ಭಾನುವಾರ, ನವೆಂಬರ್ 27, 2022
27 °C
ಪಟ್ಟಣಕ್ಕೆ 2 ಬಾರಿ ರಾಷ್ಟ್ರಮಟ್ಟದ ಪುರಸ್ಕಾರ, ನವದೆಹಲಿಯಲ್ಲಿ ನಾಳೆ ಪ್ರಶಸ್ತಿ ಪ್ರದಾನ

ಹೊಳಲ್ಕೆರೆ ಪುರಸಭೆಗೆ ‘ಇಂಡಿಯನ್ ಸ್ವಚ್ಛತಾ ಲೀಗ್’ ಪ್ರಶಸ್ತಿ

ಸಾಂತೇನಹಳ್ಳಿ ಸಂದೇಶ್ ಗೌಡ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ಇಲ್ಲಿನ ಪುರಸಭೆ ಕೇಂದ್ರ ಸರ್ಕಾರದ ‘ಇಂಡಿಯನ್ ಸ್ವಚ್ಛತಾ ಲೀಗ್’ ಪ್ರಶಸ್ತಿಗೆ ಆಯ್ಕೆಯಾಗಿದೆ.

ಇಂಡಿಯನ್ ಸ್ವಚ್ಛತಾ ಲೀಗ್ ಪ್ರಶಸ್ತಿಗೆ ಆಯ್ಕೆಯಾದ ನಾಲ್ಕು ನಗರಗಳಲ್ಲಿ ( ಮಂಗಳೂರು, ಮೈಸೂರು, ಕಾರವಾರ) ಪಟ್ಟಣವೂ ಒಂದು. ಸೆ.30ರಂದು ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಹಮ್ಮಿಕೊಳ್ಳಲಾಗಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸ್ಮರಣಾರ್ಥವಾಗಿ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ‘ಇಂಡಿಯನ್ ಸ್ವಚ್ಛತಾ ಲೀಗ್’ ಕಾರ್ಯಕ್ರಮ ಹಮ್ಮಿಕೊಂಡಿತ್ತು.

‘ಹೊಳಲ್ಕೆರೆ ಸ್ವಚ್ಛತಾ ಸ್ಟಾರ್ಸ್’ ಎಂಬ ಶೀರ್ಷಿಕೆಯಡಿ ಸ್ವಚ್ಛತಾ ಲೀಗ್ ಹಮ್ಮಿಕೊಳ್ಳಲಾಗಿತ್ತು. ಯುವಶಕ್ತಿ, ನಾಗರಿಕರು, ಸಂಘ, ಸಂಸ್ಥೆಗಳನ್ನು ಸ್ವಚ್ಛತೆಗೆ ಪ್ರೇರೇಪಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.

‘ಈ ಕಾರ್ಯಕ್ರಮಕ್ಕೆ ರಾಷ್ಟ್ರವ್ಯಾಪಿಯಾಗಿ ಎಲ್ಲಾ ನಗರಗಳೂ ಸ್ವಯಂ ಪ್ರೇರಣೆಯಿಂದ ಸ್ಪರ್ಧಾತ್ಮಕವಾಗಿ ಭಾಗವಹಿಸಿದ್ದವು. ಮುಖ್ಯ ಪ್ರವಾಸಿ ತಾಣಗಳು, ಬೀಚ್, ಗುಡ್ಡಗಾಡು ಪ್ರದೇಶಗಳಲ್ಲಿ ಅಭಿಯಾನವನ್ನು ನಡೆಸಲು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸೂಚನೆ ನೀಡಿತ್ತು. ಹೊಳಲ್ಕೆರೆ ಪುರಸಭೆ ಕೈಗೊಂಡ ಅಭಿಯಾನವನ್ನು ಗುರುತಿಸಿ ಕೇಂದ್ರ ಸರ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಎ.ವಾಸಿಂ ತಿಳಿಸಿದರು.

‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮದಿನದಂದು ಪಟ್ಟಣದ ಪ್ರಸನ್ನ ಗಣಪತಿ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಶ್ರಮದಾನ, ಸ್ವಚ್ಛತಾ ಜಾಥಾ ನಡೆಸಲಾಯಿತು. ಒಂಟಿ ಕಂಬದ ಮಠದಲ್ಲಿ ಪೌರ ಕಾರ್ಮಿಕರಿಂದ ಬೀದಿ ನಾಟಕ ಪ್ರದರ್ಶನ ನೀಡಲಾಯಿತು’ ಎಂದರು.

‘ಸ್ವಚ್ಛತೆಯಲ್ಲಿ ಪಟ್ಟಣದ ಹೆಸರು ರಾಷ್ಟ್ರಮಟ್ಟದಲ್ಲಿ ರಾರಾಜಿಸುವಂತೆ ಆಗಿದೆ. ಮುಂದೆಯೂ ಎಲ್ಲರೂ ಇದೇ ಉತ್ಸಾಹದಲ್ಲಿ ಕೆಲಸ ಮಾಡಬೇಕು’ ಎಂದು ಪುರಸಭೆ ಉಪಾಧ್ಯಕ್ಷ ಕೆ.ಸಿ. ರಮೇಶ್ ತಿಳಿಸಿದರು.

 ಸ್ವಚ್ಛತೆ ಕಾಪಾಡುವುದು ಕೇವಲ ಪೌರಕಾರ್ಮಿಕರ ಜವಾಬ್ದಾರಿಯಲ್ಲ. ಅದು ಪ್ರತಿಯೊಬ್ಬ ನಾಗರಿಕನ ಹೊಣೆ ಎಂದು ಪುರಸಭೆ ಅಧ್ಯಕ್ಷ ಆರ್.ಎ. ಅಶೋಕ್ ಹೇಳಿದರು.

ಪಟ್ಟಣಕ್ಕೆ 2020 ರಲ್ಲಿಯೂ ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿ ಲಭಿಸಿತ್ತು. ಈ ಬಾರಿ ಈ ಇಂಡಿಯನ್ ಸ್ವಚ್ಛತಾ ಲೀಗ್ ಪ್ರಶಸ್ತಿ ಲಭಿಸಿರುವುದರಿಂದ ಕೆಲಸ ಮಾಡಲು ಮತ್ತಷ್ಟು ಪ್ರೇರಣೆ ಸಿಕ್ಕಿದೆ.

–ಎ.ವಾಸಿಂ, ಪುರಸಭೆ ಮುಖ್ಯಾಧಿಕಾರಿ

ಸೆ.17ರಂದು ಪುರಸಭೆ ಏರ್ಪಡಿಸಿದ್ದ ಸ್ವಚ್ಛತಾ ಲೀಗ್ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೆ. ಪುರಸಭೆಗೆ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ.

–ಎಂ.ಚಂದ್ರಪ್ಪ, ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು