ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯ ಪತ್ರಿಕೆ ಓದುವುದರಿಂದ ಜ್ಞಾನ ವೃದ್ಧಿ

ತರಳಬಾಳು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ.ರಂಗನಾಥ್‌
Last Updated 17 ಸೆಪ್ಟೆಂಬರ್ 2022, 4:40 IST
ಅಕ್ಷರ ಗಾತ್ರ

ಸಿರಿಗೆರೆ (ಚಿತ್ರದುರ್ಗ): ಪತ್ರಿಕೆಗಳನ್ನು ಓದುವುದರಿಂದ ಜ್ಞಾನಮಟ್ಟ ಹೆಚ್ಚುತ್ತದೆ. ನಿತ್ಯ ಪತ್ರಿಕೆ ಓದುವ ಅಭ್ಯಾಸವನ್ನು ಚಿಕ್ಕಂದಿನಲ್ಲೇ ರೂಢಿಸಿಕೊಳ್ಳಿ ಎಂದು ತರಳಬಾಳು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ.ಎಸ್‌.ಬಿ.ರಂಗನಾಥ್‌ ಸಲಹೆ ನೀಡಿದರು.

ಸಿರಿಗೆರೆಯ ತರಬಾಳು ಶಿಕ್ಷಣ ಸಂಸ್ಥೆಯಲ್ಲಿ ಜಾನ್‌ಮೈನ್ಸ್‌, ‘ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಪತ್ರಿಕಾ ವಿತರಣೆ ಹಾಗೂ ಓಜೋನ್‌ ದಿನಾಚರಣೆಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಜಾನ್‌ಮೈನ್ಸ್‌ ಮತ್ತು ಇಆರ್‌ಎಂ ಗ್ರೂಪ್‌ ಆಫ್‌ ಕಂಪೆನಿಸ್‌ ಮಾಲೀಕ ಆರ್‌.ಪ್ರವೀಣ್‌ ಚಂದ್ರ ಅವರು ವಿದ್ಯಾರ್ಥಿಗಳಿಗೆ ಪತ್ರಿಕೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

‘ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಕೇಂದ್ರೀಯ ಲೋಕಸೇವಾ ಆಯೋಗ ನಡೆಸುವ (ಯುಪಿಎಸ್‌ಸಿ) ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳವರೆಗೆ ಅನುಕೂಲವಾಗುವ ರೀತಿಯಲ್ಲಿ ‘ಪ್ರಜಾವಾಣಿ’ ಹೊರಬರುತ್ತಿದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಪ್ರಜಾವಾಣಿ’ ವಿದ್ಯಾರ್ಥಿವೇತನ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಾನ್‌ಮೈನ್ಸ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಎನ್‌.ರಣದೀವೆ, ‘ಅಂತರ್ಜಾಲದಲ್ಲಿ ಸಾಕಷ್ಟು ಮಾಹಿತಿ ಸಿಗುತ್ತಿದೆ. ಆದರೆ, ಅದನ್ನಷ್ಟೇ ಅವಲಂಬಿಸಲು ಸಾಧ್ಯವಿಲ್ಲ. ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಗೆ ವಿಶ್ವಾಸಾರ್ಹತೆ ಇರುತ್ತದೆ. ಅಂತರ್ಜಾಲದ ಮಾಹಿತಿಗೆ ಈ ವಿಶ್ವಾಸಾರ್ಹತೆ ಇರುವುದಿಲ್ಲ. ಹೀಗಾಗಿ, ಪತ್ರಿಕೆ ಓದುವುದನ್ನು ರೂಢಿಸಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.

‘ಪಠ್ಯ ಪುಸ್ತಕಗಳಿಗೆ ಸೀಮಿತವಾದರೆ ಯಶಸ್ಸು ಕಾಣುವುದು ಕಷ್ಟ. ಸಾಧನೆಯ ಕನಸು ಕಾಣುವ ವಿದ್ಯಾರ್ಥಿಗಳು ಪಠ್ಯದ ಹೊರತಾದ ಜ್ಞಾನವನ್ನು ಸಂಪಾದಿಸಬೇಕು. ಪತ್ರಿಕೆ ಓದುವುದರಿಂದ ಜ್ಞಾನಮಟ್ಟ ವೃದ್ಧಿಸುತ್ತದೆ. ಸಾಮಾನ್ಯ ಜ್ಞಾನ ಬೆಳೆಯುತ್ತದೆ’ ಎಂದು ‘ಪ್ರಜಾವಾಣಿ’ ದಾವಣಗೆರೆ ಬ್ಯುರೊ ಮುಖ್ಯಸ್ಥ ಸಿದ್ದಯ್ಯ ಹಿರೇಮಠ ವಿವರಿಸಿದರು.

‘ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅನುಕೂಲವಾಗುವ ರೀತಿಯಲ್ಲಿ ಪತ್ರಿಕೆಯಲ್ಲಿ ಅಂಕಣ ಪ್ರಕಟಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಸಾಕಷ್ಟು ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಕಂಡ ಬಹುತೇಕರು ‘ಪ್ರಜಾವಾಣಿ’ಯ ಓದುಗರು’ ಎಂದು ಹೇಳಿದರು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ದಾವಣಗೆರೆ ಬ್ಯುರೊ ಪ್ರಸರಣ ವಿಭಾಗದ ವ್ಯವಸ್ಥಾಪಕ ಎಸ್‌.ಪ್ರಕಾಶ್‌, ಜಿಲ್ಲಾ ವ್ಯವಸ್ಥಾಪಕ ನಂದಗೋಪಾಲ್‌, ಜಾನ್‌ ಮೈನ್ಸ್‌ ಉಪಪ್ರಧಾನ ವ್ಯವಸ್ಥಾಪಕ ಅಜಿತ್‌ಕುಮಾರ್‌ ಬಿ.ಮಾಲಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ರಾಜೇಶ್,‘ಪ್ರಜಾವಾಣಿ’ ಚಿತ್ರದುರ್ಗ ಜಿಲ್ಲಾ ವರದಿಗಾರ ಜಿ.ಬಿ. ನಾಗರಾಜ್‌ ಇದ್ದರು. ಸಿರಿಗೆರೆ ತರಳಬಾಳು ಜಗದ್ಗುರು ಪ್ರೌಢಶಾಲೆ ಶಿಕ್ಷಕ ಬಿ.ಎಸ್. ಪ್ರಸನ್ನಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಡಿ.ಎಸ್. ಪಾಟೀಲ್ ಅವರು ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು.

‘ಪರಿಸರಸ್ನೇಹಿ ಜೀವನಶೈಲಿ ಅಗತ್ಯ’

ಮನುಷ್ಯನ ದುರಾಸೆಯಿಂದ ಪರಿಸರ ಸಂಪೂರ್ಣ ನಾಶವಾಗುತ್ತಿದೆ. ಸಂಪನ್ಮೂಲಗಳ ಅತಿಯಾದ ಬಳಕೆಯಿಂದ ಪರಿಸರಕ್ಕೆ ಧಕ್ಕೆ ಉಂಟಾಗುತ್ತಿದೆ. ಪರಿಸರಸ್ನೇಹಿ ಜೀವನ ಶೈಲಿ ರೂಢಿಸಿಕೊಂಡರೆ ಮಾತ್ರ ಜೀವಸಂಕುಲ ಉಳಿಯಲು ಸಾಧ್ಯವಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಇ. ಪ್ರಕಾಶ್‌ ಅಭಿಪ್ರಾಯಪಟ್ಟರು.

‘ಓಜೋನ್‌ ಪದರ ಭೂಮಿಗೆ ಛತ್ರಿಯಂತೆ ಇದೆ. ಇದರಿಂದ ಜೀವಸಂಕುಲಕ್ಕೆ ರಕ್ಷಣೆ ಸಿಗುತ್ತಿದೆ. ವಾಯುಮಾಲಿನ್ಯ ಹೆಚ್ಚಾದಂತೆ ಪದರ ತೆಳುವಾಗುತ್ತದೆ. ಸೂರ್ಯನ ಕಿರಣಗಳು ನೇರವಾಗಿ ಭೂಮಿಗೆ ತಲುಪಿ ಮಾನವ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ’ ಎಂದು ಎಚ್ಚರಿಕೆ ನೀಡಿದರು.

***

ಪತ್ರಿಕೆ ಓದುವುದರಿಂದ ಜಗತ್ತಿನ ವಿದ್ಯಮಾನ ತಿಳಿಯುತ್ತದೆ. ಬೌದ್ಧಿಕ ಮಟ್ಟ ಹೆಚ್ಚಾಗುತ್ತದೆ. ಅನೇಕರ ಜೀವನದಲ್ಲಿ ಪತ್ರಿಕೆ ಹಾಸುಹೊಕ್ಕಾಗಿದೆ.
ಎಂ.ಎನ್‌. ಶಾಂತಾ, ಮುಖ್ಯಶಿಕ್ಷಕಿ, ತರಳಬಾಳು ಪ್ರೌಢ ಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT