ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿನಿಯರಿಗೆ ಕಳಪೆ ಊಟ: ಅಡುಗೆಯವರಿಗೆ ತಹಶೀಲ್ದಾರ್‌ ತರಾಟೆ

ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ತಹಶೀಲ್ದಾರ್‌ ಭೇಟಿ
Last Updated 14 ಜನವರಿ 2022, 6:50 IST
ಅಕ್ಷರ ಗಾತ್ರ

ಚಳ್ಳಕೆರೆ: ಪಾವಗಡ ರಸ್ತೆ ಬಳಿ ಇರುವ ಬಿಸಿಎಂ ಇಲಾಖೆಯ ದೇವರಾಜ ಅರಸು ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಗುರುವಾರ ತಹಶೀಲ್ದಾರ್ ಎನ್. ರಘುಮೂರ್ತಿ ದಿಢೀರ್ ಭೇಟಿ ನೀಡಿ ಊಟ ಪರಿಶೀಲಿಸಿದರು.

ಕಳಪೆ ಊಟ ಹಾಕುತ್ತಾರೆ ಎಂದು ವಿದ್ಯಾರ್ಥಿನಿಯರಿಂದ ದೂರು ಕೇಳಿ ಬಂದ ಕಾರಣ ಅವರು ಭೇಟಿ ನೀಡಿದರು. ಅಡುಗೆ ಕೋಣೆಯ ಚಾವಣಿಯಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿದ್ದ ಜಿರಲೆ-ಜೇಡ, ದೂಳು ಕಂಡು ಬಂತು. ಬಾಡಿ ಹೋದ, ಕೊಳೆತ ಸೊಪ್ಪು ತರಕಾರಿಯನ್ನು ಅರೆ ಬರೆ ಬೇಯಿಸಿ ಅಡುಗೆ ತಯಾರಿಸಿ ಮಕ್ಕಳಿಗೆ ಉಣ ಬಡಿಸುತ್ತಿರುವುದನ್ನು ಕಣ್ಣಾರೆ ಕಂಡ ಅವರು ಅಡುಗೆಯವರನ್ನು ತರಾಟೆಗೆ ತೆಗೆದುಕೊಂಡರು.

‘ಪ್ರತಿದಿನ ಚಿತ್ರಾನ್ನ -ಪುಳಿಯೊಗರೆ ಬಿಟ್ಟರೆ ಇನ್ಯಾವುದೇ ಉಪಾಹಾರ ತಯಾರಿಸುವುದಿಲ್ಲ. ಊಟಕ್ಕೆ ಬಾಡಿದ ಸೊಪ್ಪು, ತರಕಾರಿಗಳನ್ನೇ ಹೆಚ್ಚು ಬಳಸುತ್ತಾರೆ. ಸಾಂಬಾರಿಗೆ ಯಾವುದೇ ರುಚಿ ಇರುವುದಿಲ್ಲ. ನೀರು ನೀರಾಗಿರುತ್ತದೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

‘ವಾರದಲ್ಲಿ ಎರಡು ದಿನ ಮಾತ್ರ ಅವಶ್ಯಕತೆಗೆ ತಕ್ಕಂತೆ ಊಟ ಹಾಕುತ್ತಾರೆ. ಇನ್ನುಳಿದ ನಾಲ್ಕು ದಿನ ತೀರಾ ಕಡಿಮೆ ಪ್ರಮಾಣದಲ್ಲಿ ನೀಡುತ್ತಾರೆ. ಕಡಿಮೆ ಬಿದ್ದರೆ ಯಾವುದೇ ಕಾರಣಕ್ಕೂ ಇನ್ನೊಂದು ಬಾರಿ ಊಟ ಸಿದ್ಧಪಡಿಸುವುದಿಲ್ಲ. ಪಕ್ಕದ ವಿದ್ಯಾರ್ಥಿನಿಲಯಕ್ಕೆ ಹೋಗಿ ಅಲ್ಲಿ ಉಳಿದಿದ್ದ ಅನ್ನವನ್ನು ತಂದು ಹಾಕುತ್ತಾರೆ. ಊಟ ಹಾಕುವಲ್ಲೂ ಹೆಣ್ಣುಮಕ್ಕಳನ್ನು ಶೋಷಣೆ ಮಾಡುತ್ತಾರೆ’ ಎಂದು ವಿದ್ಯಾರ್ಥಿನಿಯರು ಅಧಿಕಾರಿಗಳ ಬಳಿ ದೂರಿದರು.

‘ಕೊರೊನಾ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ಅಡುಗೆಕೋಣೆ, ಆಹಾರ ಧಾನ್ಯಗಳ ದಾಸ್ತಾನು ಕೊಠಡಿಯನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಅಕ್ಕಿ, ಬೇಳೆ, ಸೊಪ್ಪು ಹಾಗೂ ತರಕಾರಿ ಪ್ರತ್ಯೇಕವಾಗಿ ಸಂಗ್ರಹಿಸಿ ಇಡುವ ವ್ಯವಸ್ಥೆಯಾಗಬೇಕು. ತಾಜಾ ಸೊಪ್ಪು, ತರಕಾರಿಯನ್ನೇ ಪ್ರತಿ ದಿನ ಊಟಕ್ಕೆ ಬಳಸಬೇಕು. ಪ್ರತಿದಿನ ಒಂದೊಂದು ತರಹದ ಉಪಾಹಾರ ತಯಾರಿಸಬೇಕು. ಶುದ್ಧ ಕುಡಿಯುವ ನೀರು ಒದಗಿಸಬೇಕು’ ಎಂದು ಮೇಲ್ವಿಚಾರಕರು ಹಾಗೂ ಅಡುಗೆಯರಿಗೆ ತಾಕೀತು ಮಾಡಿದರು.

‘ಕಳಪೆ ಊಟ ಹಾಕಿದರೆ ಆರೋಗ್ಯ ಹದಗೆಡುವುದಷ್ಟೇ ಅಲ್ಲದೇ ಮಕ್ಕಳ ಮುಂದಿನ ಭವಿಷ್ಯಕ್ಕೆ ತೀವ್ರ ತೊಂದರೆ ಯಾಗುತ್ತದೆ. ಸರ್ಕಾರ ನೀಡುವ ಹಣದಲ್ಲೇ ಉತ್ತಮ ಪೋಷಕಾಂಶವುಳ್ಳ ರುಚಿಯಾದ ಆಹಾರವನ್ನು ತಯಾರಿಸಿ ಮಕ್ಕಳಿಗೆ ಉಣ ಬಡಿಸಬೇಕು. ಅವರನ್ನು ನಿಮ್ಮ ಮಕ್ಕಳ ರೀತಿಯಲ್ಲಿ ಕಾಣಬೇಕು’ ಎಂದು ಹೇಳಿದರು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ರಾಜಣ್ಣ, ನಿಖಿಲ್, ಭರತ್‍ರಾಜ್
ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT