ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ ಸಂವಹನ ಮಾಧ್ಯಮ, ಜ್ಞಾನವಲ್ಲ: ಕವಿ ಚಂದ್ರಶೇಖರ ತಾಳ್ಯ

Last Updated 30 ನವೆಂಬರ್ 2021, 5:24 IST
ಅಕ್ಷರ ಗಾತ್ರ

ಹೊಳಲ್ಕೆರೆ: ಭಾಷೆ ಒಂದು ಸಂವಹನ ಮಾಧ್ಯಮವೇ ಹೊರತು ಅದೇ ಜ್ಞಾನವಲ್ಲ ಎಂದು ಕವಿ ಚಂದ್ರಶೇಖರ ತಾಳ್ಯ ಅಭಿಪ್ರಾಯಪಟ್ಟರು.

ಪಟ್ಟಣದ ಎನ್ಇಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಪೋಷಕರ ಸಭೆಯಲ್ಲಿ ಅವರು ಮಾತನಾಡಿದರು.

‘ಇಂಗ್ಲಿಷ್ ಕಲಿತರೆ ಮಾತ್ರ ನಮ್ಮ ಮಗು ಬುದ್ದಿವಂತನಾಗುತ್ತಾನೆ ಎಂಬ ಭ್ರಮೆ ಪೋಷಕರಲ್ಲಿದೆ. ಇಂಗ್ಲಿಷ್ ಕಲಿಯದಿದ್ದರೆ ಬದುಕುವುದಕ್ಕೇ ಸಾಧ್ಯವಾಗುವುದಿಲ್ಲ ಎಂದುಕೊಂಡಿದ್ದಾರೆ. ಕೇವಲ ಭಾಷೆಯಿಂದ ಜ್ಞಾನ ಹೆಚ್ಚುವುದಿಲ್ಲ. ಪ್ರಪಂಚದ ಎಲ್ಲಾ ಭಾಷೆಗಳಲ್ಲೂ ಜ್ಞಾನ ಅಡಗಿರುತ್ತದೆ. ಭಾಷೆಯ ಮೂಲಕ ಜ್ಞಾನ ಪ್ರಸಾರ ಮಾಡಬಹುದೇ ಹೊರತು, ಜ್ಞಾನದ ಮೂಲಕ ಭಾಷೆ ಪ್ರಸಾರ ಆಗುವುದಿಲ್ಲ. ಶೈಕ್ಷಣಿಕ ದೃಷ್ಠಿಯಿಂದ ಇಂಗ್ಲಿಷ್ ಈಗ ಅನಿವಾರ್ಯವಾಗಿದೆ. ಆದರೆ ಪ್ರಾದೇಶಿಕ ಭಾಷೆಗಳನ್ನು ಉಳಿಸಿ ಬೆಳೆಸುವ ಹೊಣೆ ಎಲ್ಲರ ಮೇಲೆ ಇದೆ’ ಎಂದರು.

‘ಕನ್ನಡ ಅತ್ಯಂತ ಸುಂದರ ಭಾಷೆ. ವಿನೋಬಾ ಭಾವೆ ಹೇಳುವಂತೆ ಕನ್ನಡದಷ್ಟು ಸುಂದರ ಅಕ್ಷರಗಳು ಪ್ರಪಂಚದ ಬೇರೆ ಯಾವುದೇ ಭಾಷೆಯಲ್ಲಿ ಇಲ್ಲ. ಇಂಗ್ಲಿಷ್‌ನಲ್ಲಿ ಪ್ರಕಟವಾದ ಪುಸ್ತಕ ಜಪಾನ್‌ನಲ್ಲಿ ಮೂರು ತಿಂಗಳ ಒಳಗೆ ಜಪಾನ್ ಭಾಷೆಗೆ ತರ್ಜುಮೆ ಆಗುತ್ತದೆ. ಅದು ನಮ್ಮಲ್ಲಿಯೂ ಆಗಬೇಕು. ಆಗ ಕನ್ನಡ ಭಾಷೆಯ ತೂಕ ಹೆಚ್ಚುತ್ತದೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿರುತ್ತದೆ. ಹೆಚ್ಚು ಬುದ್ಧಿವಂತ ಶಿಕ್ಷಕರು ಮಾತ್ರ ಸರ್ಕಾರಿ ಶಾಲೆಗಳಿಗೆ ಆಯ್ಕೆ ಆಗುತ್ತಾರೆ. ಕಾನ್ವೆಂಟ್ ಇಂಗ್ಲಿಷ್ ಕಲಿಸಿದರೆ, ಸರ್ಕಾರಿ ಶಾಲೆ ಬದುಕನ್ನು ಕಲಿಸುತ್ತದೆ’ ಎಂದು ಹೇಳಿದರು.

ಇಸಿಒ ಕೊಟ್ರೇಶ್ ಮಾತನಾಡಿ, ‘ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರಷ್ಟೇ ಜವಾಬ್ದಾರಿ ಪೋಷಕರಿಗೂ ಇರುತ್ತದೆ. ಪೋಷಕರು ಮಕ್ಕಳ ಶಿಕ್ಷಣದ ಪ್ರಗತಿಯ ಬಗ್ಗೆ ಕಾಳಜಿ ವಹಿಸಬೇಕು’ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ನಾಗೇಂದ್ರಪ್ಪ, ಸಿಆರ್‌ಪಿ ಗುರುಸಿದ್ದಪ್ಪ, ಮುಖ್ಯಶಿಕ್ಷಕ ಉಚ್ಚಂಗಪ್ಪ, ಬಿ.ಎ.ರಾಧಮ್ಮ, ಎನ್.ಕಾಂತರಾಜ್, ಜ್ಯೋತಿ, ಮಮತಾ, ಶಾಂತಲಾ, ಸುಕನ್ಯಾ, ಅರುಂಧತಿ, ಪೋಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT