ಶನಿವಾರ, ಅಕ್ಟೋಬರ್ 23, 2021
24 °C
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವ ಎ. ನಾರಾಯಣಸ್ವಾಮಿ

ಹಿಂದುಳಿದವರಿಗೆ ತಂತ್ರಜ್ಞಾನದ ಸ್ಪರ್ಶ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ರೈತ, ಕೂಲಿಕಾರ್ಮಿಕ ಹಾಗೂ ಹಿಂದುಳಿದ ಸಮುದಾಯದ ವಿದ್ಯಾವಂತ ಯುವಕರಿಗೆ ತಂತ್ರಜ್ಞಾನದ ಸ್ಪರ್ಶ ಅಗತ್ಯ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಶನಿವಾರ ನಗರದಲ್ಲಿ ಆಯೋಜಿಸಿದ್ದ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ಮತ್ತು ಉಪಕರಣಾಗಾರ ತರಬೇತಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರತಿ ವರ್ಷ ದೇಶದಲ್ಲಿ 50 ಲಕ್ಷ ಯುವಕರು ಕೌಶಲ ತರಬೇತಿ ಪಡೆದು ಹೊರ ಬರುತ್ತಿದ್ದಾರೆ. ಹೀಗಾಗಿ ಅವರಿಗೆ ತಪ್ಪದೇ ತಂತ್ರಜ್ಞಾನದ ಸ್ಪರ್ಶ ನೀಡಬೇಕು. ಇದರಿಂದ ಉದ್ಯೋಗಕ್ಕೆ ಹುಡುಕಾಟ ನಡೆಸುವುದು ತಪ್ಪುತ್ತದೆ. ತಾವೇ ಉದ್ಯೋಗ ಸೃಷ್ಟಿಸಿಕೊಂಡು ಸ್ವಾವಲಂಬನೆಯ ಮೂಲಕ ಸಮಾಜದಲ್ಲಿ ಮಾದರಿ ಬದುಕು ಕಟ್ಟಿಕೊಳ್ಳುತ್ತಾರೆ’ ಎಂದು
ಹೇಳಿದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ‘ಸರ್ಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಪ್ರಸ್ತುತ ಸಂದರ್ಭಕ್ಕೆ ಅಗತ್ಯವಾದ ಹಾಗೂ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವಾದ ಕೋರ್ಸ್‌ಗಳನ್ನೇ ಅಳವಡಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ಕೌಶಲ ಹಾಗೂ ತಂತ್ರಜ್ಞಾನ ಆಧಾರಿತ ಗುಣಮಟ್ಟದ ಶಿಕ್ಷಣ ಒದಗಿಸಿದರೆ ಮಕ್ಕಳಲ್ಲಿ ಆರ್ಥಿಕ ಶಕ್ತಿ ಹೆಚ್ಚುತ್ತದೆ. ಜಿಟಿಟಿಸಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಅವರವರ ಕೌಶಲಕ್ಕೆ ತಕ್ಕಂತೆ 4ನೇ ವರ್ಷಕ್ಕೆ ಪ್ರತಿ ತಿಂಗಳು ₹ 10 ಸಾವಿರದಿಂದ ₹ 15 ಸಾವಿರದಷ್ಟು ಗೌರವ ವೇತನ ದೊರೆಯುತ್ತದೆ. ಪೂರ್ಣ ಅವಧಿ ತರಬೇತಿ ಪಡೆದವರು ಮುಂದಿನ ದಿನಗಳಲ್ಲಿ ಶೇ 100ರಷ್ಟು ಉದ್ಯೋಗ ಪಡೆಯುತ್ತಾರೆ’ ಎಂದು ಭರವಸೆ ನೀಡಿದರು.

ಸಾರಿಗೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ‘ವಿದ್ಯಾವಂತರಿಗೆ ಉದ್ಯೋಗ ಒದಗಿಸಲು ಆದ್ಯತೆ ನೀಡಲಾಗುತ್ತಿದೆ. ವಿ.ವಿ ಸಾಗರದಿಂದ ವೇದಾವತಿಯಿಂದ ಹರಿದು ಬಂದ ನೀರಿನಿಂದ ಚಳ್ಳಕೆರೆ ತಾಲ್ಲೂಕಿನ ನದಿತೀರದ ಲಕ್ಷ ಕೊಳವೆಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಹೀಗಾಗಿ ಉತ್ತಮ ಕೆಲಸ ಮಾಡುವ ಯಾವುದೇ ಪಕ್ಷದ ಜನಪ್ರತಿನಿಧಿಗಳಾದರೂ ಅವರನ್ನು ಗುರುತಿಸಿ ಗೌರವಿಸುವ ಕೆಲಸ ನಡೆಯಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಶಾಸಕ ಟಿ. ರಘುಮೂರ್ತಿ, ‘ಪಕ್ಷಭೇದ ಮರೆತು ಕೆಲಸ ಮಾಡಿದ್ದರಿಂದ ನಮ್ಮ ಕ್ಷೇತ್ರದಲ್ಲಿ ಎಂಜಿನಿಯರಿಂಗ್ ಕಾಲೇಜು ಹಾಗೂ ಜಿಟಿಟಿಸಿ ತೆರೆಯಲು ಸಾಧ್ಯವಾಗಿದೆ. ಈ ಕೇಂದ್ರದಿಂದ ತಾಲ್ಲೂಕಿನ ಬಡ ಕುಟುಂಬದ ಮಕ್ಕಳಿಗೆ ತುಂಬಾ ಅನುಕೂಲವಾಗಲಿದೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಅಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಚಿದಾನಂದಮೂರ್ತಿ, ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಚಿತ್ರದುರ್ಗದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮೀ, ಉಪಾಧ್ಯಕ್ಷೆ ಜೈತುನ್ಬಿ, ಬಿಜೆಪಿ ಮುಖಂಡ ರಾಮದಾಸ್, ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ, ಉಪ ಪ್ರಧಾನ ವ್ಯವಸ್ಥಾಪಕ ಡಾ.ಎನ್. ರಮೇಶ್, ಪ್ರಾಂಶುಪಾಲ ತಿಪ್ಪೇಸ್ವಾಮಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು