ಹೊಳಲ್ಕೆರೆ: ಚುನಾವಣೆಗೂ ಮುಂಚೆ ಗ್ಯಾರಂಟಿ ನೀಡಿದಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ 5 ಕೆ.ಜಿ. ಅಕ್ಕಿ ಜತೆಗೆ 10 ಕೆ.ಜಿ. ಸೇರಿಸಿ ಒಟ್ಟು 15 ಕೆ.ಜಿ. ಅಕ್ಕಿ ಕೊಡಬೇಕು ಎಂದು ಶಾಸಕ ಎಂ.ಚಂದ್ರಪ್ಪ ಆಗ್ರಹಿಸಿದರು.
ಪಟ್ಟಣದ ವಾಲ್ಮೀಕಿ ಭವನದ ಆವರಣದಲ್ಲಿ ಕುಂಚಿಟಿಗ ಲಿಂಗಾಯಿತ ಸಮಾಜದಿಂದ ಸನ್ಮಾನ ಸ್ವೀಕರಿಸಿ ಭಾನುವಾರ ಅವರು ಮಾತನಾಡಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಗೂ ಮೊದಲು 10 ಕೆ.ಜಿ. ಅಕ್ಕಿ ಕೊಡುವುದಾಗಿ ಜನರಿಗೆ ಭರವಸೆ ನೀಡಿ ಮತ ಪಡೆದಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ 80 ಕೋಟಿ ಬಡವರಿಗೆ ತಲಾ 5 ಕೆ.ಜಿ. ಅಕ್ಕಿ ನೀಡುತ್ತಿದ್ದಾರೆ. ಅದರಂತೆ ನಮ್ಮ ರಾಜ್ಯದ ಬಡವರಿಗೂ 5 ಕೆ.ಜಿ. ಅಕ್ಕಿ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ 5 ಕೆ.ಜಿ. ಜತೆಗೆ ಹೆಚ್ಚುವರಿಯಾಗಿ 10 ಕೆ.ಜಿ. ಅಕ್ಕಿ ನೀಡಬೇಕು. ಕೇಂದ್ರದ 5 ಕೆ.ಜಿ.ಯೊಂದಿಗೆ ಇವರು 5 ಕೆ.ಜಿ. ಅಕ್ಕಿ ಕೊಟ್ಟು, ಹತ್ತು ಕೆ.ಜಿ. ಅಕ್ಕಿ ಕೊಟ್ಟೆ ಎಂದು ಹೇಳಿಕೊಳ್ಳಬಾರದು. ಅಕ್ಕಿ ಹೊಂದಿಸಲಾರದೆ ಪರಡಾಡುತ್ತಿರುವ ಕಾಂಗ್ರೆಸ್‌ನವರು ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ’ ಎಂದರು.
‘ನಾನು ಹೊಳಲ್ಕೆರೆ ಕ್ಷೇತ್ರದಲ್ಲಿ ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದು, ನಾಲ್ಕು ಬಾರಿಯೂ ವೀರಶೈವ ಸಮಾಜ ನನ್ನ ಕೈ ಹಿಡಿದಿದೆ. ಅದಕ್ಕಾಗಿ ನಾನು ನಿಮಗೆ ಋಣಿಯಾಗಿರುತ್ತೇನೆ. ನಿಮ್ಮ ನಿರೀಕ್ಷೆಯಂತೆ ಕೆಲಸ ಮಾಡಿ ನಿಮ್ಮ ಗೌರವ ಕಾಪಾಡುತ್ತೇನೆ. ಬಿ.ಎಸ್.ಯಡಿಯೂರಪ್ಪ ಕಷ್ಟಕಾಲದಲ್ಲಿ ಇದ್ದಾಗ 6 ತಿಂಗಳು ಮೊದಲೇ ರಾಜೀನಾಮೆ ನೀಡಿ ಹೊರಗೆ ಬಂದಿದ್ದೆ. ಅವರೂ ಕೂಡ ನನಗೆ ತಂದೆಯ ಸ್ಥಾನದಲ್ಲಿ ನಿಂತು ಆಶೀರ್ವಾದ ಮಾಡಿದ್ದರು’ ಎಂದು ಸ್ಮರಿಸಿದರು.
ವೀರಶೈವ ಸಮಾಜದ ಮುಖಂಡ ಹಾಗೂ ವಕೀಲ ಜಿ.ಎಚ್.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹೇಶ್ವರಪ್ಪ, ಹನುಮಂತಪ್ಪ, ಟಿ.ಸ್.ರಾಜಪ್ಪ, ರಾಮಗಿರಿ ರಾಮಣ್ಣ, ರೂಪಾ ಸುರೇಶ್, ಪುರಸಭೆ ಸದಸ್ಯರಾದ ಆರ್.ಎ.ಅಶೋಕ್, ಮುರುಗೇಶ್, ದಗ್ಗೆ ಶಿವಪ್ರಕಾಶ್, ಗುರುಮೂರ್ತಿ, ಚಿತ್ರಹಳ್ಳಿ ದೇವರಾಜು, ಪಿ.ಎಸ್.ಮೂರ್ತಿ, ಅಂಕಳಪ್ಪ, ಕುಮಾರಪ್ಪ, ಮದ್ದೇರು ರಾಜಣ್ಣ, ಪ್ರವೀಣ್, ಡಿ.ಸಿ.ಮೋಹನ್, ಡಿ.ಸಿ.ರಾಜಪ್ಪ, ಚಂದ್ರಪ್ಪ, ಕೃಷ್ಣಮೂರ್ತಿ ಹಾಗೂ ಕುಂಚಿಟಿಗ ಲಿಂಗಾಯಿತ ಸಮಾಜದ ಮುಖಂಡರು ಇದ್ದರು.
ರಾಜ್ಯದಲ್ಲಿ ಎಷ್ಟು ವಿದ್ಯುತ್ ಮೀಟರ್ ಬೋರ್ಡ್‌ಗಳಿವೆ ಎಂಬ ಲೆಕ್ಕ ಸರ್ಕಾರಕ್ಕೆ ಗೊತ್ತಿಲ್ಲವೆ? 200 ಯುನಿಟ್‌ವರೆಗೆ ವಿದ್ಯುತ್ ಉಚಿತ ಎಂದು ಘೋಷಿಸಿ ಈಗ ಗೃಹಜ್ಯೋತಿ ಯೋಜನೆಗೆ ಮತ್ತೆ ನೋಂದಣಿ ಮಾಡಿಸುವ ಅಗತ್ಯ ಇದೆಯೇ? ಚಂದ್ರಪ್ಪ ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.