ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಂ, ಎನ್ಇಎಸ್ ಶಾಲೆಗೆ ಹೈಟೆಕ್ ಕಟ್ಟಡ

ಸರ್ಕಾರಿ ಶಾಲೆಯಲ್ಲಿ ಎ.ಸಿ ಕೊಠಡಿಗಳು, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಶಿಕ್ಷಣ
Last Updated 9 ಜುಲೈ 2021, 3:06 IST
ಅಕ್ಷರ ಗಾತ್ರ

ಹೊಳಲ್ಕೆರೆ: ಪಟ್ಟಣದ ಎಂಎಂ ಸರ್ಕಾರಿ ಶಾಲೆ ಹಾಗೂ ಎನ್ಇಎಸ್ ಪ್ರಾಥಮಿಕ ಶಾಲೆಗೆ ₹ 10 ಕೋಟಿ ವೆಚ್ಚದಲ್ಲಿ ಹೈಟೆಕ್ ಕಟ್ಟಡ ನಿರ್ಮಾಣ ಆಗುತ್ತಿದೆ. 4 ಮಹಡಿಗಳ ಬೃಹತ್ ಕಟ್ಟಡ ನಿರ್ಮಾಣವಾಗುತ್ತಿದೆ.

ಕಟ್ಟಡದಲ್ಲಿ 26 ಕೊಠಡಿಗಳು ಇರಲಿದ್ದು, ಪ್ರತಿ ಕೊಠಡಿಯಲ್ಲಿ 60 ವಿದ್ಯಾರ್ಥಿಗಳು ಕೂರುವ ಸಾಮರ್ಥ್ಯ ಹೊಂದಿವೆ. ಬೋಧನಾ ಕೊಠಡಿಗಳೊಂದಿಗೆ ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಕ್ರೀಡೆ, ಶಿಕ್ಷಕ ಹಾಗೂ
ಶಿಕ್ಷಕಿಯರಿಗೆ ಪ್ರತ್ಯೇಕ ಸಿಬ್ಬಂದಿ ಕೊಠಡಿ ನಿರ್ಮಿಸಲಾಗುತ್ತಿದೆ. ಇದೇ ಆವರಣದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಇದ್ದು, ಎಲ್‌ಕೆಜಿಗೆ ದಾಖಲಾಗುವ ಮಗು ಪಿಯುವರೆಗೆ ಒಂದೇ ಕಡೆ ಶಿಕ್ಷಣ ಪಡೆಯಬಹುದು. ಎಲ್‌ಕೆಜಿಯಿಂದ ಎಸ್ಸೆಸ್ಸೆಲ್ಸಿವರೆಗೆ ದಾಖಲಾತಿ
ನಡೆಯುತ್ತಿದೆ.

1947ರಲ್ಲಿ ಆರಂಭವಾದ ಎಂಎಂ ಸರ್ಕಾರಿ ಪ್ರೌಢಶಾಲೆ ತಾಲ್ಲೂಕಿನಲ್ಲಿಯೇ ಪ್ರಸಿದ್ಧ ಶಾಲೆಯಾಗಿದ್ದು, ತನ್ನದೇ ಆದ ಇತಿಹಾಸ ಹೊಂದಿದೆ. ಪ್ರತಿ ವರ್ಷ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದುತ್ತಾರೆ. ಇಲ್ಲಿ ಓದಿದವರು ಉನ್ನತ ಹುದ್ದೆಗಳಲ್ಲಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕವಿ
ಎಚ್.ಎಸ್. ವೆಂಟಕೇಶಮೂರ್ತಿ, ಹಾಸ್ಯನಟ ಬ್ಯಾಂಕ್ ಜನಾರ್ದನ್, ಅಮೆರಿಕದ ನಾಸಾದಲ್ಲಿ ವಿಜ್ಞಾನಿ ಆಗಿರುವ ಎಚ್.ಆರ್. ಚಂದ್ರಶೇಖರ್ ಇದೇ ಶಾಲೆಯಲ್ಲಿ ಓದಿದ್ದರು.

