ಶುಕ್ರವಾರ, ಡಿಸೆಂಬರ್ 2, 2022
20 °C
ಬುರುಡುಕುಂಟೆ ಗ್ರಾಮದಲ್ಲಿ ಕೆಂಪೇಗೌಡರ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮ

ಕೆಂಪೇಗೌಡರ ದೂರದೃಷ್ಟಿ ಯುವಕರಿಗೆ ಆದರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧರ್ಮಪುರ: ಜಾತಿ, ಧರ್ಮ, ಸಮುದಾಯಕ್ಕೆ ಸೀಮಿತವಾಗದೆ 500 ವರ್ಷಗಳ ಹಿಂದೆಯೇ ಸಾಮಾಜಿಕ ಸಮಾನತೆಯನ್ನು ಎತ್ತಿ ಹಿಡಿದು, ದೇಶಕ್ಕೇ ಮಾದರಿಯಾದ ಕೆಂಪೇಗೌಡರ ಆದರ್ಶಗಳನ್ನು ಇಂದಿನ ಯುವಕರು ಅನುಕರಿಸಬೇಕು ಎಂದು ಯುವ ಜನತಾದಳದ ರಾಜ್ಯಾಧ್ಯಕ್ಷ ಮತ್ತು ಚಲನ ಚಿತ್ರನಟ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಸಮೀಪದ ಬುರುಡುಕುಂಟೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೆಂಪೇಗೌಡ ಪುತ್ಥಳಿ ಲೋಕಾರ್ಪಣೆ ಮತ್ತು ಒಕ್ಕಲಿಗರ ಬೃಹತ್ ಸಮಾವೇಶದಲ್ಲಿ ಕೆಂಪೇಗೌಡರ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದರು.

ಕೆಂಪೇಗೌಡರ ದೂರದೃಷ್ಟಿಯ ನೀರಾವರಿ, ಕೆರೆಕಟ್ಟೆಗಳ ನಿರ್ಮಾಣ, ವ್ಯಾಪಾರಸ್ಥರಿಗೆ ನೀಡಿದ ಪ್ರೋತ್ಸಾಹ ಇಂದು ವಿಶ್ವದ ಹಲವು ರಾಷ್ಟ್ರಗಳು ಬೆಂಗಳೂರಿನತ್ತ ತಿರುಗಿ ನೋಡುವಂತಾಗಿದೆ. ಅದೇ ರೀತಿ ಮಣ್ಣಿನ ಮಗ ದೇವೇಗೌಡರು ಪಂಚರತ್ನ ಕಾರ್ಯಕ್ರಮದ ಮೂಲಕ ಕರ್ನಾಟಕದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಿದರು ಎಂದರು.

ಜನರು ಪ್ರಾದೇಶಿಕ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯುವುದನ್ನು ಬಯಸಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು
ತಾವೇ ತೆಗೆದುಕೊಳ್ಳುವುದಾಗಿ ಘೋಷಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸ್ಪಟಿಕಪುರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಮಾತನಾಡಿ, ‘ಕೆಂಪೇಗೌಡರ ವ್ಯಕ್ತಿತ್ವ ಅತ್ಯಂತ ದೊಡ್ಡದು. ಅವರ ಐತಿಹಾಸಿಕ ಚಲನಚಿತ್ರ ತಯಾರಾಗಬೇಕು. ನಿಖಿಲ್ ಅವರೇ ನಾಟಕನಾಗಿ ಅಭಿನಯಿಸಬೇಕು. ಅವರ ನ್ಯಾಯ, ಧಾರ್ಮಿಕ ಸಹಿಷ್ಣುತೆ, ದೂರದೃಷ್ಟಿ ಇಂದಿನ ರಾಜಕಾರಣಿಗಳಿಗೂ ಬರಬೇಕು’ ಎಂದು ಹೇಳಿದರು.

ಜನಸಂಖ್ಯೆಯಲ್ಲಿ ಶೇ 3ರಷ್ಟಿರುವ ಜನರಿಗೆ ಶೇ 10ರಷ್ಟು ಮೀಸಲಾತಿ ನೀಡುವ ತೀರ್ಮಾನ ಒಳ್ಳೆಯದೆ. ಆದರೆ, ಶೇ 16 ರಿಂದ ಶೇ 19ರಷ್ಟಿರುವ ಒಕ್ಕಲಿಗರಿಗೆ ಇದರಿಂದ ಅನ್ಯಾಯವಾಗಲಿದೆ. ಈ ವಿಚಾರವಾಗಿ ದೇವೇಗೌಡರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ನ್ಯಾಯ ಸಿಗುವ ಭರವಸೆ ಇದೆ
ಎಂದರು.

ಚಿತ್ರದುರ್ಗ ಜಿಲ್ಲಾ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಡಾ.ಕೆ.ಜಿ. ಮೂಡಲಗಿರಿಯಪ್ಪ, ಸಣ್ಣ ನೀರಾವರಿ ಇಲಾಖೆಯ ನಿವೃತ್ತ ಎಂಜಿನಿಯರ್ ರವೀಂದ್ರಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ಯಶೋಧರ ಮಾತನಾಡಿದರು.

  ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ಜಯಣ್ಣ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ ಎಸ್.ಜೆ. ಹನುಮಂತರಾಯ, ಶಿವಪ್ರಸಾದಗೌಡ, ಚಿದಾನಂದ, ಹನುಮಂತಪ್ಪ,

-ರಾಮಚಂದ್ರಪ್ಪ, ಜಗದೀಶ್, ದ್ಯಾಮೇಗೌಡ, ಸಿದ್ದೇಶ್ವರ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು