ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ: ಷಡಕ್ಷರಮುನಿ ಸ್ವಾಮೀಜಿ

ಷಡಕ್ಷರಮುನಿ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ
Last Updated 21 ಮೇ 2022, 4:15 IST
ಅಕ್ಷರ ಗಾತ್ರ

ಹಿರಿಯೂರು: ‘ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸುತ್ತೇವೆ. ರಕ್ತದಲ್ಲಿ ಬರೆದು ಕೊಡುತ್ತೇನೆ, ಅಧಿಕಾರ ತ್ಯಾಗ ಮಾಡುತ್ತೇನೆ’ ಎಂದ ಯಾರೊಬ್ಬರೂ ತಮ್ಮ ಮಾತು ಉಳಿಸಿಕೊಂಡಿಲ್ಲ’ ಎಂದು ಆದಿ ಜಾಂಬವ ಬೃಹನ್ಮಠದ ಷಡಕ್ಷರಮುನಿ ಸ್ವಾಮೀಜಿ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದರು.

‘ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿಯವರು ಧರಣಿ ನಡೆಸುತ್ತಿದ್ದರೂ
ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ಬೇಸರದ ಸಂಗತಿ. ಒಂದು ವಾರದಲ್ಲಿ ಸರ್ಕಾರ ಸ್ಪಂದಿಸದೇ ಹೋದಲ್ಲಿ ನಾಡಿನ ಎಲ್ಲ ಮಠಾಧೀಶರು ಬೀದಿಗಳಿದು ಹೋರಾಟ ನಡೆಸಬೇಕಾಗುತ್ತದೆ’ ಎಂದು ಸ್ವಾಮೀಜಿ ಎಚ್ಚರಿಸಿದರು.

‘ಸದನದಲ್ಲಿ ಸಮುದಾಯದ ಪರವಾಗಿ ಗಟ್ಟಿ ದನಿ ಎತ್ತುವವರನ್ನು ಆರಿಸಿಕೊಳ್ಳುವ ತುರ್ತು ಅಗತ್ಯದ ಕಾಲ ಸನ್ನಿಹಿತವಾಗಿದೆ’ ಎಂದರು.

ಮುಖಂಡ ಹರ್ತಿಕೋಟೆ ವೀರೇಂದ್ರ ಸಿಂಹ, ದಲಿತ ಹೋರಾಟಗಾರ ಟಿ. ಡಿ. ರಾಜಗಿರಿ, ವದ್ದೀಗೆರೆ ಕಾಂತರಾಜ್ ಮಾತನಾಡಿದರು.

ನಗರದ ರಂಜಿತಾ ಹೋಟೆಲ್ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ತಾಲ್ಲೂಕು ಕಚೇರಿ ತಲುಪಿದ ನಂತರ ಶಿರಸ್ತೇದಾರ್ ಸಣ್ಣಪ್ಪ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಡಿ.ಟಿ. ಶ್ರೀನಿವಾಸ್ ಭಾಗಿ–ವಿರೋಧ: ಪ್ರತಿಭಟನಾ ಮೆರವಣಿಗೆ ಗಾಂಧಿ ವೃತ್ತಕ್ಕೆ ಬಂದಾಗ ರಾಜ್ಯ ಪ್ರವರ್ಗ–1 ರ ಒಕ್ಕೂಟದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್ ಪಾಲ್ಗೊಂಡರು. ಕಾಂಗ್ರೆಸ್ ಬೆಂಬಲಿತ ಪ್ರತಿಭಟನಕಾರರು, ಕೆಲವು ದಲಿತ ಮುಖಂಡರು ಇದನ್ನು ವಿರೋಧಿಸಿದರು. ಶ್ರೀನಿವಾಸ್ ಪರ ಕೆಲವರು ಬೆಂಬಲಕ್ಕೆ ನಿಂತರು. ನಂತರ ಮುಖಂಡರು ಮನವಿ ಮಾಡಿದ್ದರ ಪರಿಣಾಮ ಗೊಂದಲ ತಣ್ಣಗಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗೇಂದ್ರನಾಯ್ಕ, ಭೂತಾ ಭೋವಿ, ಕೃಷ್ಣಮೂರ್ತಿ, ಜಯಶೀಲ ನಾಯ್ಕ, ಖಾದಿ ರಮೇಶ್, ಶಿವಪ್ಪ ನಾಯಕ, ಈ. ಮಂಜುನಾಥ್, ಜೀವೇಶ್, ಸಣ್ಣಪ್ಪ, ಮಟ್ಟಿ ಹನುಮಂತರಾಯಪ್ಪ, ಗೋಪಾಲ್, ತಿಮ್ಮರಾಜ್, ಡಿಶ್ ಮಂಜಣ್ಣ, ರಂಗಸ್ವಾಮಿ, ಜೋಗಪ್ಪ, ಮಂಜುಮಾಳಿಗೆ, ಎಂ.ಡಿ. ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT