ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗದಲ್ಲಿ ಆತಂಕ ಸೃಷ್ಟಿಸಿದ ಗುಜರಾತ್ ಬಸ್

Last Updated 9 ಮೇ 2020, 12:44 IST
ಅಕ್ಷರ ಗಾತ್ರ

ಹೊಸದುರ್ಗ: ಗುಜರಾತ್‌ನ ಬಸ್ಸೊಂದು ಪಟ್ಟಣದ ಟಿ.ಬಿ. ವೃತ್ತದ ಬಳಿ ಶನಿವಾರ ಬರುತ್ತಿದ್ದಂತೆ ಇಲ್ಲಿನ ನಾಗರಿಕರಲ್ಲಿ ಆತಂಕ ಹೆಚ್ಚಾಯಿತು.

ಇಲ್ಲಿನ ಚೆಕ್‌ಪೋಸ್ಟ್‌ನಲ್ಲಿದ್ದ ಪೊಲೀಸರು ವಿಚಾರಣೆ ನಡೆಸಿ ಆ ಬಸ್ಸನ್ನು ಪಟ್ಟಣದ ಒಳಗೆ ಬಿಟ್ಟರು. ಆಗ ಸಮೀಪದ ಅಂಗಡಿಗಳ ಬಳಿ ಇದ್ದ ಕೆಲವರು ಅದರ ಫೋಟೊ ತೆಗೆದು, ವಿಡಿಯೊ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು.

ಹೊಸದುರ್ಗಕ್ಕೆ ಆತಂಕದ ವಿಚಾರ ಗುಜರಾತ್‌ನಿಂದ ಒಂದು ಬಸ್‌ ಜನ ಬಂದಿದ್ದಾರೆ ಎಂದು ವಾಟ್ಸ್‌ಆಪ್‌, ಫೇಸ್‌ಬುಕ್‌ನಲ್ಲಿ ಸುದ್ದಿ ಹಬ್ಬುತ್ತಿದ್ದಂತೆ ಕೆಲವರು ಆಘಾತಕ್ಕೆ ಒಳಗಾದರು. ಪಟ್ಟಣದ ಅಂಗಡಿಗಳ ಬಳಿಯಿದ್ದ ಹಲವರು ಮಾಸ್ಕ್‌ ಹಾಕಿದರು. ಮಾಸ್ಕ್‌ ಧರಿಸದವರು ಟವಲ್‌, ಸೀರೆ ಸೆರಗು, ಕರವಸ್ತವನ್ನು ಕಟ್ಟಿಕೊಂಡರು. ‘ಅಹಮದಾಬಾದಿನಿಂದ ಚಿತ್ರದುರ್ಗಕ್ಕೆ ತಬ್ಲಿಗಿಗಳು ಬಂದಂತೆ ನಮ್ಮಲ್ಲಿಗೂ ಬಂದರೇನೋ?’ ಎಂದು ಹಲವರು ಭಯಗೊಂಡರು.

ಗುಜರಾತ್‌ನ ಅಹಮದಾಬಾದ್‌ ಮೂಲದ 18 ಮಂದಿ ಧಾರ್ಮಿಕ ವಲಸಿಗರು ಮಾರ್ಚ್‌ನಲ್ಲಿ ಇಲ್ಲಿಗೆ ಬಂದಿದ್ದರು. ಇಲ್ಲಿನ ಮಸೀದಿಯೊಂದರಲ್ಲಿ ತಂಗಿದ್ದರು. ಲಾಕ್‌ಡೌನ್‌ ಜಾರಿ ಆಗಿದ್ದರಿಂದ ಸ್ವಗ್ರಾಮಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಆಗ ತಾಲ್ಲೂಕು ಆಡಳಿತ ಮಸೀದಿಯಲ್ಲಿದ್ದ 18 ಮಂದಿಯನ್ನು ವಶಕ್ಕೆ ತೆಗೆದುಕೊಂಡಿತ್ತು. 14 ದಿನಗಳ ಕಾಲ ಅವರನ್ನು ಇಲ್ಲಿನ ಹಾಸ್ಟೆಲ್‌ ಒಂದರಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು.

ಅವರೆಲ್ಲರ ಆರೋಗ್ಯ ತಪಾಸಣೆ ಹಾಗೂ ಗಂಟಲು ದ್ರವ ಪರೀಕ್ಷೆ ನೆಡೆಸಿದ್ದು ಎಲ್ಲರೂ ಆರೋಗ್ಯವಾಗಿದ್ದರು. ಕ್ವಾರಂಟೈನ್‌ ಅವಧಿ ಮುಗಿದ ನಂತರದಲ್ಲಿ ಲಾಕ್‌ಡೌನ್‌ ಮುಂದುವರಿದಿದ್ದರಿಂದ ಸ್ವಗ್ರಾಮಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ಮತ್ತೆ ಗೌಸಿಯಾ ನಗರದ ಮಸೀದಿಯೊಂದರಲ್ಲಿ ಆಶ್ರಯ ಪಡೆದಿದ್ದರು. ಲಾಕ್‌ಡೌನ್‌ ಸಡಿಲಿಕೆಯಾಗಿದ್ದು, ಸರ್ಕಾರದ ಅನುಮತಿ ಮೇರೆಗೆ ಅವರನ್ನು ಗುಜರಾತ್‌ನ ಬಸ್‌ನಲ್ಲಿ ಕಳುಹಿಸಿಕೊಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಸಿರು ವಲಯದಲ್ಲಿದ್ದ ಜಿಲ್ಲೆ ಈಗ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.‌ ತಾಲ್ಲೂಕಿನ ಜನರ ಹಿತ ಕಾಪಾಡಬೇಕಾದರೆ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ಇರುವ ಪೊಲೀಸರು ಯಾವುದೇ ಕಾರಣಕ್ಕೂ ಹೊರಗಿನ ವಾಹನ ಹಾಗೂ ಜನರನ್ನು ಒಳಗೆ ಬಿಡಬಾರದು ಎಂದು ತಾಲ್ಲೂಕಿನ ಹಿರಿಯ ನಾಗರಿಕರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT