಿಯರು ಬರುತ್ತಿದ್ದಾರೆ. ಬೆಳಿಗ್ಗೆ ಬಂದರೆ ಮನೆಗೆ ತಲುಪುವುದು ರಾತ್ರಿ ಆಗುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ಇರುವಂಥ ಕಾಲೇಜುಗಳಲ್ಲಿ ಶೌಚಾಲಯಗಳ ಕೊರತೆ ಇದೆ. ವಸತಿ ನಿಲಯಗಳಲ್ಲಿ ಹೀಗಾಗಿ ₹ 15 ಕೋಟಿಯಿಂದ ₹ 20 ಕೋಟಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ. ನಾರಾಯಣಸ್ವಾಮಿ, ‘ಕೌಶಲ ಇದ್ದರೆ ಮಾತ್ರ ದೇಶದ ಯಾವುದೇ ಮೂಲೆಯಲ್ಲಾದರೂ ಭವಿಷ್ಯ ರೂಪಿಸಿಕೊಳ್ಳಬಹುದು. ಆದರೆ, ಈ ಜಿಲ್ಲೆಯ ಅನೇಕ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಮುಗಿಸಿ ಉದ್ಯೋಗವೂ ಸಿಗದೇ ಮನೆಯಲ್ಲಿ ಕುಳಿತುಕೊಳ್ಳುತ್ತಿದ್ದಾರೆ’ ಎಂದು ವಿಷಾದಿಸಿದರು.

‘ಕಾರು ಚಾಲಕ ತಿಂಗಳಿಗೆ ₹ 20 ಸಾವಿರ ದುಡಿಯಬಲ್ಲ. ಆದರೆ, ಪದವಿ ಪಡೆದವರು ಕೇವಲ ₹ 8 ಸಾವಿರಕ್ಕೆ ದುಡಿಯುತ್ತಿದ್ದಾರೆ. ಇದರಲ್ಲಿ ಬಹುತೇಕರು ದಲಿತರು–ಹಿಂದುಳಿದವರೇ ಇದ್ದಾರೆ. ಈ ಭಾಗದ ಜನತೆಗೆ ಹೆಚ್ಚು ಉದ್ಯೋಗ ಸಿಗಬೇಕಾದರೆ ಜಿಟಿಟಿಸಿ ಸೇರಿ ಕೌಶಲಾಧಾರಿತ ತರಬೇತಿ ಅಗತ್ಯವಿದೆ’ ಎಂದು ಸಲಹೆ ನೀಡಿದರು.

ಹಿರಿಯೂರು ಶಾಸಕಿ ಪೂರ್ಣಿಮಾ ಕೆ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಡಾ.ವೈ.ಎ.ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ಜಿಟಿಟಿಸಿ ಎಂ.ಡಿ. ರಾಘವೇಂದ್ರ ಇದ್ದರು.

***

ಸಮಾಜ ಕಲ್ಯಾಣ ಇಲಾಖೆ ಸಚಿವರೊಂದಿಗೆ ಚರ್ಚಿಸಿ ವಸತಿ ನಿಲಯಗಳು ಸೇರಿ ಕಾಲೇಜುಗಳ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ. ಇದಕ್ಕೆ ಕೇಂದ್ರ ಸರ್ಕಾರದ ಸಹಕಾರವೂ ಇರಲಿದೆ.

ಎ.ನಾರಾಯಣಸ್ವಾಮಿ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT