ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ಬಂಡೆ ಸಂತೆಗೆ ಬೇಕು ಮೂಲ ಸೌಕರ್ಯ

Published 1 ಜನವರಿ 2024, 7:26 IST
Last Updated 1 ಜನವರಿ 2024, 7:26 IST
ಅಕ್ಷರ ಗಾತ್ರ

ಹೊಸದುರ್ಗ: ಸೊಪ್ಪು, ತರಕಾರಿ ಮತ್ತು ಹೂ ಮಾರಾಟದ ಪ್ರಮುಖ ಕೇಂದ್ರವಾಗಿರುವ ಪಟ್ಟಣದ ಬಂಡೆಸಂತೆಯು ಮೂಲ ಸೌಕರ್ಯಗಳಿಂದ ವಂಚಿತವಾಗಿ ಹಲವು ವರ್ಷಗಳೇ ಕಳೆದಿವೆ. ತಾವು ಬೆಳೆದ ತರಕಾರಿಗಳನ್ನು ನಿತ್ಯವೂ ಹೊತ್ತು ತರುವ ರೈತರಿಗೆ ಇಲ್ಲಿ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲು ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. 

ಹಿರಿಯೂರು, ಹೊಳಲ್ಕೆರೆ, ಅಜ್ಜಂಪುರ, ಹುಳಿಯಾರು ಸೇರಿದಂತೆ ತಾಲ್ಲೂಕಿನ ವಿವಿಧೆಡೆಯ ರೈತರು ತರಕಾರಿ, ಹೂವು ಮತ್ತು ಸೊಪ್ಪು ಮಾರಾಟಕ್ಕೆ ಈಶ್ವರ ದೇವಾಲಯದ ಬಳಿ ಇರುವ ಬಂಡೆಸಂತೆ ಆಸರೆ. ಈ ಸ್ಥಳದಲ್ಲಿ ಮಧ್ಯರಾತ್ರಿ 1ರಿಂದ ಬೆಳಿಗ್ಗೆ 6.30ರವರೆಗೆ ಸಗಟು ವ್ಯಾಪಾರ ವಹಿವಾಟು ನಡೆಯುತ್ತದೆ. ದಿನವೂ 500ರಿಂದ 1000 ಜನರು ಇಲ್ಲಿ ಸೇರುತ್ತಾರೆ. ತರಕಾರಿ ಮಾರುವವರು ಹಾಗೂ ಕೊಳ್ಳುವವರ ಸಂಖ್ಯೆ ಸೋಮವಾರ ಹಾಗೂ ಬುಧವಾರ ತುಸು ಹೆಚ್ಚೇ ಇರುತ್ತದೆ.

ವಾಹನ ನಿಲ್ದಾಣ ಇಲ್ಲ: ಮಾರುಕಟ್ಟೆಗೆ ಬರುವವರು ತರುವ ವಾಹನಗಳನ್ನು ನಿಲ್ಲಿಸಲು ಇಲ್ಲಿ ಸೂಕ್ತ ನಿಲ್ದಾಣ ಇಲ್ಲ. ಮಾರಾಟದ ವಸ್ತುಗಳನ್ನು ತಂದ ವಾಹನಗಳನ್ನು, ಈಶ್ವರ ದೇವಾಲಯ ಅಥವಾ ಬನಶಂಕರಿ ದೇವಾಲಯದ ಬಳಿ ನಿಲ್ಲಿಸಲಾಗುತ್ತದೆ. ಅಲ್ಲಿಂದ ತಲೆ ಮೇಲೆ ಹೊತ್ತು ಬಂಡೆ ಸಂತೆಗೆ ತರಬೇಕು. ಸಂತೆಯ ಜಾಗವನ್ನು ಸ್ವಲ್ಪ ವಿಸ್ತರಿಸಿ ವಾಹನಗಳು ಒಳಹೋಗಲು ಅನುವು ಮಾಡಿಕೊಡಬೇಕು ಎಂಬುದು ರೈತರ ಆಗ್ರಹ.

ಶೌಚಾಲಯ ಇಲ್ಲ: ನಿತ್ಯ ನೂರಾರು ಜನರು ಓಡಾಡುವ ಈ ಸ್ಥಳದಲ್ಲಿ ಒಂದು ಸುಸಜ್ಜಿತ ಸಾರ್ವಜನಿಕ ಶೌಚಾಲಯವಿಲ್ಲ. ತಡೆಗೋಡೆ ಇಲ್ಲದ ಒಂದು ಬಯಲು ಶೌಚಾಲಯವಿದ್ದು, ಪುರುಷರು ಬಳಸುತ್ತಿದ್ದಾರೆ. ಆದರೆ, ಮಹಿಳಾ ಮಾರಾಟಗಾರರಿಗೆ, ಖರೀದಿದಾರರಿಗೆ ಶೌಚಕ್ಕೆ ಜಾಗವೇ ಇಲ್ಲ. ಶೌಚಾಲಯದ ಪಕ್ಕದಲ್ಲೇ ಆಟೋ ನಿಲ್ದಾಣವಿದ್ದು, ಈ ಜಾಗದಲ್ಲಿ ಓಡಾಡುವ ಜನರಿಗೆ ಕಿರಿಕಿರಿ ಉಂಟಾಗುತ್ತಿದೆ. ದಿನವೂ ಸುಮಾರು 6 ಗಂಟೆ ಕಾಲ ವಹಿವಾಟು ನಡೆಯುವ ಈ ಸ್ಥಳದಲ್ಲಿ ಸೂಕ್ತ ಶೌಚ ವ್ಯವಸ್ಥೆ ಇಲ್ಲದ್ದಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. 

ಮೂಲಸೌಕರ್ಯ ಇಲ್ಲ: ಸಂತೆಯು ನಸುಕಿನ ಸಮಯದಲ್ಲಿ ನಡೆಯುವುದರಿಂದ ಹೆಚ್ಚು ವಿದ್ಯುತ್‌ ದೀಪಗಳ ಅವಶ್ಯಕತೆಯಿದೆ. ಇರುವ ಬೆರಳೆಣಿಕೆಯಷ್ಟು ವಿದ್ಯುತ್‌ ದೀಪಗಳು ಮಂದ ಬೆಳಕು ನೀಡುತ್ತಿವೆ. ರೈತರು ಹಾಗೂ ವ್ಯಾಪಾರಿಗಳು ಮೊಬೈಲ್‌ ಬ್ಯಾಟರಿ ಹಿಡಿದು ವ್ಯವಹಾರ ನಡೆಸುವಂತಹ ಸ್ಥಿತಿ ಇಲ್ಲಿದೆ. ಸಂತೆಯಲ್ಲಿ ಓಡಾಡಲೂ ಅಡಚಣೆ ಆಗುತ್ತದೆ. ಮೊದಲು ಬಂದವರು ಸ್ಥಳ ಆಯ್ಕೆ ಮಾಡಿಕೊಂಡು ಕೂರುತ್ತಾರೆ. ಸ್ಥಳಾವಕಾಶದ ಕೊರತೆಯಿಂದ, ಕೆಲ ವ್ಯಾಪಾರಿಗಳು ರಸ್ತೆಯ ಬದಿಯಲ್ಲೇ ಕುಳಿತುಬಿಡುತ್ತಾರೆ. ಇದರಿಂದ ಜನರು ಹಾಗೂ ವಾಹನಗಳ ಓಡಾಟಕ್ಕೂ ಅಡಚಣೆಯುಂಟಾಗುತ್ತಿದೆ. 

ಹೊಸದುರ್ಗದ ಬಂಡೆ ಸಂತೆ ಪ್ರದೇಶದಲ್ಲಿ ಮಳೆ ಬಂದಾಗಿನ ಸ್ಥಿತಿ (ಸಂಗ್ರಹ ಚಿತ್ರ)
ಹೊಸದುರ್ಗದ ಬಂಡೆ ಸಂತೆ ಪ್ರದೇಶದಲ್ಲಿ ಮಳೆ ಬಂದಾಗಿನ ಸ್ಥಿತಿ (ಸಂಗ್ರಹ ಚಿತ್ರ)
ರೈತರು ಚೀಲದ ಲೆಕ್ಕದಲ್ಲಿ ಜಕಾತಿ ಕೊಡಬೇಕು. ಹಣ ವಸೂಲಿ ಮಾಡಿದವರು ಸೂಕ್ತ ಶೌಚಾಲಯವನ್ನೂ ಕಟ್ಟಿಸಿಲ್ಲ. ಮಹಿಳೆಯರಿಗಂತೂ ಬಹಳ ಸಮಸ್ಯೆಯಾಗಿದೆ. ಕುಡಿಯಲು ನೀರಿನ ವ್ಯವಸ್ಥೆಯಿಲ್ಲ. ಪಕ್ಕದ ಹೋಟೆಲ್‌ಗಳಿಗೆ ಹೋಗಿ ನೀರು ಕುಡಿಯುವ ಸ್ಥಿತಿ ಇದೆ. ನಾವು ನೀಡುವ ಜಕಾತಿ ಹಣದಿಂದಲೇ ಮೂಲಸೌಕರ್ಯ ಕಲ್ಪಿಸಬಹುದು
ಮಂಜಮ್ಮ ತರಕಾರಿ ವ್ಯಾಪಾರಿ
ಬಂಡೆಸಂತೆ ನಡೆಯುವ ಸ್ಥಳದಲ್ಲಿ ಶೌಚಾಲಯ ನಿರ್ಮಾಣಕ್ಕೆ ₹ 8 ಲಕ್ಷ ಹಣ ಮೀಸಲಿಡಲಾಗಿದೆ. ಸ್ವಲ್ಪ ಅಡಚಣೆಯಾಗಿದ್ದರಿಂದ ನಿರ್ಮಾಣ ಕಾರ್ಯ ನಿಂತಿದೆ. ಎಲ್ಲರ ಸಲಹೆ ಪಡೆದು ಈ ಬಾರಿಯ ಬಜೆಟ್‌ನಲ್ಲಿ ಅಭಿವೃದ್ಧಿ ಯೋಜನೆ ರೂಪಿಸಲಾಗುವುದು
ತಿಮ್ಮರಾಜು ಪುರಸಭೆ ಮುಖ್ಯಾಧಿಕಾರಿ
‘ಮಳೆ ಬಂದರೆ ನಿಲ್ಲಲು ಜಾಗವಿಲ್ಲ’
‘ಎರಡು ದಿನಕ್ಕೊಮ್ಮೆ ಸಂತೆಗೆ ಬರುತ್ತೇನೆ. ಇಲ್ಲಿ ವಿಶ್ರಾಂತಿ ಪಡೆಯಲು ಅಥವಾ ಸ್ವಲ್ಪ ಹೊತ್ತು ಕುಳಿತುಕೊಳ್ಳಲು ಸೂಕ್ತ ಸ್ಥಳಾವಕಾಶವಿಲ್ಲ. ಮಳೆ ಬಂತೆಂದರೆ ಸಂತೆಯಲ್ಲಿರುವವರ ಪರಿಸ್ಥಿತಿ ಹೇಳತೀರದು. ತರಕಾರಿಯನ್ನು ಒಂದೆಡೆ ಇರಿಸಲು ಸ್ಥಳವಿಲ್ಲ. ಕೆಲವೊಮ್ಮೆ ನಿಲ್ಲಲೂ ಜಾಗವಿರುವುದಿಲ್ಲ. ಹೀಗಾಗಿ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತದೆ. ಸುರಕ್ಷಿತವಾಗಿ ಮನೆಗೆ ಬಂದರೆ ಸಾಕು ಎಂದು ಸಿಕ್ಕ ದರಕ್ಕೆ ವಸ್ತುಗಳನ್ನು ಮಾರಾಟ ಮಾಡಿ ಮರಳುತ್ತೇನೆ. ಈ ಸ್ಥಳದಲ್ಲಿ ಬೃಹತ್‌ ಶೆಡ್‌ ನಿರ್ಮಿಸಿದರೆ ಅನುಕೂಲವಾಗುತ್ತದೆ’ ಎಂದು  ರೈತ ಹನುಮಂತಪ್ಪ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT