ಶುಕ್ರವಾರ, ಏಪ್ರಿಲ್ 23, 2021
27 °C
ವಿಶ್ವ ಆಹಾರ ದಿನಾಚರಣೆಯಲ್ಲಿ ಸಿಎಫ್‌ಟಿಆರ್‌ಐ ಪ್ರಧಾನ ಸಂಶೋಧಕ ಡಾ.ಪಿ.ವಿ. ರವೀಂದ್ರ

ಕಲಬೆರಕೆ ಕಂಡರೆ ದೂರು ದಾಖಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಕಲಬೆರಕೆ ಆಹಾರ ಪದಾರ್ಥಗಳು ಹೆಚ್ಚಾಗಿ ಗ್ರಾಹಕರ ಕೈ ಸೇರುತ್ತಿವೆ. ಅವುಗಳನ್ನು ಪರೀಕ್ಷಿಸಿ, ಕಲಬೆರಕೆ ಆಗಿದ್ದಲ್ಲಿ ದೂರು ದಾಖಲಿಸಿ’ ಎಂದು ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಪ್ರಧಾನ ಸಂಶೋಧಕ ಡಾ.ಪಿ.ವಿ. ರವೀಂದ್ರ ಸಲಹೆ ನೀಡಿದರು.

ಐಎಟಿ ಸಭಾಂಗಣದಲ್ಲಿ ಬುಧವಾರ ಕೃಷಿ ತಂತ್ರಜ್ಞರ ಸಂಸ್ಥೆ ಪ್ರಾದೇಶಿಕ ಘಟಕ ಹಾಗೂ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ವಿಶ್ವ ಆಹಾರ ದಿನಾಚರಣೆ ಹಾಗೂ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ಅಂಶ ಸೇರ್ಪಡೆಯಾಗುತ್ತಿದೆ. ಈ ಕುರಿತು ಜನತೆ ಜಾಗೃತರಾಗಬೇಕು. ಕಲಬೆರಕೆ ಆಹಾರ ತಯಾರಿಸುವ ಉತ್ಪಾದಕರ ವಿರುದ್ಧ ದೂರು ನೀಡಿ, ಕಾನೂನಾತ್ಮಕವಾಗಿ ಗ್ರಾಹಕರು ನ್ಯಾಯ ಪಡೆದುಕೊಳ್ಳಬಹುದು’ ಎಂದರು.

‘ಜೀವನ ಶೈಲಿ, ಆಹಾರ ಕ್ರಮಗಳಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವಂಥ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದ್ದರಿಂದ ಸುರಕ್ಷತಾ ಹಾಗೂ ಆರೋಗ್ಯಕರ ಆಹಾರ ಕ್ರಮದಿಂದ ಅನೇಕ ಬಗೆಯ ರೋಗಗಳನ್ನು ನಿಯಂತ್ರಿಸಲು ಸಾಧ್ಯವಿದೆ’ ಎಂದು ಹೇಳಿದರು.

‘ನಮ್ಮ ದೇಶದಲ್ಲಿ ಮಧುಮೇಹ ಸಾಮಾನ್ಯ ರೋಗವಾಗಿದೆ. ಉಪಯುಕ್ತ ಎಂದು ತಯಾರಿಸಲಾದ ಪ್ಲಾಸ್ಟಿಕ್‌ನಿಂದ ಈಗ ತೊಂದರೆಯೇ ಹೆಚ್ಚಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಎಷ್ಟೇ ಅಭಿವೃದ್ಧಿ ಸಾಧಿಸಿದ್ದರೂ ಹಳೆಯ ಕಾಲದ ಜೀವನ ಶೈಲಿಯೇ ಉತ್ತಮ ಎಂಬ ಅಭಿಪ್ರಾಯಕ್ಕೂ ಬರುತ್ತಿದ್ದೇವೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ. ಸಂಗಪ್ಪ, ‘ಹಸಿವು ಮುಕ್ತ ಸಮಾಜವಾಗಿಸುವಲ್ಲಿ ರೈತರ ಪಾತ್ರ ಅಮೂಲ್ಯವಾದುದು. ಆದರೆ, ಬರಪೀಡಿತ ಜಿಲ್ಲೆಗಳಲ್ಲಿ ರೈತರು ಮುಂಗಾರು ಮಳೆಯೊಂದಿಗೆ ಜೂಜಾಟ ಆಡುವಂಥ ಸ್ಥಿತಿ ನಿರ್ಮಾಣವಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಮಳೆಯ ಅಸಮತೋಲನ ಹಂಚಿಕೆಯಿಂದಾಗಿ ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ ಉಂಟಾಗುತ್ತಿದ್ದು, ಅನೇಕ ಮಂದಿ ಆರ್ಥಿಕವಾಗಿ ಕೆಳಸ್ಥರದಲ್ಲೇ ಜೀವನ ಸಾಗಿಸುವ ದುಸ್ಥಿತಿಯಲ್ಲಿದ್ದಾರೆ. ಪ್ರಸ್ತುತ ದಿನಗಳಲ್ಲಿ ವಿವಿಧ ಕಾರಣಗಳಿಂದಾಗಿ ರೈತರ ಬದುಕು ಆತಂಕದಲ್ಲಿಯೇ ಮುಂದುವರಿದಿದೆ’ ಎಂದು ವಿಷಾದಿಸಿದರು.

‘ಕೃಷಿ ಪ್ರಧಾನ ರಾಷ್ಟ್ರದಲ್ಲಿ ಯುವಕರು ಕೆಲ ವರ್ಷಗಳಿಂದ ಕೃಷಿ ಚಟುವಟಿಕೆಯಿಂದಲೇ ವಿಮುಖರಾಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದ ಅವರು, ‘ರೈತರು ಬೆಳೆದ ಆಹಾರ ಪದಾರ್ಥಗಳನ್ನು ಅನಾವಶ್ಯಕವಾಗಿ ವ್ಯರ್ಥ ಮಾಡದೇ, ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಹೇಳಿದರು.

ಜಂಟಿ ಕೃಷಿ ನಿರ್ದೇಶಕ ವಿ. ಸದಾಶಿವ, ಹಿರಿಯೂರು ತೋಟಗಾರಿಕೆ ಕಾಲೇಜಿನ ಡೀನ್ ಡಾ.ಎಚ್. ನಾರಾಯಣಸ್ವಾಮಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಟಿ. ಕೃಷ್ಣಪ್ಪ, ಕೃಷಿ ತಂತ್ರಜ್ಞರ ಸಂಸ್ಥೆ ಮಾಜಿ ಅಧ್ಯಕ್ಷ ಜಯರಾಮರೆಡ್ಡಿ, ಜಿ. ಚಿದಾನಂದಪ್ಪ, ಉಪಾಧ್ಯಕ್ಷ ಎಸ್. ಹನುಮಂತರಾಯರೆಡ್ಡಿ, ಕಾರ್ಯದರ್ಶಿ ತಿಪ್ಪೇಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು