ಮಂಗಳವಾರ, ಅಕ್ಟೋಬರ್ 26, 2021
21 °C
ಹಾಡಿ–ಕುಣಿದ ಯುವ ಸಮೂಹ

ಚಿತ್ರದುರ್ಗ: ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೋವಿಡ್‌ ಕಾರಣಕ್ಕೆ ಜಿಲ್ಲಾಡಳಿತ ವಿಧಿಸಿದ್ದ ಹಲವು ನಿರ್ಬಂಧಗಳ ನಡುವೆಯೂ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ನಗರದಲ್ಲಿ ಶನಿವಾರ ವಿಜೃಂಭಣೆಯಿಂದ ನಡೆಯಿತು. ನಿರೀಕ್ಷೆ ಮೀರಿ ಬಂದಿದ್ದ ಭಕ್ತರು ಗಣೇಶ ಮೂರ್ತಿಯನ್ನು ಕಣ್ತುಂಬಿಕೊಂಡು ಪುನೀತರಾದರು.

ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳದ ವತಿಯಿಂದ ಬಿ.ಡಿ. ರಸ್ತೆಯ ಜೈನಧಾಮದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿಯನ್ನು 21ನೇ ದಿನ ವಿಸರ್ಜನೆ ಮಾಡಲಾಯಿತು. ಮಧ್ಯಾಹ್ನ 12.30ಕ್ಕೆ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ರಾತ್ರಿಯವರೆಗೂ ಸಂಚರಿಸಿತು. ಚಂದ್ರವಳ್ಳಿ ಕೆರೆ ಸಮೀಪ ನಿರ್ಮಿಸಿದ ಕೊಳದಲ್ಲಿ ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಲಾಯಿತು.

ಹಿಂದೂ ಮಹಾಗಣಪತಿಯ ವಿಸರ್ಜನಾ ಮೆರವಣಿಗೆ ಪ್ರತಿ ವರ್ಷ ಅದ್ದೂರಿಯಾಗಿ ನಡೆಯುತ್ತಿತ್ತು. ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ 2020ರಲ್ಲಿ ಇದು ಸರಳ ರೂಪ ಪಡೆಯಿತು. ಪ್ರಸಕ್ತ ವರ್ಷವೂ ವಿಸರ್ಜನಾ ಮೆರವಣಿಗೆಯನ್ನು ಎರಡು ಗಂಟೆಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಡಳಿತ ಸೂಚಿಸಿತ್ತು. ಡಿ.ಜೆ. ಬಳಕೆಗೆ ಅನುಮತಿ ನಿರಾಕರಿಸಿತ್ತು. ಬೆರಳೆಣಿಕೆಯ ಕಲಾತಂಡಗಳಿಗೆ ಮಾತ್ರ ಅವಕಾಶ ನೀಡಿತ್ತು.

ವಿಸರ್ಜನಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಗಣೇಶಮೂರ್ತಿಗೆ ಪೂಜೆ ನೆರವೇರಿಸಲಾಯಿತು. ತರಹೇವಾರಿ ಪುಷ್ಪಗಳಿಂದ ಅಲಂಕೃತಗೊಂಡ ತೆರೆದ ವಾಹನಕ್ಕೆ ಸ್ಥಳಾಂತರಿಸಲಾಯಿತು. ಮಠಾಧೀಶರ ಆಶೀರ್ವಚನ, ಹರಾಜು ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಜೈನಧಾಮದಿಂದ ಹೊರವಣಿಗೆ ಹೊರಟಿತು. ಹಲವು ಕಲಾತಂಡಗಳು ಮೆರವಣಿಗೆಗೆ ಸಾಥ್‌ ನೀಡಿದವು.

ಕೋಟೆನಾಡು ಕೇಸರಿಮಯ: ಗಣೇಶಮೂರ್ತಿ ವಿಸರ್ಜನೆಯ ಅಂಗವಾಗಿ ಕೋಟೆನಾಡು ಚಿತ್ರದುರ್ಗವನ್ನು ಕೇಸರಿಮಯ ಮಾಡಲಾಗಿತ್ತು. ನಗರದ ಪ್ರಮುಖ ರಸ್ತೆ, ವೃತ್ತ ಹಾಗೂ ಪ್ರತಿಮೆಗಳ ಸುತ್ತ ಕೇಸರಿ ಬಾವುಟ, ಬ್ಯಾನರ್‌ ಹಾಗೂ ಬಂಟಿಂಗ್ಸ್‌ ಕಟ್ಟಲಾಗಿತ್ತು. ಮದಕರಿ ನಾಯಕ ವೃತ್ತವನ್ನು ರಾಜ ವೈಭವದ ಮಾದರಿಯಲ್ಲಿ ಸಿಂಗರಿಸಲಾಗಿತ್ತು. ಒನಕೆ ಓಬವ್ವ ವೃತ್ತ, ಕನಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತಗಳು ಕಂಗೊಳಿಸುತ್ತಿದ್ದವು.

ಮೆರವಣಿಗೆ ಸಾಗುವ ಬಿ.ಡಿ. ರಸ್ತೆ ಹಾಗೂ ಹೊಳಲ್ಕೆರೆ ಮಾರ್ಗವನ್ನು ದೀಪಾಲಂಕರ ಮಾಡಲಾಗಿತ್ತು. ಸಂಜೆಯಾಗುತ್ತಲೇ ದೀಪಾಲಂಕಾರ ಕಣ್ಮನ ಸೆಳೆಯುತ್ತಿತ್ತು. ಅನೇಕ ಖಾಸಗಿ ಕಟ್ಟಡಗಳು ಕೂಡ ದೀಪಾಲಂಕಾರದಿಂದ ಝಗಮಗಿಸುತ್ತಿದ್ದವು. ವಾಸವಿ ವೃತ್ತ ಹಾಗೂ ಮಹಾವೀರ ವೃತ್ತದಲ್ಲಿ ನಿರ್ಮಿಸಿದ್ದ ಮಂಟಪಗಳು ಗಮನ ಸೆಳೆದವು.

ಹರಿದುಬಂದ ಭಕ್ತ ಸಾಗರ: ಕೋವಿಡ್‌ ಕಾರಣಕ್ಕೆ ಏಕಕಾಲಕ್ಕೆ ಹೆಚ್ಚು ಜನ ಸೇರದಂತೆ ಪೊಲೀಸರು ಸೂಚನೆ ನೀಡಿದ್ದರು. ಮನೆಯಲ್ಲೇ ಕುಳಿತು ಮಹಾಗಣಪತಿ ವಿಸರ್ಜನೆಯ ನೇರಪ್ರಸಾರ ವೀಕ್ಷಿಸುವಂತೆ ಜಿಲ್ಲಾಡಳಿತ ಸಲಹೆ ನೀಡಿತ್ತು. ಇದನ್ನು ಲೆಕ್ಕಿಸದೇ ಭಕ್ತ ಸಾಗರವೇ ಹರಿದು ಬಂದಿತ್ತು. ಸಾವಿರಾರು ಸಂಖ್ಯೆಯ ಭಕ್ತರು ಸೇರಿದ್ದು ಆಯೋಜಕರಲ್ಲಿಯೂ ಅಚ್ಚರಿ ಮೂಡಿಸಿತು.

ಹೆಚ್ಚು ಜನರು ಸೇರದಂತೆ ಪೊಲೀಸರು ಹಲವು ನಿರ್ಬಂಧಗಳನ್ನು ವಿಧಿಸಿದ್ದರು. ನಗರದ ಪ್ರಮುಖ ಮಾರ್ಗಗಳ ಪ್ರವೇಶ ನಿರ್ಬಂಧಿಸಿದ್ದರು. ಹೊರವಲಯದಲ್ಲಿ ನಾಕಾಬಂದಿ ನಿರ್ಮಿಸಿ ಜನರಿಗೆ ಸೂಚನೆ ನೀಡುತ್ತಿದ್ದರು. ಜೈನಧಾಮದಿಂದ ಕನಕವೃತ್ತದವರೆಗೆ ಸಾವಿರಾರು ಜನರು ರಸ್ತೆ ಬದಿಯಲ್ಲಿ ನಿಂತು ಕಾಯುತ್ತಿದ್ದರು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಕಣ್ಣು ಹಾಯಿಸಿದಷ್ಟು ದೂರದವರೆಗೆ ಜನರೇ ಕಾಣಿಸುತ್ತಿದ್ದರು.

ಬೆಳಿಗ್ಗೆ 10.30ರ ವೇಳೆಗೆ ಗಣಪತಿ ಪೆಂಡಾಲ್‌ ಬಳಿಗೆ ಜನರು ಬರತೊಡಗಿದರು. ಇದರಿಂದ ಪೆಂಡಾಲ್‌ ಆವರಣ ಕಿಕ್ಕಿರಿದು ತುಂಬಿತ್ತು. ಪೂಜೆ ಹಾಗೂ ಸಭಾ ಕಾರ್ಯಕ್ರಮದ ಕಾರಣಕ್ಕೆ ಮೆರವಣಿಗೆ ನಿಗದಿಗಿಂತ ಎರಡು ಗಂಟೆ ವಿಳಂಬವಾಗಿ ಆರಂಭವಾಯಿತು. ಗಣೇಶಮೂರ್ತಿ ಹೊತ್ತ ತೆರದ ವಾಹನ ಜೈನಧಾಮದಿಂದ ಹೊರಗೆ ಬರುತ್ತಿದ್ದಂತೆ ‘ಜೈ ಶ್ರೀರಾಮ್‌’ ‘ಹರ ಹರ ಮಹಾದೇವ’, ‘ಗಣಪತಿ ಬಪ್ಪ ಮೋರಯಾ’ ಘೋಷಣೆಗಳು ಮೊಳಗಿದವು.

ಆಗಸದಿಂದ ಪುಷ್ಪಾರ್ಚನೆ: ಮೆರವಣಿಗೆ ಸಾಗುವ ಮಾರ್ಗವನ್ನು ಶುಚಿಗೊಳಿಸಲಾಗಿತ್ತು. ವಾಹನ ಸಂಚಾರಕ್ಕೆ ಬೆಳಿಗ್ಗೆಯಿಂದಲೇ ನಿರ್ಬಂಧ ವಿಧಿಸಲಾಗಿತ್ತು. ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ರಸ್ತೆಯನ್ನು ಗುಡಿಸಿ ರಂಗೋಲಿ ಹಾಕಲಾಗಿತ್ತು. ಅಲ್ಲಲ್ಲಿ ಪೂಜೆಗೆ ಅವಕಾಶ ಕಲ್ಪಿಸಲಾಯಿತು. ಭಕ್ತರು ಹಣ್ಣು–ಕಾಯಿ ಅರ್ಪಿಸಿ ಗಣೇಶಮೂರ್ತಿಯನ್ನು ಕಣ್ತುಂಬಿಕೊಂಡರು.

ನಿಧಾನವಾಗಿ ಹೊರಟ ಮೆರವಣಿಗೆ ಜೈನಧಾಮದಿಂದ ಮದಕರಿನಾಯಕ ವೃತ್ತಕ್ಕೆ ಬರುವ ಹೊತ್ತಿಗೆ ಸಂಜೆಯಾಗಿತ್ತು. ಬೃಹತ್‌ ಗಾತ್ರದ ಕ್ರೇನ್‌ವೊಂದರಲ್ಲಿ ಗಣೇಶಮೂರ್ತಿಗೆ ಆಗಸದಿಂದ ಪುಷ್ಪಾರ್ಚನೆ ಮಾಡಿದ ದೃಶ್ಯ ಮನಮೋಹಕವಾಗಿತ್ತು. ತರಹೇವಾರಿ ಪುಷ್ಪವೃಷ್ಟಿ ಆಗುತ್ತಿದ್ದಂತೆ ಭಕ್ತರು ಪುಳಕಗೊಂಡರು. ಕಲಾತಂಡಗಳ ಸದ್ದಿಗೆ ಹುಚ್ಚೆದ್ದು ಕುಣಿದು ಸಂಭ್ರಮಿಸಿದರು.

ಶೋಭಾಯಾತ್ರೆ ಅಂಗವಾಗಿ ಪ್ರತಿ ವರ್ಷ ಊಟ, ನೀರು ಹಾಗೂ ಮಜ್ಜಿಗೆ ಸೇವೆಯನ್ನು ಭಕ್ತರು ಉಚಿತವಾಗಿ ಆಯೋಜಿಸುತ್ತಿದ್ದರು. ಮೆರವಣಿಗೆ ಸಾಗುವ ಮಾರ್ಗದ ಉದ್ದಕ್ಕೂ ಪ್ರಸಾದ ವಿತರಣೆ ನಡೆಯುತ್ತಿತ್ತು. ಕೋವಿಡ್‌ ಕಾರಣಕ್ಕೆ ಪ್ರಸಾದ ವಿತರಣೆಗೆ ಅವಕಾಶ ಇರಲಿಲ್ಲ. ಹೀಗಾಗಿ, ಕುಡಿಯುವ ನೀರಿಗೂ ಭಕ್ತರು ಕಷ್ಟಪಡುತ್ತಿದ್ದರು.

ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ
ಕೋವಿಡ್‌ ಮೂರನೇ ಅಲೆಯ ಭೀತಿ ಎದುರಾಗಿರುವುದರಿಂದ ಅದ್ದೂರಿ ಉತ್ಸವಗಳಿಗೆ ಸರ್ಕಾರ ಅನುಮತಿ ನೀಡುತ್ತಿಲ್ಲ. ಜಾತ್ರೆ, ಧಾರ್ಮಿಕ ಉತ್ಸವಗಳಿಗೆ ನಿರ್ಬಂಧ ವಿಧಿಸಿದೆ. ಇದೇ ನಿರ್ಬಂಧಗಳು ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಪಾಲನೆಯಾಗಲಿಲ್ಲ.

ಕಡಿಮೆ ಸಂಖ್ಯೆಯಲ್ಲಿ ಜನರು ಸೇರುವಂತೆ ಜಿಲ್ಲಾಡಳಿತ ಮನವಿ ಮಾಡಿತ್ತು. ಇದನ್ನು ಲೆಕ್ಕಿಸದೇ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬಹುತೇಕರು ಮಾಸ್ಕ್‌ ಧರಿಸಿದ್ದು ಕಂಡುಬರಲಿಲ್ಲ. ದೈಹಿಕ ಅಂತರ ಸಂಪೂರ್ಣ ಕಾಣೆಯಾಗಿತ್ತು. ಎರಡು ಗಂಟೆಯಲ್ಲಿ ಮುಗಿಯಬೇಕಾಗಿದ್ದ ಮೆರವಣಿಗೆ ಸುಮಾರು ಎಂಟು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡಿತು.

ಪೊಲೀಸ್‌ ಬಿಗಿ ಭದ್ರತೆ
ಅದ್ದೂರಿ ಮೆರವಣಿಗೆಗೆ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರು. ಸಾವಿರಕ್ಕೂ ಅಧಿಕ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಹೆಚ್ಚಿನ ನಿಗಾ ಇಡಲಾಗಿತ್ತು. 60 ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಚಲನವಲನವನ್ನು ಗಮನಿಸಲಾಗುತ್ತಿತ್ತು.

ಮಾರ್ಗದ 28 ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪ್ರವೇಶ ನಿರ್ಬಂಧಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆ ಹಾಗೂ ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿತ್ತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ ಹಾಗೂ ಡಿವೈಎಸ್‌ಪಿ ಪಾಂಡುರಂಗ ಅವರು ಮಾರ್ಗದಲ್ಲಿ ಸಂಚರಿಸಿ ಭದ್ರತೆ ಪರಿಶೀಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು