ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರದ ಇತಿಹಾಸಕ್ಕೆ ಹಕ್ಕಬುಕ್ಕರೇ ಅಡಿಪಾಯ: ಕೆಂಚಪ್ಪ ಎಸ್ ಹುಲಿಯಾನ್

ವಿಶ್ವ ಪಾರಂಪರಿಕ ದಿನಾಚರಣೆಯಲ್ಲಿ ಕೆಂಚಪ್ಪ ಎಸ್ ಹುಲಿಯಾನ್
Last Updated 18 ಏಪ್ರಿಲ್ 2021, 12:28 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಗತವೈಭವದ ಇತಿಹಾಸ ಹೊಂದಿರುವ ವಿಜಯನಗರ ಸಾಮ್ರಾಜ್ಯ ಸ್ಥಾಪಿಸುವ ಮೂಲಕ ಭದ್ರಬುನಾದಿ ಹಾಕಿದ್ದು ಹಕ್ಕಬುಕ್ಕರು. ಅವರು ಈ ರಾಷ್ಟ್ರದ ಆಸ್ತಿ’ ಎಂದು ವಿಶ್ವ ಹಾಲುಮತ ಹಕ್ಕಬುಕ್ಕ ಯುವ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆಂಚಪ್ಪ ಎಸ್.ಹುಲಿಯಾನ್ ಹೇಳಿದರು.

ಕನಕ ಗುರುಪೀಠದ ಶಾಖಾಮಠದಲ್ಲಿ ಜಿಲ್ಲಾ ಕುರುಬರ ಸಂಘ, ಹಾಲುಮತ ಮಹಾಸಭಾ, ಕನಕ ನೌಕರರ ಸಂಘ, ವಿಶ್ವ ಹಾಲುಮತ ಹಕ್ಕಬುಕ್ಕ ಯುವ ಒಕ್ಕೂಟ ವತಿಯಿಂದ ವಿಶ್ವ ಪಾರಂಪರಿಕ ದಿನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆ ಹಾಗೂ ಕುರುಬ ಜಯಂತಿ ಉದ್ಘಾಟಿಸಿ ಮಾತನಾಡಿದರು.

‘ಚಿಂತಕ ಚಂದ್ರಕಾಂತ್ ಬಿಜ್ಜರಗಿ ಅವರ ಕುರುಬರು ಆಳಿದ ವಿಜಯನಗರ ಸಾಮ್ರಾಜ್ಯ ಎಂಬ ಕೃತಿ ಓದಬೇಕು. ವಿದೇಶಿ ತಜ್ಞರ ಹೇಳಿಕೆ, ಗೆಜೆಟಿಯರ್, ಗದ್ಯ ಕೃತಿಗಳು, ಕಾವ್ಯಗಳು, ಶಾಸನಗಳು, ಸರ್ವಜ್ಞನ ತ್ರಿಪದಿ ಒಳಗೊಂಡು ಜನಪದರ ಹಾಡು-ಕಥೆ-ವಾಡಿಕೆಗಳಲ್ಲೂ ಕುರುಬರು ಎಂದು ಉಲ್ಲೇಖಿಸಲಾಗಿದೆ. ಲಿಂಗದಳ್ಳಿ ಹಾಲಪ್ಪ ಅವರ ಕರ್ನಾಟಕ ಸಾಮ್ರಾಜ್ಯ ವಿಜಯನಗರ ಕೃತಿ, ರಾಬರ್ಟ್ ಸಿವೆಲ್, ಎಚ್.ವಿಲ್ಸನ್ ಮಿ.ಕೌಟೋ ಸೇರಿ ಹತ್ತಾರು ವಿದೇಶಿ ವಿದ್ವಾಂಸರು, ಇತಿಹಾಸ ಸಂಶೋಧಕರು ಹಕ್ಕಬುಕ್ಕರನ್ನು ಕುರುಬರು ಎಂದಿದ್ದಾರೆ’ ಎಂದು ಹೇಳಿದರು.

‘ಹಕ್ಕಬುಕ್ಕರ ಚರಿತ್ರೆಯನ್ನು ಪ್ರತಿಯೊಬ್ಬರೂ ಓದಿ ತಿಳಿಯಬೇಕಿದೆ. ಸುವರ್ಣಯುಗದ ಇತಿಹಾಸ, ದಾಖಲೆ ತಿರುಚುವ ಪ್ರಯತ್ನ ಇತ್ತೀಚೆಗೆ ಹೆಚ್ಚುತ್ತಿದೆ. ಇದು ಪರಂಪರೆಗೆ ಮಾಡುವ ಮೋಸ. ಯಾರು ಇತಿಹಾಸ ತಿರುಚಬಾರದು’ ಎಂದು ಹೇಳಿದರು.

‘ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರು ಕುರುಬರು ಎಂಬ ಕುರಿತು 55ಕ್ಕೂ ಹೆಚ್ಚು ದಾಖಲೆಗಳು ಸಾಕ್ಷ್ಯ ಒದಗಿಸಿವೆ. ಪ್ರಸ್ತುತ ದಿನಗಳಲ್ಲಿ ಇದನ್ನು ತಿರುಚುವವರೇ ಹೆಚ್ಚಾಗಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ’ ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸಕರಾದ ಡಾ.ಎಸ್.ಆರ್. ಲೇಪಾಕ್ಷ. ‘ನಮ್ಮ ಸಂಸ್ಕೃತಿ, ಇತಿಹಾಸ, ಪರಂಪರೆಯನ್ನು ನಾವು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ದೇಶ ಮತ್ತು ರಾಜ್ಯದ ಇತಿಹಾಸಕಾರರು ಹಕ್ಕಬುಕ್ಕರನ್ನು ಕನ್ನಡಿಗರು ಮತ್ತು ಕುರುಬರು ಎಂದು ಘೋಷಿಸಿದ್ದಾರೆ. ಅವರ ಸ್ಮರಣಾರ್ಥ ಸಂಸ್ಥಾಪನಾ ದಿನ ಆಚರಿಸಲಾಗುತ್ತಿದೆ’ ಎಂದರು.

ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀರಾಮ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ, ಕನಕ ನೌಕರರ ಸಂಘದ ಅಧ್ಯಕ್ಷ ಕೆಂಚಪ್ಪ, ಹಾಲುಮತ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಮ್ಮೆಹಟ್ಟಿ ಹನುಮಂತಪ್ಪ,ಬುಡಕಟ್ಟು ಸಂಸ್ಕೃತಿ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಮಾಲತೇಶ್ ಅರಸ್ ಹರ್ತಿಕೋಟೆ, ಕುರುಬರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಪಿ.ಕೆ.ಮೀನಾಕ್ಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT