ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರ ಸಂಬಂಧಿಕರಿಗೆ ಬಾಗಿಲು ಬಂದ್‌

ಜಿಲ್ಲಾ ಆಸ್ಪತ್ರೆಗೆ ಉಸ್ತುವಾರಿ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಭೇಟಿ
Last Updated 17 ಮೇ 2021, 15:54 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕಿತರ ಆರೈಕೆಗೆ ಜಿಲ್ಲಾ ಆಸ್ಪತ್ರೆಯ ವಾರ್ಡ್‌ಗೆ ನುಗ್ಗಿದ್ದವರನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಹೊರಗೆ ಕಳುಹಿಸಿದರು. ಸಿಬ್ಬಂದಿ ಹೊರತು ಯಾರೊಬ್ಬರೂ ವಾರ್ಡ್‌ ಪ್ರವೇಶಿಸದಂತೆ ತಾಕೀತು ಮಾಡಿದರು.

ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ದೂರುಗಳು ಕೇಳಿಬಂದಿದ್ದರಿಂದ ಸೋಮವಾರ ಅವರು ಭೇಟಿ ನೀಡಿ ಪರಿಶೀಲಿಸಿದರು. ಪಿಪಿಇ ಕಿಟ್‌ ಧರಿಸಿ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಅವರೊಂದಿಗೆ ಬೆಳಿಗ್ಗೆ 8ಕ್ಕೆ ವಾರ್ಡ್‌ ಪ್ರವೇಶಿಸಿದರು. ಕೋವಿಡ್‌ ರೋಗಿಗಳನ್ನು ಮಾತನಾಡಿಸಿ ಅಹವಾಲು ಆಲಿಸಿದರು. ಸ್ವಚ್ಛತೆ, ಶೌಚಾಲಯ ನಿರ್ವಹಣೆಯನ್ನು ಪರಿಶೀಲಿಸಿದರು.

ಈ ವೇಳೆ ವಾರ್ಡ್‌ಗಳಲ್ಲಿ ಕೋವಿಡ್ ರೋಗಿಗಳೊಂದಿಗೆ ಸಂಬಂಧಿಕರೂ ಇದ್ದರು. ಸೋಂಕಿತರ ಆರೈಕೆ ಮಾಡುತ್ತಿರುವದನ್ನು ಗಮನಿಸಿದ ಕಾರ್ಯದರ್ಶಿ, ಅಧಿಕಾರಿಗಳ ವಿರುದ್ದ ಕಿಡಿಕಾರಿದರು. ಸೋಂಕಿತರೊಬ್ಬರಿಗೆ ಇಡ್ಲಿ ತಿನಿಸುತ್ತಿದ್ದ ವ್ಯಕ್ತಿಗೆ ಹೊರ ಹೋಗುವಂತೆ ತಾಕೀತು ಮಾಡಿದರು. ಕೋವಿಡ್‌ ರೋಗಿಗಳೊಂದಿಗೆ ಸಂಬಂಧಿಕರಿಗೆ ಪ್ರವೇಶ ನೀಡದಂತೆ ಸೂಚಿಸಿದರು.

‘ಕೋವಿಡ್‌ ರೋಗಿಗಳ ಆರೈಕೆಯ ಜವಾಬ್ದಾರಿ ಸರ್ಕಾರದ್ದು. ಊಟ, ವಸತಿ, ಔಷಧ ಸಹಿತ ಚಿಕಿತ್ಸೆ ನೀಡಲಾಗುತ್ತಿದೆ. ಶೀಘ್ರವಾಗಿ ಗುಣಪಡಿಸುವ ಜವಾಬ್ದಾರಿಯನ್ನು ಸರ್ಕಾರ ಹೊತ್ತಿದೆ. ಸೋಂಕಿತರ ಆರೈಕೆಗೆ ಸಂಬಂಧಿಕರು ಬರುವುದು ತೀರಾ ಅಪಾಯಕಾರಿ. ಇದರಿಂದ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ. ಕೋವಿಡ್‌ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ನಗರದ ಬಿವಿಕೆಎಸ್‌ ಬಡಾವಣೆಯಲ್ಲಿರುವ ಕೋವಿಡ್ ಆರೈಕೆ ಕೇಂದ್ರ, ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಗೂ ಭೇಟಿ ನೀಡಿದರು. ಸೋಂಕಿತರ ಆರೋಗ್ಯ ವಿಚಾರಿಸಿ, ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದರು. ಮುಕ್ತಿಧಾಮಕ್ಕೆ ತೆರಳಿ ರೋಗಿಗಳ ಅಂತ್ಯಕ್ರಿಯೆಗೆ ಮಾಡಿಕೊಂಡ ಸಿದ್ಧತೆ ಗಮನಿಸಿದರು. ಅಂತ್ಯಕ್ರಿಯೆಗೆ ಯಾವುದೇ ಹಣ ಪಡೆಯಬಾರದು ಎಂದು ಸೂಚನೆ ನೀಡಿದರು.

ಆಸ್ಪತ್ರೆಗೆ ಪೊಲೀಸ್‌ ಭದ್ರತೆ:ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪರಿಶೀಲನೆ ಸಭೆ ನಡೆಸಿದ ಮಂಜುನಾಥ್‌ ಪ್ರಸಾದ್‌. ‘ಜಿಲ್ಲಾ ಆಸ್ಪತ್ರೆಯ ಕೋವಿಡ್‌ ವಾರ್ಡ್‌ಗಳಿಗೆ ರೋಗಿಗಳ ಸಂಬಂಧಿಕರಿಗೆ ಪ್ರವೇಶ ಕಲ್ಪಿಸಿದ್ದು ಸರಿಯಲ್ಲ. ರೋಗಿಗಳ ಹಾಸಿಗೆಯ ಪಕ್ಕದಲ್ಲೇ ಕುಳಿತುಕೊಳ್ಳುವ ಅವರು ಮನೆಗಳಿಗೆ ಹೋಗುವಾಗ ಸೋಂಕು ಹರಡುತ್ತದೆ. ಯಾವುದೇ ಕಾರಣಕ್ಕೂ ಇಂತಹ ತಪ್ಪು ಮುಂದೆ ಆಗಬಾರದು’ ಎಂದು ಎಚ್ಚರಿಕೆ ನೀಡಿದರು.

‘ಜಿಲ್ಲಾ ಆಸ್ಪತ್ರೆಯ ವಾರ್ಡ್‌ಗಳಿಗೆ ಅಪರಿಚಿತರು ನುಗ್ಗದಂತೆ ತಡೆಯಲು ಪೊಲೀಸರನ್ನು ನಿಯೋಜಿಸಿ. ರೋಗಿ, ಆಸ್ಪತ್ರೆ ಸಿಬ್ಬಂದಿ ಹೊರತು ಯಾರೊಬ್ಬರಿಗೂ ಪ್ರವೇಶ ಕಲ್ಪಿಸಬಾರದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರಿಗೆ ಸೂಚಿಸಿದರು.

ಹೆಚ್ಚುವರಿ ಹಾಸಿಗೆ:‘ಕೋವಿಡ್ ಎರಡನೇ ಅಲೆ ಹೆಚ್ಚಾಗುತ್ತಿದ್ದು, ಈಗಿರುವ ಹಾಸಿಗೆಗಳು ಭರ್ತಿಯಾಗುತ್ತಿವೆ. ಸೋಂಕು ಹೆಚ್ಚಾದಲ್ಲಿ ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಹೆಚ್ಚುವರಿ ಹಾಸಿಗೆಗಳನ್ನು ನಿರ್ಮಾಣ ಮಾಡಿಟ್ಟುಕೊಂಡು ಆಮ್ಲಜನಕ ಹಾಗೂ ಇತರೆ ಸೌಕರ್ಯಗಳನ್ನು ಕಲ್ಪಿಸಿಟ್ಟುಕೊಳ್ಳಿ’ ಎಂದು ತಾಕೀತು ಮಾಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಂಗನಾಥ್ ಮಾತನಾಡಿ, ‘ಜಿಲ್ಲೆಯಲ್ಲಿ 600 ಜನ ಆಮ್ಲಜನಕ ಸಹಿತ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆ ಒಂದರಲ್ಲಿಯೇ 259 ರೋಗಿಗಳಿದ್ದಾರೆ. ಹತ್ತು ದಿನಗಳ ಸಿಟಿ ಸ್ಕ್ಯಾನ್‍ನಲ್ಲಿ 1,700 ಜನರಿಗೆ ಕೋವಿಡ್ ಇರುವುದು ಪತ್ತೆಯಾಗಿದೆ’ ಎಂದು ವಿವರಿಸಿದರು.

‘ಜಿಲ್ಲೆಗೆ 8.5 ಸಾವಿರ ಲೀಟರ್‌ ಆಮ್ಲಜನಕದ ಅಗತ್ಯವಿದೆ. 8.4 ಸಾವಿರ ಲೀಟರ್‌ ಪೂರೈಕೆಯಾಗುತ್ತಿದೆ. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಸೇರಿ 723 ಆಮ್ಲಜನಕ ಸಹಿತ ಹಾಸಿಗೆಗಳಿವೆ. ಇನ್ನೂ ಎರಡು ಸಾವಿರ ಲೀಟರ್‌ ಆಮ್ಲಜನಕ ಪೂರೈಕೆ ಮಾಡಿದರೆ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

ವೈದ್ಯರ ಅಮಾನತಿಗೆ ಸೂಚನೆ

ಕೋವಿಡ್‌ ವಾರ್ಡ್‌ನಲ್ಲಿ ಶವಗಳ ತೆರವು ಮಾಡುವಲ್ಲಿ ಉಂಟಾಗಿರುವ ವಿಳಂಬಕ್ಕೆ ವೈದ್ಯರನ್ನು ಗುರಿಪಡಿಸಲಾಗಿದೆ. ಅಂದು ಕರ್ತವ್ಯದಲ್ಲಿದ್ದ ವೈದ್ಯರು, ಶುಶ್ರೂಷಕಯರು ಹಾಗೂ ಆಸ್ಪತ್ರೆಯ ಇತರ ಸಿಬ್ಬಂದಿಯನ್ನು ಅಮಾನತು ಮಾಡಬೇಕು ಉಸ್ತುವಾರಿ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌ ಸೂಚಿಸಿದರು.

ಕೋವಿಡ್ ವಾರ್ಡ್‌ವೊಂದರಲ್ಲಿ ಮೂವರು ಸೋಂಕಿತರು ಮೃತಪಟ್ಟು ಅರ್ಧ ದಿನವಾದರೂ ಶವಗಳನ್ನು ತೆರವು ಮಾಡಿರಲಿಲ್ಲ. ಇದರಿಂದ ಇತರ ಸೋಂಕಿತರಿಗೆ ತೊಂದರೆ ಉಂಟಾಗಿತ್ತು. ಈ ಬಗ್ಗೆ ಸೋಂಕಿತರೊಬ್ಬರು ವಿಡಿಯೊ ಮಾಡಿ ಅಳಲು ತೋಡಿಕೊಂಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಶಾಸಕ, ಸಚಿವರು ಗೈರು

ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸೋಮವಾರ ಸಂಜೆ ನಡೆಸಿದ ವಿಡಿಯೊ ಕಾನ್ಫರೆನ್ಸ್‌ಗೆ ಜಿಲ್ಲೆಯ ಯಾವೊಬ್ಬ ಶಾಸಕ, ಸಚಿವರೂ ಹಾಜರಾಗಿರಲಿಲ್ಲ.

ರಾಜ್ಯದ ಎಲ್ಲ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಕಾನ್ಫರೆನ್ಸ್‌ನಲ್ಲಿ ಜನಪ್ರತಿನಿಧಿಗಳೂ ಪಾಲ್ಗೊಂಡಿದ್ದರು. ತುಮಕೂರಿನಿಂದ ಸಚಿವ ಮಾಧುಸ್ವಾಮಿ, ಚಿಕ್ಕಮಗಳೂರಿನಿಂದ ಶಾಸಕ ಸಿ.ಟಿ.ರವಿ ಭಾಗವಹಿಸಿದ್ದರು. ಇತರ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಶಾಸಕರು, ಸಚಿವರು ಧ್ವನಿಗೂಡಿಸಿದ್ದರು. ಕೋವಿಡ್‌ ಚಿಕಿತ್ಸೆಯಲ್ಲಿ ಆಗುತ್ತಿರುವ ಸಮಸ್ಯೆ, ಬೇಕಿರುವ ಸೌಲಭ್ಯಗಳ ಬಗ್ಗೆ ಮುಖ್ಯಮಂತ್ರಿಯ ಗಮನ ಸೆಳೆದರು. ಚಿತ್ರದುರ್ಗ ಜಿಲ್ಲೆಯ ಜನಪ್ರತಿನಿಧಿಗಳ ಗೈರು ಸಭೆಯಲ್ಲಿ ಎದ್ದು ಕಾಣುತ್ತಿತ್ತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಇದ್ದರು.

***

ಅನುದಾನಕ್ಕೆ ಯಾವುದೇ ಕೊರತೆ ಇಲ್ಲ. ಈಗಾಗಲೇ ₹ 20 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ. ಕೋವಿಡ್‌ ನಿಯಂತ್ರಣಕ್ಕೆ ಅಗತ್ಯ ಇರುವ ಎಲ್ಲ ಕ್ರಮಗಳನ್ನು ಕೈಗೊಳ್ಳಿ.

ಮಂಜುನಾಥ್‌ ಪ್ರಸಾದ್‌, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT