ಕಣ್ಮರೆಯಾಗುತ್ತಿದೆ ಸಾಂಪ್ರದಾಯಿಕ ಕಣ ಸುಗ್ಗಿ

7
ರಸ್ತೆಯ ಮೇಲೆ ಧಾನ್ಯ ಒಕ್ಕಣೆ ಮಾಡುತ್ತಿರುವ ರೈತರು

ಕಣ್ಮರೆಯಾಗುತ್ತಿದೆ ಸಾಂಪ್ರದಾಯಿಕ ಕಣ ಸುಗ್ಗಿ

Published:
Updated:
Prajavani

ಪರಶುರಾಂಪುರ: ‘ಸುಗ್ಗಿಯ ಕಾಲ ಬಂತು ಸಗ್ಗದ ಸುಖ ತಂತು’ ಎಂಬ ಹಾಡಿನ ಸಾರದಂತೆ ನಮ್ಮ ನಾಡಿನ ರೈತರು ಹಿಂದೆಲ್ಲ ಕಣ ಸುಗ್ಗಿ ಮಾಡಿ ರಾಶಿಗೆ ಪೂಜೆ ಸಲ್ಲಿಸಿ ಸಂಕ್ರಾಂತಿ ಹಬ್ಬವನ್ನು ಆಚರಿಸುವ ಸಂಪ್ರದಾಯ ಇತ್ತು.

ಸಾಮಾನ್ಯವಾಗಿ ಸಂಕ್ರಾಂತಿ ಪ್ರಾರಂಭವಾಗುವ ಮುನ್ನ ರೈತರು ಕಣ ಸುಗ್ಗಿ ಆರಂಭಿಸುತ್ತಾರೆ. ಸೂರ್ಯನ ಕಿರಣಗಳು ಭೂಮಿಗೆ ನೇರವಾಗಿ ಬೀಳುವುದರಿಂದ ಭೂಮಿಯಲ್ಲಿ ಶೀತದ ಪ್ರಭೆಕಡಿಮೆಯಾಗಿ ನವ ಚೈತನ್ಯ ಮೂಡುವಂತಹ ಕಾಲದಲ್ಲಿ ಹಸಿ ಹಸಿಯಾದ ಧಾನ್ಯದ ತೆನೆಗಳು ಬಹುಬೇಗ ಒಣಗಿ ತೆನೆಯಿಂದ ಕಾಳು ಬೇರ್ಪಡಿಸಲಾಗುತ್ತದೆ. ರೈತರಿಗೂ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ವಾರದ ಮುಂಚೆಯೇ ಸಗಣಿ ನೀರು ಹಾಕಿ ನಡುವೆ ಮೇಟಿ ನೆಟ್ಟು ಕಣಕ್ಕೆ ಹುಲ್ಲು ಹಾಕಿ ಅದರ ಮೇಲೆ ರೋಣುಗಲ್ಲು ಹೊಡೆದು ಹುಲ್ಲು ಮತ್ತು ಕಾಳು ಬೇರ್ಪಡಿಸಿ ಕಾಳುಗಳ ರಾಶಿ ಮಾಡಿ ಪೂಜೆ ಮಾಡುತ್ತಿದ್ದರು ಹಿರಿಯರು.

ಸಾಂಪ್ರದಾಯಿಕವಾಗಿ ರಾಶಿ ಪೂಜೆ ಮಾಡಿ ಹಣ್ಣು ಕಾಯಿ ನೈವೈದ್ಯ ಮಾಡಿ ರಾಶಿಗೆ ನಮಸ್ಕರಿಸಿ ಕಣದಲ್ಲಿ ಒಕ್ಕಣೆ ಮಾಡಿದ ಕೂಲಿ ಕಾರ್ಮಿಕರೆಲ್ಲರಿಗೂ ಪಾಲು ತೆಗೆದು ಹಂಚಿಕೆ ಮಾಡಿ ಸಂತೋಷದಿಂದ ಕಣ ಸುಗ್ಗಿ ಮಾಡುತ್ತಿದ್ದ ಜನಪದ ಸೊಗಡು, ಸಂಪ್ರದಾಯಗಳು ಇಂದು ಕಣ್ಮರೆಯಾಗುತ್ತಿವೆ.

ಇತ್ತೀಚಿನ ದಿನಗಳಲ್ಲಿ ರೈತರ ಮನೆಗಳಲ್ಲಿ ಬೇಸಾಯಕ್ಕೆ ಅಗತ್ಯವಾದ ಎತ್ತುಗಳನ್ನು ಸಾಕುವುದನ್ನೇ ರೈತರು ಕೈಬಿಟ್ಟದ್ದಾರೆ. ಹೀಗಾಗಿ ಸಾಂಪ್ರದಾಯಿಕ ಕಣ ಸುಗ್ಗಿ ಕಣ್ಮರೆಯಾಗುತ್ತದೆ. ರಸ್ತೆಗಳ ಮೇಲೆ ಹುಲ್ಲನ್ನು ಹಾಕಿ ಕಣ ಸುಗ್ಗಿ ಮಾಡುವವರೇ ಜಾಸ್ತಿಯಾಗಿದ್ದಾರೆ ಎನ್ನುತ್ತಾರೆ ದೊಡ್ಡಗೊಲ್ಲರಹಟ್ಟಿಯ ಮರಿಯಪ್ಪ, ಕರಿಯಣ್ಣ.

ಕಾಣದಾದ ರೋಣಗಲ್ಲು: ಹಿಂದೆಲ್ಲಾ ವಾರದ ತುಂಬೆಲ್ಲಾ ಕಣ ಮಾಡಿ, ಅದರಲ್ಲಿ ರೈತರು ಬೆಳೆದ ಹುಲ್ಲನ್ನು ಹಾಕಿ ಎತ್ತುಗಳ ಸಹಾಯದಿಂದ ರೋಣುಗಲ್ಲನ್ನು ಹೊಡೆದು ತೆನೆಯಿಂದ ಕಾಳನ್ನು ಹೊರತೆಗೆದು ನಂತರ ಕಣ ಸುಗ್ಗಿ ಮಾಡಿ ಖುಷಿಪಡುತ್ತಿದ್ದ ರೈತರ ರೋಣುಗಲ್ಲು ಇಂದು ಮೂಲೆ ಸೇರುತ್ತಿದೆ. ಅದರ ಜಾಗದಲ್ಲಿ ಯಂತ್ರಗಳು ಬಂದಿವೆ.

*
ಚಳಿಗಾಲದ ನಿರ್ಗಮನದ ಜೊತೆಗೆ ರೈತರಿಗೆ ನವ ಚೈತನ್ಯ ತುಂಬುವ ಸಂಕ್ರಾಂತಿ ಬಂತೆಂದರೆ ಗ್ರಾಮೀಣ ಜನಪದರು ಹಾಡು ಕಟ್ಟಿ ಕಣ ಸುಗ್ಗಿ ಮಾಡುತ್ತಿದ್ದ ಕಾಲ ಇಂದು ಕಣ್ಮರೆಯಾಗುತ್ತದೆ.
-ಡಾ. ಮೀರಾಸಾಬಿಹಳ್ಳಿ ಶಿವಣ್ಣ, ಜನಪದ ವಿದ್ವಾಂಸರು

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !