ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಎಂ ಸಿದ್ದರಾಮಯ್ಯ ವಿರುದ್ಧ ಕುತಂತ್ರ: ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಆಕ್ರೋಶ

ಮುಖ್ಯಮಂತ್ರಿಗಳ ಬೆನ್ನಿಗೆ ನಿಂತ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಹೋರಾಟಕ್ಕೆ ನಿರ್ಧಾರ
Published 3 ಆಗಸ್ಟ್ 2024, 14:02 IST
Last Updated 3 ಆಗಸ್ಟ್ 2024, 14:02 IST
ಅಕ್ಷರ ಗಾತ್ರ

ಚಿತ್ರದುರ್ಗ: ಶೋಷಿತ ಸಮುದಾಯಗಳಿಗೆ ಶಕ್ತಿ ತುಂಬುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ, ಜೆಡಿಎಸ್‌ ಮುಖಂಡರು ಷಡ್ಯಂತ್ರ ರೂಪಿಸುತ್ತಿದ್ದಾರೆ. ವಿರೋಧ ಪಕ್ಷಗಳ ಕುತಂತ್ರ ರಾಜಕಾರಣದ ವಿರುದ್ಧ ಶೋಷಿತ ಸಮುದಾಯಗಳ ಮುಖಂಡರು ರಾಜ್ಯದಾದ್ಯಂತ ಹೋರಾಟ ನಡೆಸಲಿದ್ದಾರೆ ಎಂದು ಜಿಲ್ಲಾ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಮುಖಂಡರು ಘೋಷಿಸಿದರು.

ನಗರದ ಪ್ರವಾಸಿಮಂದಿರದಲ್ಲಿ ಶನಿವಾರ ಹೋರಾಟದ ಪೂರ್ವಭಾವಿ ಸಭೆ ನಡೆಸಿದ ಮುಖಂಡರು, ಶೋಷಿತ ಸಮುದಾಯಗಳು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ಜಾತಿಗಳ ಬಡವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲಲಿದ್ದಾರೆ ಎಂದರು.

ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2 ಬಾರಿ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ. ಕಳೆದ ಬಾರಿ 165 ಭರವಸೆಗಳನ್ನು ಈಡೇರಿಸಿದ್ದಾರೆ. ಈ ಬಾರಿ ಸಮಾಜದ ಎಲ್ಲಾ ವರ್ಗದ ಬಡವರಿಗೂ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದ್ದಾರೆ. ಅವರ ರಾಜಕೀಯ ಇತಿಹಾಸದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಇದನ್ನು ಸಹಿಸದ ವಿರೋಧಿಗಳು ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಮುಖ್ಯಮಂತ್ರಿಗೆ ಸಂಬಂಧಿಸಿಲ್ಲ. ನಿಯಮಾನುಸಾರ ಬಜೆಟ್‌ನಲ್ಲಿ ಮೀಸಲಿಟ್ಟ ಹಣವನ್ನು ಖಜಾನೆಯ ಮೂಲಕ ನಿಗಮಕ್ಕೆ ವರ್ಗಾವಣೆಗೊಂಡಿರುತ್ತದೆ. ನಂತರ ಅದರ ನಿರ್ವಹಣೆಯ ಜವಾಬ್ದಾರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ವ್ಯಾಪ್ತಿಯಲ್ಲಿರುತ್ತದೆ. ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸುತ್ತಿರುವುದನ್ನು ಯಾರೂ ಒಪ್ಪುವುದಿಲ್ಲ’ ಎಂದರು.

‘ಎರಡೂ ಪ್ರಕರಣಗಳಲ್ಲಿ ಈಗಾಗಲೇ ಪ್ರತ್ಯೇಕ ತನಿಖಾ ಸಂಸ್ಥೆ ರಚಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದ್ದಾರೆ. ಆದರೂ ವಿರೋಧ ಪಕ್ಷಗಳು ಷಡ್ಯಂತ್ರ ರೂಪಿಸಿ ಮುಖ್ಯಮಂತ್ರಿಗಳ ವಿರುದ್ಧ ತೇಜೋವಧೆಗೆ ಯತ್ನಿಸುತ್ತಿರುವುದು ಅಸಹ್ಯ ಮೂಡಿಸುತ್ತದೆ. ಅಲ್ಲದೇ ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಕೈಗೊಂಬೆ ಮಾಡಿಕೊಂಡು ಅವರಿಂದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯ’ ಎಂದರು.

‘ಯಾರೋ ಒಬ್ಬ ದಾರಿ ಹೋಕ ಕೊಟ್ಟ 200 ಪುಟಗಳ ದೂರನ್ನು ಪರಿಶೀಲಿಸದೇ ಕೇವಲ 6 ಗಂಟೆಯಲ್ಲಿ ನೋಟಿಸ್‌ ಜಾರಿ ಮಾಡಿರುವುದು ಖಂಡನೀಯ. ಜನರಿಂದ ಆಯ್ಕೆಯಾದ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ರಾಜ್ಯದ ಜನರು ಸಹಿಸುವುದಿಲ್ಲ’ ಎಂದು ಹೇಳಿದರು.

‘ಧ್ವನಿ ಇಲ್ಲದ ಸಮುದಾಯಗಳಿಗೆ ಧ್ವನಿ ನೀಡಿ ಸಮ ಸಮಾಜ ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ಬಸವಾದಿ ಶರಣರ ಹಾದಿಯಲ್ಲಿ ನಡೆಯುತ್ತಿರುವ ಅವರು ದೇಶಕ್ಕೆ ಮಾದರಿ ಆಡಳಿತ ನೀಡಿದ್ದಾರೆ. ವಿರೋಧ ಪಕ್ಷಗಳ ಷಡ್ಯಂತ್ರ, ರಾಜ್ಯಪಾಲರ ಏಕಪಕ್ಷೀಯ ನಡೆಯನ್ನು ನಾವು ಘೋರವಾಗಿ ಖಂಡಿಸುತ್ತೇವೆ. ಇಡೀ ರಾಜ್ಯದಲ್ಲಿ ಜನಾಂದೋಲನ ನಡೆಯಲಿದೆ’ ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡ ಡಿ. ದುರುಗೇಶಪ್ಪ ಎಚ್ಚರಿಸಿದರು.

ಕಾಂಗ್ರೆಸ್‌ ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಎನ್‌.ಡಿ.ಕುಮಾರ್‌, ‘ರಾಜ್ಯಪಾಲರು ತಮ್ಮ ಹುದ್ದೆಯ ಘನತೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. 200 ಪುಟಗಳ ವರದಿಯನ್ನು ಕೆಲವೇ ಗಂಟೆಯಲ್ಲಿ ಓದಲು ಸಾಧ್ಯವೇ? ಅವರು ಸೂಪರ್‌ ಗವರ್ನರ್‌ ರೀತಿಯಲ್ಲಿ ನಡೆದುಕೊಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

‘ಸಮಾಜದ ಎಲ್ಲಾ ಜಾತಿಯ ಬಡವರಿಗೆ ರಕ್ಷಣೆ ನೀಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯವರಿಗೆ ಯಾರೂ ತೊಂದರೆ ನೀಡಬಾರದು. ತೊಂದರೆ ನೀಡುವವರ ವಿರುದ್ಧ ತೀವ್ರ ಹೋರಾಟ ನಡೆಯಲಿದೆ. ರಾಜ್ಯಪಾಲರ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದು ಅಲ್ಪಸಂಖ್ಯಾತ ಮುಖಂಡ ಖಾನ್‌ಸಾಬ್ ಹೇಳಿದರು.

ಮುಖಂಡರಾದ ಎಚ್.ಮಂಜಪ್ಪ, ಪ್ರಕಾಶ್‌ಮೂರ್ತಿ, ರಮೇಶ್, ಟೀಪು ಖಾಸೀಂ ಅಲಿ, ಲಕ್ಷ್ಮಿಕಾಂತ್‌, ಶ್ರೀರಾಮ್, ಪಿ.ಕೆ.ಮೀನಾಕ್ಷಿ, ಮುನೀರಾ ಮಕದ್ದರ್, ರವಿಪೂಜಾರ್, ಎನ್.ಡಿ.ಕುಮಾರ್, ಯಾಸೀನ್, ಮೃತ್ಯುಂಜಯ, ಮಲ್ಲೇಶ್‌, ಜಾಕೀರ್, ಟಿ.ಶಫೀವುಲ್ಲಾ ಇದ್ದರು.

ವಿರೋಧಪಕ್ಷಗಳ ವಿರುದ್ಧ ಪ್ರತಿಭಟನೆ 5ಕ್ಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿರೋಧ ಪಕ್ಷಗಳು ತೇಜೋವಧೆ ನಡೆಸುತ್ತಿರುವುದನ್ನು ಖಂಡಿಸಿ ಚಿತ್ರದುರ್ಗದಲ್ಲಿ ಆ.5ರಂದು ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸದಸ್ಯರು ತಿಳಿಸಿದರು. ನೀಲಕಂಠೇಶ್ವರ ದೇವಸ್ಥಾನದ ಬಳಿ ಬೆಳಿಗ್ಗೆ 10.30ಕ್ಕೆ ಹೋರಾಟ ಆರಂಭವಾಗಿದೆ. ಜಿಲ್ಲೆಯ ಸಿದ್ಧರಾಮಯ್ಯ ಅಭಿಮಾನಿಗಳು ಶೋಷಿತ ಸಮುದಾಯಗಳ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಅಲ್ಪಸಂಖ್ಯಾತ ದಲಿತ ಹಿಂದುಳಿದ ಅಲೆಮಾರಿ ಅರೆಅಲೆಮಾರಿ ಬುಡಕಟ್ಟು ಸಮುದಾಯಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT