ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಶ್ರೀಗಂಧ ಬೆಳೆಗಾರರ ರಕ್ಷಣೆಗೆ ಧಾವಿಸಲಿ

ಬಿದಿರು ಹಾಗೂ ಶ್ರೀಗಂಧ ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಘುರಾವ್
Last Updated 12 ನವೆಂಬರ್ 2020, 5:45 IST
ಅಕ್ಷರ ಗಾತ್ರ

ಹೊಳಲ್ಕೆರೆ: ರಾಜ್ಯ ಸರ್ಕಾರ ಶ್ರೀಗಂಧ ಬೆಳೆಗಾರರ ರಕ್ಷಣೆಗೆ ಧಾವಿಸಬೇಕು ಎಂದು ಬಿದಿರು ಹಾಗೂ ಶ್ರೀಗಂಧ ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬುಕ್ಕಾಪಟ್ಟಣದ ರಘುರಾವ್ ಒತ್ತಾಯಿಸಿದರು.

ತಾಲ್ಲೂಕಿನ ಉಪ್ಪರಿಗೇನಹಳ್ಳಿಯ ಶ್ರೀಗಂಧ ಬೆಳೆಗಾರ ದಿನೇಶ್ ಅವರ ತೋಟಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

‘ಕಳ್ಳರು ರೈತರ ಹೊಲದಲ್ಲಿ ಬೆಳೆದ ಶ್ರೀಗಂಧದ ಮರಗಳನ್ನು ಕಳವು ಮಾಡುತ್ತಿರುವುದು ಆತಂಕಕಾರಿ ಬೆಳೆವಣಿಗೆ. 10, 15 ವರ್ಷ ಕಷ್ಟಪಟ್ಟು ಬೆಳೆಸಿದ ಮರಗಳನ್ನು ಕಟಾವು ಮಾಡಿಕೊಂಡು ಹೋದರೆ ರೈತ ಏನು ಮಾಡಬೇಕು? ಸರ್ಕಾರ, ಪೊಲೀಸ್, ಅರಣ್ಯ ಇಲಾಖೆಗಳು ರೈತನ ತೋಟಕ್ಕೆ ರಕ್ಷಣೆ ಕೊಡುವುದು ನಮ್ಮ ಕೆಲಸ ಅಲ್ಲ ಎಂದು ಹೇಳಿದರೆಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶ್ರೀಗಂಧ ಬೆಳೆದ ರೈತ ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸಿದರು.

‘ಕಳ್ಳರು ದಾಳಿ ಮಾಡುವ ಭಯದಿಂದ ರಾತ್ರಿವೇಳೆ ಶ್ರೀಗಂಧ ಕಾಯಲು ಹೆದರುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ರಾತ್ರಿ ವೇಳೆ ಗರಗಸದಿಂದ ಮರಗಳನ್ನು ಕತ್ತರಿಸಿಕೊಂಡು ಹೋಗುತ್ತಾರೆ. ಎಲ್ಲರೂ ಜವಾಬ್ದಾರಿಯಿಂದ ನುಣುಚಿಕೊಂಡರೆ ಅಮಾಯಕ ರೈತನ ಪಾಡೇನು? ಸರ್ಕಾರ ಮೊದಲು ರೈತನ ಹೊಲಕ್ಕೆ ರಕ್ಷಣೆ ಒದಗಿಸಬೇಕು. ಶ್ರೀಗಂಧದ ಮರಗಳಿಗೆ ವಿಮಾ ಸೌಲಭ್ಯ ನೀಡಬೇಕು’ ಎಂದು ಆಗ್ರಹಿಸಿದರು.

ಬಿದಿರು ಹಾಗೂ ಶ್ರೀಗಂಧ ಬೆಳೆಗಾರರ ಹೋರಾಟ ಸಮಿತಿಯ ಮುಖಂಡ ತರಿಕೆರೆ ತಾಲ್ಲೂಕಿನ ಅಮೃತಾಪುರದ ಎ.ಎಸ್.ಈಶ್ವರಪ್ಪ ಮಾತನಾಡಿದರು.

ರೈತ ಮುಖಂಡರಾದ ಶಿವಕುಮಾರ್, ಲಕ್ಷ್ಮಣ್, ಸೋಮಣ್ಣ, ಸಾದಾಶಿವ, ರಂಗಸ್ವಾಮಿ, ತಿಮ್ಮಣ್ಣ, ರೈತ ದಿನೇಶ್ ಇದ್ದರು.

ನ.5ರಂದು ‘ಪ್ರಜಾವಾಣಿ’ಯಲ್ಲಿ ‘ಶ್ರೀಗಂಧ ಬೆಳೆಯಬೇಡಿ; ರೈತನ ಆಗ್ರಹ’ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಈ ನಿಯೋಗ ರೈತ ದಿನೇಶ್ ಅವರ ತೋಟಕ್ಕೆ ಭೇಟಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT