ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದೇವ ನಿಷ್ಠೆ ಹೇಳುವ ಲಿಂಗಪೂಜೆ: ಶಿವಾಚಾರ್ಯ ಸ್ವಾಮೀಜಿ

Last Updated 5 ನವೆಂಬರ್ 2022, 6:47 IST
ಅಕ್ಷರ ಗಾತ್ರ

ಹೊಸದುರ್ಗ: ಬಸವ ತತ್ವ ಯುವಕರಿಗೆ ಮಾತ್ರವಲ್ಲ ಇಡೀ ಮನುಕುಲಕ್ಕೆ ಬೇಕು. ತತ್ವ ಸಿದ್ಧಾಂತ ಹೇಳುವವರು ಮೊದಲು ಅದರಂತೆ ಬಾಳಬೇಕು ಎಂದುಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸಾಣೇಹಳ್ಳಿಯಲ್ಲಿಶುಕ್ರವಾರ ನಡೆದ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಗುಡಿಗುಂಡಾರಗಳಿಗೆ ಹೋಗಿ ವಿವಿಧ ದೇವರನ್ನು ಪೂಜಿಸುವುದಕ್ಕಿಂತ ಇಷ್ಟಲಿಂಗ ಪೂಜೆ ಅತ್ಯಂತ ಸರಳ.
ಏಕದೇವ ನಿಷ್ಠೆಯನ್ನು ಹೇಳುತ್ತದೆ.ದೊಡ್ಡವರು ಎಂದೂ ತಾನು ದೊಡ್ಡವರೆಂದು ಹೇಳಿಕೊಳ್ಳುವುದಿಲ್ಲ. ಇತರರ ತಪ್ಪನ್ನು ತಮ್ಮ ಮೇಲೆ ಹಾಕಿಕೊಂಡು ಸಮಾಜ ತಿದ್ದುವ ಮಹತ್ಕಾರ್ಯಕ್ಕೆ ಶರಣರು ಮುಂದಾಗಿದ್ದರು. ನಮ್ಮ ಓದು ಮತ್ತು ಮಾತಿಗಿಂತ ನುಡಿದಂತೆ ನಡೆದಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

‘ಅಕ್ಟೋಬರ್ 15ರಿಂದ ನವೆಂಬರ್ 15ರವರೆಗೆ 31 ಜಿಲ್ಲೆಗಳಲ್ಲಿ 31 ನಾಟಕಗಳನ್ನು ಪ್ರದರ್ಶಿಸುವ ‘ಬಸವಾದಿ ಶರಣ ದರ್ಶನ’ ಯೋಜನೆಹಮ್ಮಿಕೊಂಡಿದ್ದೇವೆ’ ಎಂದರು.

‘ನಮ್ಮೆಲ್ಲರ ಮನಸ್ಸನ್ನು ಸಾಣಿಸುವ ಹಳ್ಳಿ ಸಾಣೇಹಳ್ಳಿ. ಇಲ್ಲಿನ ಬಯಲು ರಂಗಮಂದಿರ ಬಸವಣ್ಣನ ವಿಶ್ವವಿದ್ಯಾಲಯದಂತೆ. ‘ಲೇಜಿನೆಸ್’ ಮತ್ತು ‘ಕ್ರೇಜಿನೆಸ್’ ಎಂಬ ಗ್ರಹಣ ಭಾರತಕ್ಕೆ ಹಿಡಿದಿದೆ. ನಮ್ಮ ಸಾಮರ್ಥ್ಯವನ್ನು ನಾವು ತಿಳಿಯುವುದೇ ಬಸವಾಚಾರ. ಬೇರೆಯವರನ್ನು ತಿದ್ದುವುದಕ್ಕಿಂತ ಮೊದಲು ತನ್ನನ್ನು ತಾನು ತಿದ್ದಿಕೊಳ್ಳುವವರು ನಿಜವಾದ ಸನ್ಯಾಸಿ’ ಎಂದುಗೌರಿಗದ್ದೆಯ ಅವಧೂತ ವಿನಯ ಗುರೂಜಿ ಹೇಳಿದರು.

‘ಇಂದು ಬದುಕನ್ನೇ ಆಧುನಿಕ ತಂತ್ರಜ್ಞಾನಕ್ಕೆ ಕೊಟ್ಟು ಶರಣಾಗಿರುವುದು ಬೇಸರದ ಸಂಗತಿ. ಬಸವಣ್ಣನವರ ಭಾವಚಿತ್ರ ಕೇವಲ ಭಾವಚಿತ್ರವಾಗಿ ಉಳಿದಿದೆ. ತತ್ವಾದರ್ಶಗಳ ಪಾಲನೆಯಿಲ್ಲ’ ಎಂದುವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಹೇಳಿದರು.

‘ಸಮಾಜದ ಯುವಕರನ್ನು ಸರಿದಾರಿಗೆ ತರಲು ಈ ವೇದಿಕೆ ಉತ್ತಮ ಕಾರ್ಯನಿರ್ವಹಿಸುತ್ತಿದೆ. ಭಾರತದ ಭೂಪಟದಲ್ಲಿ ನಾಟಕೋತ್ಸವದ ಮೂಲಕ ಸಾಣೇಹಳ್ಳಿ ಗುರುತಿಸಿಕೊಂಡಿದೆ’ ಎಂದು ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ಪಿ. ಉಮೇಶ್,ನಾರಾಯಣಪುರದ ಕೆ.ಎ.ಎಸ್. ಉತ್ತೀರ್ಣರಾದ ಎನ್.ಸಿ.
ಶೈಲಾ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂತೇಬೆನ್ನೂರಿನ ಡಾ. ಬಸವಂತಪ್ಪ ಅವರನ್ನು ಅಭಿನಂದಿಸಲಾಯಿತು.

ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ‘ಯುವಕರು ಮತ್ತು ಬಸವತತ್ವ’ ಕುರಿತು ಮಾತನಾಡಿದರು.

ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಕೃಷ್ಣಾರೆಡ್ಡಿ, ಲೇಖಕ ಗಣೇಶ ಅಮೀನಗಡ ಇದ್ದರು.

ಕಲಬುರಗಿ ರಂಗಾಯಣ ಕಲಾವಿದರುಜಗದೀಶ್ ಆರ್. ಜಾಣಿ ನಿರ್ದೇಶನದ ‘ಬಿಚ್ಚಿದ ಜೋಳಿಗೆ’ ನಾಟಕವನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT