ಗುರುವಾರ , ನವೆಂಬರ್ 21, 2019
20 °C

ಗುಜರಾತ್ ತಳಿ ಶೇಂಗಾ ಬೆಳೆದ ರೈತರು

Published:
Updated:
Prajavani

ಪರಶುರಾಂಪುರ (ಚಿತ್ರದುರ್ಗ ಜಿಲ್ಲೆ): ಹೋಬಳಿಯ ಬೊಮ್ಮನಕುಂಟೆ ಗ್ರಾಮದ ರೈತರು ಗುಜರಾತ್ ತಳಿಯ ಶೇಂಗಾ ಬೆಳೆದು ಕೃಷಿಯಲ್ಲಿ ಹೊಸ ಪ್ರಯೋಗ ಮಾಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಚಳ್ಳಕೆರೆ ತಾಲ್ಲೂಕು ಶೇಂಗಾ ಬೆಳೆಗೆ ಪ್ರಸಿದ್ಧಿ ಪಡೆದಿದೆ. ಉತ್ತಮ ಇಳುವರಿಯ ಜೊತೆಗೆ ಹೆಚ್ಚಿನ ಎಣ್ಣೆ ಅಂಶವನ್ನು ಹೊಂದಿರುವ ಶೇಂಗಾ ಬೆಳೆಯುವ ಉತ್ತಮ ಪ್ರದೇಶ ಇದು. ಮುಂಬೈ ಬಿಟ್ಟರೆ 2ನೇ ಎಣ್ಣೆ ನಗರಿಯೆಂದೇ ಹೆಸರು ಪಡೆದಿರುವ ನಗರ. ಇಲ್ಲಿ ಹೊಸ ಹೊಸ ತಳಿ ಶೇಂಗಾಗಳ ಪ್ರಯೋಗ ನಡೆಯುತ್ತಿರುತ್ತದೆ.

ಬೊಮ್ಮನಕುಂಟೆ ಗ್ರಾಮದ ರೈತರಾದ ನಾಗರಾಜ, ಚಿತ್ತಪ್ಪ, ಮಹಲಿಂಗಪ್ಪ, ರೂಪೇಶ, ಶಿವಮೂರ್ತಿ, ನರಸಿಂಹಮೂರ್ತಿ ಅವರಿಗೆ ಗುಜರಾತ್ ಶೇಂಗಾ ತಳಿ ಸಂಶೋಧನಾ ಅಭಿವೃದ್ಧಿ ಸಂಸ್ಥೆಯಿಂದ ಉಚಿತವಾಗಿ ಶೇಂಗಾ ಬೀಜ ನೀಡಲಾಗಿತ್ತು.

ಬರಗಾಲ ಪೀಡಿತ ಪ್ರದೇಶದಲ್ಲೂ ಉತ್ತಮ ಇಳುವರಿಕೊಡುವುದು ಈ ತಳಿಯ ವಿಶೇಷ. ಹೊಲದಲ್ಲಿನ ಶೇಂಗಾವನ್ನು ಪರಿಶೀಲಿಸಲು ಬುಧವಾರ ಸಂಸ್ಥೆಯ ಮುಖ್ಯಸ್ಥರಾದ ಶಿವಪಾಲ್ ಶರ್ಮಾ, ನಾರಾಯಣ್ ಹಾಗೂ ತಂಡದವರು ಭೇಟಿ ನೀಡಿದರು. ಸಂಸ್ಥೆಯಿಂದ ಅಭಿವೃದ್ದಿ ಪಡಿಸಿದ ತಳಿಗಳಾದ ಡಿ.ಜಿ.ಅರ್.ಎಂ, ಬಿ-24, ಡಿ,ಜಿ.ಅರ್.ಎಂ.ಬಿ-32 ಮತ್ತು ಡಿ.ಜಿ.ಅರ್.ಎಂ.ಬಿ-37ಎ ಯ ಇಳುವರಿಯನ್ನು ಕಂಡು ಖುಷಿ ಪಟ್ಟರು.

ಗುಜರಾತ್ ಮೂಲದ ಈ ತಳಿಗಳನ್ನು ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಪರಶುರಾಂಪುರದಲ್ಲಿ ಬಿತ್ತನೆ ಮಾಡಲಾಗಿದೆ. ಕಡಿಮೆ ಮಳೆಯಲ್ಲಿ ಉತ್ತಮ ಇಳುವರಿ ಬರುವುದು ಈ ತಳಿಯ ವಿಶೇಷ. ಒಂದು ಶೇಂಗಾ ಗಿಡ 25-30 ಕಾಯಿಗಳನ್ನು ಕಟ್ಟಿದ್ದು ಈ ಭಾಗದಲ್ಲಿ ಇನ್ನೂ ಈ ತಳಿಯ ಬೀಜಗಳನ್ನು ರೈತರು ಬಳಸಬಹುದು ಎಂದು ಕೃಷಿ ಇಲಾಖೆಯ ವಿಜ್ಞಾನಿಗಳಿಗೆ ಗುಜರಾತ್ ತಂಡದವರು ತಿಳಿಸಿದರು.

ಕೃಷಿ ಇಲಾಖೆ ಅಧಿಕಾರಿ ಗಿರೀಶ್ ಮತ್ತು ತಾಂತ್ರಿಕ ಅನುವುಗಾರ ಮಹಾಬಲೇಶ್ವರ ಇದ್ದರು.

ಪ್ರತಿಕ್ರಿಯಿಸಿ (+)