ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಜಿಲ್ಲಾಡಳಿತ ಭವನಕ್ಕೆ ಭೂಮಿಪೂಜೆ: ಶಾಸಕ ಜಿ.ಎಚ್. ತಿಪ್ಪಾರೆಡ್ಡಿ

ಒಂದೇ ಸೂರಿನಡಿ 14 ಕಚೇರಿಗಳು, ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ
Last Updated 9 ನವೆಂಬರ್ 2021, 6:42 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಸರ್ಕಾರದ 14 ಇಲಾಖೆಗಳ ಕಚೇರಿಗಳನ್ನು ಒಳಗೊಂಡು ಒಂದೇ ಸೂರಿನಲ್ಲಿ ಇಲ್ಲಿಯ ಕುಂಚಿಗನಾಳ್‌ ಕಣಿವೆಯಲ್ಲಿ ನೂತನವಾಗಿ ‘ಜಿಲ್ಲಾಡಳಿತ ಭವನ’ ನಿರ್ಮಿಸಲಾಗುತ್ತಿದೆ. ಇದರ ಕಾಮಗಾರಿಗೆ ಸೋಮವಾರ ಚಾಲನೆ ದೊರೆಯಿತು.

40 ಎಕರೆ ವಿಸ್ತೀರ್ಣದ ಈ ಸರ್ಕಾರಿ ಜಾಗದಲ್ಲಿ ಐದು ಎಕರೆ ವಿಸ್ತೀರ್ಣದಲ್ಲಿ ಭವನ ನಿರ್ಮಾಣ ಆಗಲಿದೆ. ಇದಕ್ಕಾಗಿ₹ 44 ಕೋಟಿ ಖರ್ಚಾಗಬಹುದು ಎಂದು ಕ್ರಿಯಾಯೋಜನೆ ಸಿದ್ಧಪಡಿಸಲಾಗಿತ್ತು. ಸರ್ಕಾರ ₹ 25 ಕೋಟಿಗೆ ಅನುಮೋದನೆ ನೀಡಿದೆ. ಹಂತ–ಹಂತವಾಗಿ ಹಣ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಒಂದೂವರೆ ವರ್ಷದ ಹಿಂದೆಯೇ ಅನುಮೋದನೆ ದೊರೆತರೂ ಕಾಮಗಾರಿಗೆ ಚಾಲನೆ ನೀಡುವ ಪ್ರಕ್ರಿಯೆ ವಿಳಂಬವಾಗಿದೆ. ಇತರ ಜಿಲ್ಲೆಗಳಲ್ಲಿ ನಿರ್ಮಾಣವಾದಂತೆ ಸುಂದರಜಿಲ್ಲಾಡಳಿತ ಭವನ ನಿರ್ಮಾಣವಾಗಬೇಕು ಎಂಬ ಕನಸು ಮುಂದಿನ ಒಂದು–ಒಂದೂವರೆ ವರ್ಷದೊಳಗೆ ನನಸಾಗುವ ಸಾಧ್ಯತೆ ಇದೆ.

ಭೂಮಿಪೂಜೆ ನೆರವೇರಿಸಿದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ‘ವರ್ಷದ ಹಿಂದೆಯೇ ಕಾಮಗಾರಿ ಆರಂಭವಾಗಬೇಕಿತ್ತು. ಆದರೆ, ಕಣಿವೆ ಪ್ರದೇಶವಾದ್ದರಿಂದ ಸಮತಟ್ಟು ಮಾಡಲು ಕಾಲಾವಕಾಶ ಬೇಕಾಯಿತು. ಎಂಟು–ಹತ್ತು ದಿನದೊಳಗೆ ವಿಧಾನಪರಿಷತ್‌ ಚುನಾವಣೆ ಘೋಷಣೆಯಾಗಲಿದ್ದು, ನೀತಿ ಸಂಹಿತೆ ಜಾರಿಯಾಗಲಿದೆ. 2022ರ ಜನವರಿ ತಿಂಗಳವರೆಗೂ ಕಾಮಗಾರಿ ಆರಂಭಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಾಂಕೇತಿಕವಾಗಿ ಚಾಲನೆ ನೀಡಲಾಗುತ್ತಿದೆ. ನ.10ರಿಂದ ಕಾಮಗಾರಿ ಚುರುಕು ಪಡೆಯಲಿದೆ’ ಎಂದರು.

‘ಕಾಮಗಾರಿ ತಡಮಾಡಿದಂತೆಲ್ಲ ಯೋಜನಾ ವೆಚ್ಚ ಜಾಸ್ತಿಯಾಗಲಿದೆ. ಇದು ಕೂಡ ಕಾಮಗಾರಿ ಆರಂಭಿಸಲು ಪ್ರಮುಖ ಕಾರಣವಾಗಿದೆ ಎಂದ ಅವರು, ಗುತ್ತಿಗೆ ಪಡೆದವರು 2022ರ ಆಗಸ್ಟ್‌ 15ರ ಒಳಗೆ ಪೂರ್ಣಗೊಳಿಸಿದರೆ, ಸ್ವಾತಂತ್ರ್ಯ ದಿನಾಚರಣೆಯಂದು ಉದ್ಘಾಟಿಸಲು ಅನುಕೂಲವಾಗಲಿದೆ. ಆದ್ದರಿಂದ ವೇಗವಾಗಿ ಕಾಮಗಾರಿ ಪೂರ್ಣಗೊಳಿಸಿ’ ಎಂದು ಸೂಚನೆ ನೀಡಿದರು.

‘ಜಿಲ್ಲಾಡಳಿತ ಭವನದ ಕಚೇರಿಗೆ ಬಂದು ಹೋಗಲು ಅನುಕೂಲ ಆಗುವಂತೆ ಗುಣಮಟ್ಟದ ರಸ್ತೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ₹ 7 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಈಗಾಗಲೇ ಕಂದಾಯ ಸಚಿವರಲ್ಲಿ ಚರ್ಚಿಸಿದ್ದೇನೆ. ಪ್ರಸ್ತಾವ ಸಲ್ಲಿಸಿ ಅನುದಾನ ಬಿಡುಗಡೆಗೆ ಪ್ರಯತ್ನಿಸುತ್ತೇನೆ’ ಎಂದು ಹೇಳಿದರು.

‘ಭವನದ ಕಾಮಗಾರಿ ಪಕ್ಕದಲ್ಲಿಯೇ ಈಗಾಗಲೇ ₹ 12 ಕೋಟಿ ವೆಚ್ಚದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ, ಜಿಟಿಟಿಸಿ ಕೇಂದ್ರ ಸೇರಿ ಅನೇಕ ಸರ್ಕಾರಿ ಕಟ್ಟಡಗಳು ಇವೆ. ಮುಂದಿನ ದಿನಗಳಲ್ಲಿ ಇದು ಆಕರ್ಷಣಿಯ ಜಿಲ್ಲಾ ಕಚೇರಿಯಾಗಿ ಪರಿವರ್ತನೆಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ನಗರಸಭೆ ಅಧ್ಯಕ್ಷೆ ಬಿ.ತಿಪ್ಪಮ್ಮ, ಸದಸ್ಯರಾದ ವೆಂಕಟೇಶ್, ಮಲ್ಲಿಕಾರ್ಜುನ್, ಹರೀಶ್, ಸುರೇಶ್, ತಾರಕೇಶ್ವರಿ, ಭಾಗ್ಯಮ್ಮ, ಅನುರಾಧ, ತಹಶೀಲ್ದಾರ್ ಸತ್ಯನಾರಾಯಣ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಸತೀಶ್‍ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT