ಚಿತ್ರದುರ್ಗ: ಹೊಳಲ್ಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಕೆರೆ, ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಅಧಿಕಾರಿಗಳು ಶಾಮೀಲಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿ ಶಾಸಕ ಎಂ. ಚಂದ್ರಪ್ಪ ಶ್ವೇತಪತ್ರ ಹೊರಡಿಸಲಿ ಎಂದು ಮಾಜಿ ಸಚಿವ ಎಚ್. ಆಂಜನೇಯ ಸವಾಲು ಹಾಕಿದರು.
‘ಐದು ವರ್ಷಗಳಲ್ಲಿ ಕ್ಷೇತ್ರ ವ್ಯಾಪ್ತಿ ನಡೆದ ಕಾಮಗಾರಿಗಳಲ್ಲಿ ಅಕ್ರಮ ಎಸಗಿರುವುದು ಗೊತ್ತಾಗಿದೆ. ಕಾಮಗಾರಿಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕೃತವಾಗಿ ನೀಡದೇ ವಂಚಿಸಲಾಗುತ್ತಿದೆ. ಅಕ್ರಮಕ್ಕೆ ಸಹಕರಿಸದ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ವರ್ಗಾವಣೆ ಶಿಕ್ಷೆಗೆ ಗುರಿಪಡಿಸ ಲಾಗುತ್ತಿದೆ’ ಎಂದು ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದರು.
‘300 ಕೆರೆ ಗಳನ್ನು ನಿರ್ಮಿಸಿದ್ದಾಗಿ ಶಾಸಕರು ಭಾಷಣ ಮಾಡುತ್ತಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಕೆರೆ ಇವೆ, ಎಷ್ಟನ್ನು ಅಭಿವೃದ್ಧಿ ಮಾಡಲಾಗಿದೆ ಹಾಗೂ ಯಾವ ಅನುದಾನ ಬಳಕೆ ಮಾಡಲಾಗಿದೆ ಎಂಬ ಮಾಹಿತಿ ಮುಚ್ಚಿಡಲಾಗುತ್ತಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಶಾಸಕರ ಸೂಚನೆಯಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.
‘ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ತುಂಡು ಗುತ್ತಿಗೆ ಆಧಾರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಬಿಲ್ ಪಾವತಿ ಆಗುತ್ತಿದೆ. ಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗೆ ಮೀಸಲಿಟ್ಟಿರುವ ಡಿಎಂಎಫ್ ನಿಧಿಯನ್ನು ಬೇಕಾಬಿಟ್ಟಿ ಬಳಕೆ ಮಾಡಲಾಗಿದೆ. ₹ 60 ಕೋಟಿ ಅನುದಾನವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ’ ಎಂದು ದೂರಿದರು.
‘ಅಮೃತ್ ಮಹಲ್ ಕಾವಲು ಭೂಮಿಯನ್ನು ಸಂಬಂಧಿಕರ ಸಂಸ್ಥೆಗಳಿಗೆ ಹಸ್ತಾಂತರಿಸಲು ಶಾಸಕರು ಹುನ್ನಾರ ನಡೆಸಿದ್ದಾರೆ. ಕನಸುಗಾರನ ಕಟ್ಟೆ ಎಂಬ ಬಯಲು ರಂಗಮಂದಿರವನ್ನು ಧ್ವಂಸಗೊಳಿಸಿ ರಂಗಮಂದಿರ ನಿರ್ಮಿಸಲಾಗಿದೆ. ಇದಕ್ಕೆ ಎಷ್ಟು ಅನುದಾನ ವಿನಿಯೋಗಿಸಲಾಗಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಲು ಶಾಸಕರು ಹಿಂದೇಟು ಹಾಕುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಈ ನೂತನ ರಂಗಮಂದಿರ ಉರುಳಿಸಲಾಗುವುದು’ ಎಂದು ಹರಿಹಾಯ್ದರು.
ಕಾಂಗ್ರೆಸ್ ಮುಖಂಡರಾದ ಪ್ರಕಾಶ್, ಎಚ್.ಟಿ. ಹನುಮಂತಪ್ಪ, ರಂಗಯ್ಯ, ಓಂಕಾರಸ್ವಾಮಿ, ನಟರಾಜ ಇದ್ದರು.
............
‘ಜೈಲು ದಾರಿ ತುಳಿಯಬೇಡಿ’
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಅವಧಿಯಲ್ಲಿ ನಡೆದ ಅಕ್ರಮಗಳ ತನಿಖೆಗೆ ಆದೇಶಿಸಲಿದೆ. ಅಧಿಕಾರಿಗಳು ಅಕ್ರಮದಲ್ಲಿ ಪಾಲುದಾರರಾಗಿ ಜೈಲು ದಾರಿ ತುಳಿಯಬೇಡಿ ಎಂದು ಮಾಜಿ ಸಚಿವ ಎಚ್. ಆಂಜನೇಯ ತಿಳಿಸಿದರು.
‘ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತುಂಡು ಗುತ್ತಿಗೆ ನೀಡಿ ಅಕ್ರಮ ಎಸಗಲಾಗುತ್ತಿದೆ. ಇಂತಹ ಕಾಮಗಾರಿಗಳ ಬಿಲ್ ಪಾವಿಸಿದ ಅಧಿಕಾರಿಗಳು ಸಮಸ್ಯೆಗೆ ಸಿಲುವುದು ನಿಶ್ಚಿತ. ಅಕ್ರಮದಲ್ಲಿ ಭಾಗೀದಾರರಾಗುವವರಿಗೆ ಪ್ರತ್ಯೇಕ ಜೈಲು ನಿರ್ಮಿಸುತ್ತೇವೆ. ಎಚ್ಚರಿಕೆಯಿಂದ ಹಾಗೂ ನಿಷ್ಪಕ್ಷಪಾತವಾಗಿ ಕೆಲಸ ಮಾಡಿ’ ಎಂದು ಹರಿಹಾಯ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.