‘ಪಟ್ಟಣದ ಪ್ರತಿಷ್ಠಿತ ಶಾಲೆಯಾದ ಎನ್ಇಎಸ್ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಎಂಎಂ ಶಾಲೆಯ ಜೊತೆ ವಿಲೀನಗೊಳಿಸಲಾಗುತ್ತಿದೆ. ಇನ್ನು ಮುಂದೆ ಎರಡೂ ಶಾಲೆಗಳು ಒಂದೇ ಕಟ್ಟಡದಲ್ಲಿ ನಡೆಯಲಿವೆ. ಈ ವರ್ಷದಿಂದ 1ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭಿಸಲಾಗುತ್ತಿದ್ದು, ಪೋಷಕರು ಎಲ್‌ಕೆಜಿ, ಯುಕೆಜಿ, 1ನೇ ತರಗತಿಗೆ ಮಕ್ಕಳನ್ನು ದಾಖಲಿಸಬಹುದು’ ಎನ್ನುತ್ತಾರೆ ಮುಖ್ಯಶಿಕ್ಷಕ ಎಂ. ಉಚ್ಚಂಗಪ್ಪ.

‘ಕೆಲವು ಹಿರಿಯ ವಿದ್ಯಾರ್ಥಿಗಳು ಶಾಲೆಯೊಂದಿಗೆ ಸಂಬಂಧ ಕಳೆದುಕೊಂಡಿಲ್ಲ. ಅಮೆರಿಕದಲ್ಲಿ ನೆಲೆಸಿರುವ ಅಶೋಕ್ ಜೈನ್ ಎಂಬುವರು ಪ್ರತಿ ವರ್ಷ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ. ಇಲ್ಲಿ ಶಿಕ್ಷಕರಾಗಿದ್ದ ಬೆಂಗಳೂರಿನ ಎನ್.ಬಿ. ಕೃಷ್ಣನ್ ಅವರ ಮಕ್ಕಳು ತಂದೆಯ ಹೆಸರಿನಲ್ಲಿ ಪ್ರತಿಷ್ಠಾನ ರಚಿಸಿ ಕೊಂಡು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುತ್ತಿದ್ದಾರೆ. ಕೆಲವರು
ಹಿರಿಯ ವಿದ್ಯಾರ್ಥಿಗಳ ಸಂಘ, ಟ್ರಸ್ಟ್ ರಚಿಸಿಕೊಂಡು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ’ ಎನ್ನುತ್ತಾರೆ ಎಂಎಂ ಶಾಲೆಯ ಮುಖ್ಯಶಿಕ್ಷಕಿ ನಿರ್ಮಲಾ ದೇವಿ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಗಿರೀಶ್.

ಸರ್ಕಾರಿ ಶಾಲೆಯಲ್ಲಿ ಎಸಿ ಕೊಠಡಿ

ಶಾಲಾ ಕಟ್ಟಡಕ್ಕೆ ಹೆಚ್ಚು ಸೌಲಭ್ಯ ಒದಗಿಸಲಾಗುತ್ತಿದೆ. ನೂತನ ಕಟ್ಟಡದಲ್ಲಿ ಎಲ್‌ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಗಳಿಗೆ ಹವಾನಿಯಂತ್ರಿತ ಕೊಠಡಿ ನಿರ್ಮಿಸಲಾಗುತ್ತಿದೆ. ಪ್ರತಿ ತರಗತಿಗೂ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ವ್ಯವಸ್ಥೆ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಯನ್ನು ಮಾದರಿಯಾಗಿ ರೂಪಿಸಲು ಮುಂದಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಒದಗಿಸುತ್ತಿದ್ದಾರೆ.

---

ಎಲ್‌ಕೆಜಿ, ಯುಕೆಜಿ ಮತ್ತು 1ನೇ ತರಗತಿಗೆ ಈ ವರ್ಷ 120 ವಿದ್ಯಾರ್ಥಿಗಳನ್ನು ದಾಖಲಿಸುವ ಗುರಿ ಇದ್ದು, ಕರಪತ್ರ, ಧ್ವನಿವರ್ಧಕ ಹಾಗೂ ಫ್ಲೆಕ್ಸ್ ಮೂಲಕ ಪ್ರಚಾರ ನಡೆಸಲಾಗುತ್ತಿದೆ.

-ಸಿ.ಎಂ. ತಿಪ್ಪೇಸ್ವಾಮಿ, ಬಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT