ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನಹಟ್ಟಿ: ಸಂಭ್ರಮ, ಸಡಗರದ ಸಣ್ಣ ಕಾರ್ತಿಕೋತ್ಸವ

ಗುರುತಿಪ್ಪೇರುದ್ರಸ್ವಾಮಿಗೆ ಕಾರ್ತಿಕೋತ್ಸವದ ಸಂಭ್ರಮ
Last Updated 26 ನವೆಂಬರ್ 2022, 4:04 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಇಲ್ಲಿನ ಗುರುತಿಪ್ಪೇರುದ್ರಸ್ವಾಮಿಯ ಸಣ್ಣ ಕಾರ್ತಿಕೋತ್ಸವ ಕಾರ್ಯಕ್ರಮವು ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಸಂಭ್ರಮ, ಸಡಗರದಿಂದ ನಡೆಯಿತು.

ಸಣ್ಣ ಕಾರ್ತಿಕೋತ್ಸವದ ನಿಮಿತ್ತ ಬಣ್ಣ ಬಣ್ಣದ ಬಾವುಟಗಳಿಂದ ರಥವನ್ನು ಸಿಂಗಾರ ಮಾಡಲಾಗಿತ್ತು. ಮಧ್ಯಾಹ್ನ 3 ಗಂಟೆಗೆ ಸಕಲ ಪೂಜಾ ವಿಧಿವಿಧಾನಗಳಿಂದ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಭಕ್ತರು ಸಂಭ್ರಮದಿಂದ ರಥವನ್ನು ಎಳೆಯುತ್ತ ಗುರುತಿಪ್ಪೇರುದ್ರಸ್ವಾಮಿಯವರ ನಾಮಸ್ಮರಣೆ ಮಾಡಿದರು. ರಥ ಸಾಗುವ ದಾರಿಯುದ್ದಕ್ಕೂ ಮಹಿಳೆಯರು, ಮಕ್ಕಳು ಬಾಳೆಹಣ್ಣು, ಕಾಳುಮೆಣಸು, ಮಂಡಕ್ಕಿ, ಬೆಲ್ಲದ ಚೂರನ್ನು ರಥಕ್ಕೆ ಎರಚಿ ಹರಕೆ ಪೂರೈಸಿದರು. ಕರಡೆ ಮಜಲು ವಾದ್ಯ, ಡೊಳ್ಳುವಾದ್ಯಗಳನ್ನು ನುಡಿಸುವ ಹಾಗೂ ನಂದಿಕೋಲುಗಳನ್ನು ಕುಣಿಸುವ ಮೂಲಕ
ಯುವಕರು ಸಂಭ್ರಮದಿಂದ ಹೆಜ್ಜೆ ಹಾಕಿದರು. ದೇವರ ಪಟ್ಟದ ಗೂಳಿಯನ್ನು ವಿಶೇಷವಾಗಿ ಸಿಂಗಾರ ಮಾಡಿ ರಥದ ಮುಂದೆ ಸವಾರಿ ಮಾಡಿಸುತ್ತಿದ್ದ ದೃಶ್ಯ ನೋಡುಗರಿಗೆ ಆಕರ್ಷಕವಾಗಿತ್ತು.

ರಥ ಸಾಗುತ್ತ ವೀರಭದ್ರನ ಓಣಿಗೆ ಬಂದಗಾ ಹರಕೆ ಹೊತ್ತ ನೂರಾರು ಯುವಕರು ಬೆಳಗಿನಿಂದಲೇ ಉಪವಾಸ ವ್ರತ ಕೈಗೊಂಡು ಶಸ್ತ್ರ ಪೂಜಾ ವಿಧಿವಿಧಾನಗಳನ್ನು ಪೂರೈಸಿ ಚೂಪಾದ ಪಂಚಲೋಹದ ಕಡ್ಡಿಗಳನ್ನು ಬಾಯಿಗೆ
ಸಿಕ್ಕಿಸಿಕೊಂಡು ಆಕರ್ಷಕ ವೀರಭದ್ರನ ಕುಣಿತ ಪ್ರದರ್ಶಿಸಿದರು. ಸಂಜೆ ಸಕಲ ಬಿರುದಾವಳಿಗಳಿಂದ ದೇವರ ಉತ್ಸವಮೂರ್ತಿಯನ್ನು ಗುಡಿದುಂಬಿಸಲಾಯಿತು. ನಂತರ ನೆರೆದ ಭಕ್ತರೆಲ್ಲರಿಗೂ ಸಜ್ಜೆ ಮತ್ತು ಕಡ್ಲೆಕಾಳು ಮೊಳಕೆ, ಬೆಲ್ಲ, ಬಾಳೆಹಣ್ಣು, ತೆಂಗಿನಕಾಯಿ, ಸಕ್ಕರೆಯನ್ನು ಪ್ರಸಾದವಾಗಿ ವಿತರಿಸಿದರು.

ಕಾರ್ಯಕ್ರಮದಲ್ಲಿ ದೇವಾಲಯ ಕಾರ್ಯನಿರ್ವಹಕಾಧಿಕಾರಿ ಎಚ್. ಗಂಗಾಧರಪ್ಪ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ
ಎಂ.ವೈ.ಟಿ. ಸ್ವಾಮಿ, ಜೆ.ಪಿ. ರವಿಶಂಕರ್, ಜಿ.ಎಸ್. ಪ್ರಭುಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಎನ್. ಮಹಾಂತಣ್ಣ, ತಿಪ್ಪೇಶ, ಗ್ರಾಮಸ್ಥರಾದ ದಳವಾಯಿ ರುದ್ರಮುನಿ, ಟಿ. ರುದ್ರಮುನಿ, ಉಮೇಶ, ನೂರಾರು ಭಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT