ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಗಳ ರಕ್ಷಣೆ ಮನೆಯಿಂದಲೇ ಆರಂಭವಾಗಲಿ

ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ. ಗಿರೀಶ ಸಲಹೆ
Last Updated 11 ಡಿಸೆಂಬರ್ 2021, 2:27 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ದೇಶ ಮತ್ತು ಸಮಾಜದ ರಕ್ಷಣೆ ಎಲ್ಲರ ಹೊಣೆ. ಅದೇ ರೀತಿ ವಯಸ್ಸಾದ ಪೋಷಕರು ಮತ್ತು ಮಕ್ಕಳ ರಕ್ಷಣೆ ಮಾಡುವ ಜವಾಬ್ದಾರಿ ಮನೆಗಳಿಂದಲೇ ಆರಂಭವಾಗಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ. ಗಿರೀಶ ಸಲಹೆ ನೀಡಿದರು.

ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರಸ್ವತಿ ಕಾನೂನು ಕಾಲೇಜಿನಿಂದ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಮಾನವ ಹಕ್ಕುಗಳ ಕುರಿತ ರಾಜ್ಯ ಆಯೋಗದ ಕೈಪಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ತಂದೆ–ತಾಯಿ, ಅಜ್ಜ–ಅಜ್ಜಿ, ಗುರು–ಹಿರಿಯರನ್ನು ಪೂಜ್ಯ ಭಾವನೆಯಿಂದ ಕಾಣಬೇಕು. ಮಾನವ ಹಕ್ಕುಗಳ ರಕ್ಷಣೆ ಮಾಡುವ ಜವಾಬ್ದಾರಿ ಕೇವಲ ಒಬ್ಬರಿಂದ ಆಗುವ ಕಾರ್ಯವಲ್ಲ. ಅದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ. ಆಗ ಮಾತ್ರ ಇದರಲ್ಲಿ ಸಫಲತೆ ಕಾಣಬಹುದು’ ಎಂದು ಅಭಿಪ್ರಾಯಪಟ್ಟರು.

‘ಯಾರಿಂದ ಯಾರಿಗೇ ನೋವಾದರೂ ಅದು ಕೂಡ ಮಾನವ ಹಕ್ಕುಗಳ ಉಲ್ಲಂಘನೆ ಆಗಲಿದೆ. ಆದ್ದರಿಂದ ಪರರ ಸಂತೋಷ ಕಾಪಾಡುವಂತಹ ಹೃದಯವಂತಿಕೆ ಬೆಳೆಸಿಕೊಳ್ಳಬೇಕು. ಒಬ್ಬರು ಮತ್ತೊಬ್ಬರ ಹಕ್ಕು ರಕ್ಷಿಸಲು ಮುಂದಾದರೆ, ಯಾವುದೇ ಕಾಯ್ದೆಗಳ ಅಗತ್ಯ ಇರುವುದಿಲ್ಲ’ ಎಂದು ಹೇಳಿದರು.

ಅಪರಾಧ ಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಡಾ.ನಟರಾಜ್, ‘ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಅಪರಾಧಗಳ ಅಂಕಿ–ಅಂಶಗಳ ಪ್ರಕಾರ 1993-94ರ ಹಿಂದೆ ಒಂದೇ ದಿನದಲ್ಲಿ 400ರಿಂದ 500 ಲಾಕಪ್‌ ಡೆತ್‌ ಪ್ರಕರಣ ಕಾಣಬಹುದು. ಆದರೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಹಕ್ಕುಗಳ ಸಂರಕ್ಷಣೆಗೆ ಅಧಿನಿಯಮ ಆರಂಭವಾದ ಈ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ’ ಎಂದು ತಿಳಿಸಿದರು.

ಕೋವಿಡ್ ವೇಳೆ ಮಕ್ಕಳ ಹಕ್ಕುಗಳ ಉಲ್ಲಂಘನೆ ಸಾಕಷ್ಟು ಆಗಿವೆ. ಈ ಕುರಿತು ರಾಷ್ಟ್ರೀಯ ಮಕ್ಕಳ ಆಯೋಗ, ಮಹಿಳಾ ಆಯೋಗ ಸರ್ಕಾರಕ್ಕೆ ವರದಿ ನೀಡಿವೆ. ಚೈಲ್ಡ್ ರೈಟ್ಸ್ ಸಂಸ್ಥೆ ಪ್ರಮುಖ ನಗರ, ಪಟ್ಟಣಗಳಲ್ಲಿ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸರ್ವೆ ಕೂಡ ಮಾಡಿದ್ದಾರೆ. ಕಾಣೆಯಾದ ಮಕ್ಕಳು ಮುಂದೆ ಬಾಲಕಾರ್ಮಿಕರಾಗಿ ಶೋಷಣೆಗೆ ಒಳಗಾಗಿರುವ ಸಾಧ್ಯತೆಯೂ ಇದೆ ಎಂದರು.

ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಉಪವಿಭಾಗಾಧಿಕಾರಿ ಆರ್. ಚಂದ್ರಯ್ಯ, ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ
ಡಾ.ಎಂ.ಎಸ್. ಸುಧಾದೇವಿ, ಮಕ್ಕಳ ರಕ್ಷಣಾಧಿಕಾರಿ ಲೋಕೇಶಪ್ಪ ಇದ್ದರು.

***

ರಾಷ್ಟ್ರೀಯ, ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ಥಾಪನೆ ಬಳಿಕ ಸಾಕಷ್ಟು ಬದಲಾವಣೆಯಾಗಿದೆ. ಹಕ್ಕುಗಳನ್ನು ಜಾರಿಗೆ ತರುವಲ್ಲೂ ಪ್ರಮುಖ ಪಾತ್ರ ವಹಿಸಿಸುತ್ತಿವೆ. ಎಲ್ಲರಿಗೂ ವಸತಿ, ವಸ್ತ್ರ, ಆಹಾರ ಸೌಲಭ್ಯ ಸಿಗಬೇಕು ಎಂಬ ಉದ್ದೇಶವನ್ನು ಹೊಂದಿವೆ.

ಬಿ. ಧನಂಜಯ, ಜಿಲ್ಲಾ ವಾರ್ತಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT