ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರಿಲ್ಲದ ಹಿರಿಯೂರಿನ ಆಸ್ಪತ್ರೆ: ಮುಗಿಯದ ಗೋಳು

Last Updated 28 ಜುಲೈ 2018, 14:05 IST
ಅಕ್ಷರ ಗಾತ್ರ

ಹಿರಿಯೂರು: ‘ಇಲ್ಲಿನ ಪ್ರಧಾನ ರಸ್ತೆಯಲ್ಲಿರುವ ನೂರು ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದಾಗಿ ರೋಗಿಗಳು ಪರದಾಡುವಂತಾಗಿದೆ.

11 ವೈದ್ಯರ ಪೈಕಿ ಕೇವಲ 4 ವೈದ್ಯರು ದಿನದ 24 ಗಂಟೆ ಪಾಳಿಯಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ.

‘ಆಸ್ಪತ್ರೆಗೆ ಮಂಜೂರಾಗಿರುವ 11 ವೈದ್ಯರಲ್ಲಿ ಜನರಲ್ ಸರ್ಜನ್, ಚರ್ಮರೋಗ, ಎಲುಬು–ಕೀಲು–ಮೂಳೆ ತಜ್ಞರು ಹಾಗೂ ಕಿವಿ–ಮೂಗು–ಗಂಟಲು ತಜ್ಞರ ಹುದ್ದೆಗಳು ಖಾಲಿ ಇವೆ. ಕೆಪಿಎಸ್‌ಸಿಯಿಂದಯಿಂದ ನೇಮಕಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದ ಫಿಸಿಷಿಯನ್ ಕೇವಲ ನಾಲ್ಕು ದಿನ ಕರ್ತವ್ಯ ನಿರ್ವಹಿಸಿ ಹೋದವರು ಮರಳಿ ಬಂದಿಲ್ಲ. ಹೆರಿಗೆ ತಜ್ಞರು ಕರ್ತವ್ಯಕ್ಕೆ ಹಾಜರಾದವರು ಮತ್ತೆ ಬಂದಿಲ್ಲ. ಈ ಇಬ್ಬರು ವೈದ್ಯರು ನೂತನವಾಗಿ ನೇಮಕಗೊಂಡಿರುವ ಕಾರಣ ಇವರ ಹಕ್ಕಿನಲ್ಲಿ ರಜೆ ಇರುವುದಿಲ್ಲ. ಒಂದು ತಿಂಗಳು ಕರ್ತವ್ಯ ನಿರ್ವಹಿಸಿದರೆ ಒಂದು ದಿನ ರಜೆ ತೆಗೆದುಕೊಳ್ಳಬಹುದು. ಅನಧಿಕೃತವಾಗಿ ಗೈರು ಹಾಜರಾಗಿರುವ ಇಬ್ಬರೂ ವೈದ್ಯರ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ವರದಿ ಕೊಟ್ಟಿದ್ದೇನೆ’ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ್ ಸುದ್ದಿಗಾರರಿಗೆ ತಿಳಿಸಿದರು.

‘ಖಾಸಗಿ ಆಸ್ಪತ್ರೆಗಳ ವೈದ್ಯರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದು, ಸರ್ಕಾರಿ ಆಸ್ಪತ್ರೆಗಳ ವೈದ್ಯರು ರಜೆ ಹೋಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹೀಗಿದ್ದೂ ಇಲ್ಲಿನ ವೈದ್ಯರು ಅನಧಿಕೃತವಾಗಿ ಗೈರುಹಾಜರಾಗಿರುವುದರಿಂದ ರೋಗಿಗಳು ಪರದಾಡುವಂತಾಗಿದೆ. ಅಲ್ಲದೆ ಕೆಪಿಎಸ್‌ಸಿ ಮೂಲಕ ಇವರು ಇಲ್ಲಿನ ಸ್ಥಳವನ್ನು ಆಯ್ಕೆ ಮಾಡಿಕೊಂಡಿರುವ ಕಾರಣ ಸೀಟ್ ಬ್ಲಾಕ್ ಆಗಿರುತ್ತದೆ. ಬೇರೆ ವೈದ್ಯರೂ ಇಲ್ಲಿಗೆ ನೇಮಕವಾಗುವುದಿಲ್ಲ. ಇವರೂ ಬರುವುದಿಲ್ಲ. ಹೀಗಾದರೆ ರೋಗಿಗಳ ಗತಿಯೇನು’ ಎಂದು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಜಿ. ದಾದಾಪೀರ್ ಪ್ರಶ್ನೆ ಮಾಡಿದ್ದಾರೆ.

‘ಹಿರಿಯೂರು ಮೂಲಕ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚು. ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿರುವ ಕಾರಣ ಸಹಜವಾಗಿ ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತದೆ. ಅಲ್ಲದೆ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ವಿಭಾಗವನ್ನೂ ಇರುವ ವೈದ್ಯರೇ ನೋಡಿಕೊಳ್ಳಬೇಕು. ನಾಲ್ವರು ವೈದ್ಯರು 24 ಗಂಟೆ ರೋಗಿಗಳನ್ನು ನೋಡಲು ಸಾಧ್ಯವೇ? ಗೈರುಹಾಜರಾಗಿರುವ ವೈದ್ಯರು ಕರ್ತವ್ಯಕ್ಕೆ ಮರಳುವಂತೆ ಸರ್ಕಾರ ನೋಟಿಸ್ ಜಾರಿಮಾಡಬೇಕು. ಇಲ್ಲವಾದಲ್ಲಿ ಬೇರೆ ವೈದ್ಯರನ್ನು ಇಲ್ಲಿಗೆ ನಿಯೋಜಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಇನ್ ಸರ್ವಿಸ್‌ನಲ್ಲಿ ಇರುವ ವೈದ್ಯರನ್ನು ಖಾಲಿ ಇರುವ ಹುದ್ದೆಗಳಿಗೆ ಮೊದಲು ನೇಮಕ ಮಾಡಿ, ನಂತರ ಕೆಪಿಎಸ್‌ಸಿಯಿಂದ ಬರುವವರಿಗೆ ಸ್ಥಳ ತೋರಿಸಿದ್ದರೆ ಇಂತಹ ಸಮಸ್ಯೆ ಆಗುತ್ತಿರಲಿಲ್ಲ. ಇಲ್ಲಿಗೆ ಬರುವ ಹೊಸ ವೈದ್ಯರು ಕೆಲಸದ ಒತ್ತಡ ನೋಡಿ ಗೈರು ಹಾಜರಾಗುತ್ತಿದ್ದಾರೆ. ಆರೋಗ್ಯ ಸಚಿವರು ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ವೈದ್ಯರನ್ನು ನೇಮಕ ಮಾಡಬೇಕು’ ಎಂದು ದಾದಾಪೀರ್ ಆಗ್ರಹಿಸಿದ್ದಾರೆ.

11 –ಆಸ್ಪತ್ರೆಗೆ ಮಂಜೂರಾಗಿರುವ ವೈದ್ಯರು

4 –ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT